ಬ್ರಹ್ಮಾವರ: ಶತಮಾನಗಳಿಂದ ಕೃಷಿಯನ್ನು ನಂಬಿ ಬಂದಿರುವ ಜನರು ಕೃಷಿಯನ್ನು ಮರೆಯುವುದು ಸರಿಯಲ್ಲ ಎಂದು ಕೃಷಿಕ ಶ್ರೀನಿವಾಸ ಉಡುಪ ಹೇಳಿದರು.
ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಜನಸೇವಾ ಟ್ರಸ್ಟ್ ವತಿಯಿಂದ ಮಾಬುಕಳ ಕುಮ್ರಗೋಡು ಸಿದ್ಧಿವಿನಾಯಕ ದೇವಸ್ಥಾನದ ಸನ್ನಿಧಿಯಲ್ಲಿ ಗುರುವಾರ ನಡೆದ ಗಂಗಾಬನಿ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
‘ನಮ್ಮ ಜೀವನಾಡಿ ನೀರನ್ನು ಪ್ರತಿಯೊಬ್ಬರು ಗೌರವಿಸಬೇಕು. ಬಹಳ ಹಿಂದಿನಿಂದಲೂ ನೀರು ತುಂಬಿ ಬಂದಾಗ ಪೂಜಿಸುವ ಕ್ರಮ ಇದೆ. ನಮ್ಮ ಹಿರಿಯರು ಗಂಗೆಗೆ ಬಾಗಿನ ಅರ್ಪಿಸುತ್ತ ಬಂದಿದ್ದಾರೆ. ನೀರು ತುಂಬಿ ಬಂದಾಗ ಭಕ್ತಿಯಿಂದ ಪೂಜಿಸುವ ಕ್ರಮಕ್ಕೆ ಗಂಗಾಬನಿ ಅಂತ ಕರೆಯುತ್ತಾರೆ’ ಎಂದು ಅವರು ತಿಳಿಸಿ ಕುಂದಾಪ್ರ ಭಾಷೆಯ ಬಗ್ಗೆ ತಿಳಿಸಿದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ ಶೆಟ್ಟಿ ಮಾತನಾಡಿ, ಕುಂದಾಪ್ರ ಕನ್ನಡ ಭಾಷೆಯಲ್ಲ, ಬದುಕು ಎಂದು ನಾವು ಭಾವಿಸಿದ್ದೇವೆ. ಆದರೆ, ಎಲ್ಲೆಲ್ಲೋ ಹೋಗಿ ದುಡಿದು ಬದುಕು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಹುಟ್ಟಿ ಬೆಳೆದು ಸ್ಥಾನಮಾನ ನೀಡಿದ ಊರಿನ ಭಾಷೆಯನ್ನು ಮರೆಯುವುದು ಸರಿಯಲ್ಲ. ನಮ್ಮ ಮಕ್ಕಳಿಗೆ ನಮ್ಮ ಭಾಷೆಯನ್ನು ಕಲಿಸಿಕೊಡಬೇಕಾಗಿದೆ. ಮಕ್ಕಳು, ಮೊಮ್ಮಕ್ಕಳು ಊರಿಗೆ ಬಂದು ಇಂಗ್ಲಿಷ್ ಮಾತನಾಡುತ್ತಾರೆ. ಇಲ್ಲಿರುವ ಅಜ್ಜ– ಅಜ್ಜಿಯಂದಿರು ಇಂಗ್ಲಿಷ್ ಕಲಿಯುವ ಸ್ಥಿತಿ ಬಂದಿದೆ. ಬದುಕಿಗಾಗಿ ಬೇರೆ ಕಡೆ ಹೋದರೂ ಆ ಬದುಕಿನೊಂದಿಗೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಹೇಳಿದರು.
ಮನು ಹಂದಾಡಿ, ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಪೂಜಾರಿ, ನಟ ಪ್ರಭಾಕರ ಕುಂದರ್ ಮಾಬುಕಳ ಮಾತನಾಡಿದರು.
ಜನಸೇವಾ ಟ್ರಸ್ಟ್‌ನ ವಸಂತ್ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾನಾಡಿದರು. ಸುರೇಶ ಕುಮಾರ್ ಕುಮ್ರಗೋಡು ಸ್ವಾಗತಿಸಿದರು. ಸುನಿಲ್ ಪಾಂಡೇಶ್ವರ ವಂದಿಸಿದರು. ರಾಘವೇಂದ್ರ ರಾಜ್ ಸಾಸ್ತಾನ ನಿರೂಪಿಸಿದರು. ಮಾಬುಕಳ ಹೊಳೆಯಲ್ಲಿ ಬಾಗಿನ ಅರ್ಪಿಸಲಾಯಿತು.
ಭಾಷೆ ಉಳಿಯಬೇಕಾದಲ್ಲಿ ಈ ನೆಲದ ಪ್ರತಿಯೊಬ್ಬರೂ ಕುಂದಾಪ್ರ ಕನ್ನಡವನ್ನು ಅಭಿಮಾನದಿಂದ ಮಾತನಾಡಬೇಕು.ಮನು ಹಂದಾಡಿ ಶಿಕ್ಷಕ
ಜಗತ್ತಿಗೆ ಕುಂದಾಪ್ರ ಕನ್ನಡ ಪರಿಚಯಿಸಿದ ಕೀರ್ತಿ ಟೀಂ ಅಭಿಮತಕ್ಕೆ ಸಲ್ಲುತ್ತದೆ. ನಾವು ಎಲ್ಲಿಯೇ ವಾಸಿಸಲಿ ನಮ್ಮ ನೆಲದ ಭಾಷೆಯ ಬಗ್ಗೆ ಅಭಿಮಾನ ಹೊಂದಿ ಮಾತನಾಡುತ್ತ ಹೋದಲ್ಲಿ ನಮ್ಮ ಭಾಷೆಯೂ ಬೆಳೆಯುತ್ತದೆ ಎಂದು ವಕೀಲ ಬೈಕಾಡಿ ಸುಪ್ರಸಾದ ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.