ADVERTISEMENT

ವಿಶ್ವ ಕುಂದಾಪ್ರ ಕನ್ನಡ ದಿನ | ಕುಂದಾಪುರ ನನ್ನ ಕರ್ಮಭೂಮಿ: ಎಸ್‌ಪಿ ಹರಿರಾಂ ಶಂಕರ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:39 IST
Last Updated 21 ಜುಲೈ 2025, 2:39 IST
ಕುಂದಾಪುರದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಗ್ರಾಮೀಣ ಕ್ರೀಡಾಕೂಟ ‘ಲಗೋರಿ’ ಉದ್ಘಾಟಿಸಲಾಯಿತು
ಕುಂದಾಪುರದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಗ್ರಾಮೀಣ ಕ್ರೀಡಾಕೂಟ ‘ಲಗೋರಿ’ ಉದ್ಘಾಟಿಸಲಾಯಿತು   

ಕುಂದಾಪುರ: ‘ನನ್ನ ಹುಟ್ಟೂರು ತ್ರಿಶೂರ್ ಆಗಿದ್ದರೂ, ಕರ್ಮಭೂಮಿಯಾಗಿರುವ ಕುಂದಾಪುರ ಎಂದರೆ ನನ್ನ ಹುಟ್ಟೂರು ಎನ್ನುವ ಭಾವನೆ ನನ್ನಲ್ಲಿ ಶಾಶ್ವತವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.

ವಿಶ್ವ ಕುಂದಾಪ್ರ ಕನ್ನಡ ದಿನದ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಇಲ್ಲಿನ ಬೋರ್ಡ್ ಹೈಸ್ಕೂಲಿನ ಮೈದಾನದಲ್ಲಿ ಭಾನುವಾರ ನಡೆದ 2ನೇ ವರ್ಷದ ‘ಲಗೋರಿ’ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ತನಗೆ ಕನ್ನಡ ಕಲಿಸಿದ ಕುಂದಾಪುರಕ್ಕೆ ಪ್ರತಿ ಬಾರಿ ಬರುವಾಗಲೂ ನನ್ನ ತಂದೆ- ತಾಯಿಯ ಊರಿಗೆ ಬರುತ್ತಿದ್ದೇನೆ ಅನ್ನುವ ಭಾವ ನನ್ನದು. ನನ್ನ ಆಡು ಭಾಷೆಯಲ್ಲಿಯೂ ಕುಂದಾಪ್ರ ಭಾಷೆಯ ಅನೇಕ ಶಬ್ದಗಳು ಹಾಸು ಹೊಕ್ಕಾಗಿದೆ. ಹಾಗಾಗಿ ಈ ಊರೆಂದರೆ ವಿಶೇಷ ಅಕ್ಕರೆ ನನಗೆ. ಇಲ್ಲಿ ಯಾವ ಕಾರ್ಯಕ್ರಮಕ್ಕೆ ಕರೆದರೂ, ಇಲ್ಲಿಗೆ ಬರಬೇಕು ಅನ್ನಿಸುತ್ತದೆ. ಒಳ್ಳೆಯ ಮನಸ್ಸಿಗರು ಇರುವ ಊರಿದು. ಕೇರಳದಲ್ಲಿ ತ್ರಿಶ್ಯೂರು ಭಾಗದ ಮಲಯಾಳಿ ಭಾಷೆಗೆ ವಿಶೇಷ ಪ್ರಾಧಾನ್ಯತೆ ಇರುವಂತೆ, ಕರ್ನಾಟಕದಲ್ಲಿ ಕುಂದಾಪ್ರ ಕನ್ನಡಕ್ಕೆ ವಿಶೇಷ ಸಾಹಿತ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇದೆ’ ಎಂದರು.

ADVERTISEMENT

ಕುಂದಗನ್ನಡ ಅಧ್ಯಯನ ಪೀಠದ ಸದಸ್ಯ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ‘ಕ್ರೀಡಾಕೂಟಗಳು ಭಾವನೆಗಳನ್ನು ಬೆಸೆದು ಎಲ್ಲರನ್ನು ಒಗ್ಗೂಡಿಸುತ್ತದೆ. ನಾಡಗೀತೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರು ಜಾತಿ-ಮತಗಳನ್ನು ಮೀರಿದ ಭಾವೈಕ್ಯತೆಯ, ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ ಎಂದಿದ್ದಾರೆ. ಇಂತಹ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಹಾಗೂ ನಮ್ಮ ಅಬ್ಬಿ ಭಾಷೆಗಳನ್ನು ಮಾತನಾಡುವುದರಿಂದ ಮಕ್ಕಳಲ್ಲಿ ಒಳ್ಳೆಯ ಭಾವನೆ ಬೆಳೆದು ಭಾಷೆಗಳು ಅಭಿವೃದ್ಧಿಯಾಗುತ್ತದೆ. ಕಲಾಕ್ಷೇತ್ರದವರು ಇನಿದನಿ, ಲಗೋರಿ ಕ್ರೀಡಾಕೂಟದಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಜನಮಾನಸದಲ್ಲಿ ಉಳಿದಿದ್ದಾರೆ’ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಮಾತನಾಡಿ, ‘ಜನರಿಗೆ ಬೇಕಾದ ಕಾರ್ಯಕ್ರಮ ನೀಡಿದಾಗ ಮಾತ್ರ ಪ್ರತಿ ಕಾರ್ಯಕ್ರಮ ಹೆಜ್ಜೆ ಗುರುತನ್ನು ಮೂಡಿಸುತ್ತದೆ. ಕುಂದಾಪ್ರ ಭಾಷಿ ಬೆಳೆಯಬೇಕು, ಇಲ್ಲಿನ ಸಂಸ್ಕೃತಿ ಉಳಿಯಬೇಕು ಎನ್ನುವ ಸದುದ್ದೇಶದಿಂದ ಕಳೆದ ವರ್ಷ ಸಂಘಟಿಸಿದ ಲಗೋರಿ ಕ್ರೀಡಾಕೂಟ ಅತ್ಯದ್ಭುತ ಯಶಸ್ಸು ಕಂಡಿತ್ತು. ಕುಂದಾಪ್ರ ಕನ್ನಡ ಭಾಷೆ ಅರಿಯದವರು ಸಹ ಈ ಭಾಷೆಯನ್ನು ಇಷ್ಟ ಪಡುತ್ತಿದ್ದಾರೆ ಎನ್ನುವುದೇ ಈ ಭಾಷೆಯ ವಿಶೇಷ ಸಂಕೇತ’ ಎಂದರು.

ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ್ ಕೆ.ಸಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ಪುತ್ರನ್, ಎಸ್‌ಬಿಐ ಬ್ಯಾಂಕಿನ ಕಾರವಾರದ ಪ್ರಾದೇಶಿಕ ಪ್ರಬಂಧಕ ಮುರಳೀಧರ್, ಯುವಜನಾ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಲಯನ್ಸ್ ಜಿಲ್ಲಾ ದ್ವಿತೀಯ ಉಪಗವರ್ನರ್ ರಾಜೀವ ಕೋಟ್ಯಾನ್, ಬೈಂದೂರು ಕಂಬಳ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೋರ್ಡ್ ಹೈಸ್ಕೂಲ್‌ನ ಉಪ ಪ್ರಾಂಶುಪಾಲ ಕಿರಣ್ ಹೆಗ್ಡೆ, ಉಪನ್ಯಾಸಕ ಉದಯಕುಮಾರ್ ಶೆಟ್ಟಿ ಇದ್ದರು.

ಕಲಾಕ್ಷೇತ್ರದ ರಾಜೇಶ್ ಕಾವೇರಿ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಲಗೋರಿ ಸ್ತಂಭಕ್ಕೆ ಚೆಂಡು ಹೊಡೆಯುವ ಮೂಲಕ ಎಸ್‌ಪಿ ಹರಿರಾಂ ಶಂಕರ್ ಹಾಗೂ ಕೆ.ಜಯಪ್ರಕಾಶ್ ಹೆಗ್ಡೆ ಅವರು ಪಂದ್ಯಾಟಗಳಿಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.