ADVERTISEMENT

ಕಿವುಡರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ: ಕೆರಾಡಿಯ ಸನಿತ್ ಶೆಟ್ಟಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 2:35 IST
Last Updated 9 ಜನವರಿ 2026, 2:35 IST
ಸನಿತ್ ಶೆಟ್ಟಿ 
ಸನಿತ್ ಶೆಟ್ಟಿ    

ಕುಂದಾಪುರ: ಕೆರಾಡಿಯ ಸನಿತ್ ಶೆಟ್ಟಿ ಅವರು ಕಿವುಡರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕೆರಾಡಿಯ ಸುರೇಂದ್ರ ಶೆಟ್ಟಿ, ಶ್ರೀಮತಿ ಶೆಟ್ಟಿ ದಂಪತಿ ಪುತ್ರರಾಗಿರುವ ಸನಿತ್ ಶೆಟ್ಟಿ ಅವರಿಗೆ ಹುಟ್ಟಿನಿಂದಲೂ  ಶ್ರವಣ ದೋಷವಿತ್ತು. ಅವರು ಬಿಸಿಎ ಪದವೀಧರರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸನಿತ್ ಅವರ ತಂದೆ ಸುರೇಂದ್ರ ಶೆಟ್ಟಿ ರಿಕ್ಷಾ ಚಾಲಕರಾಗಿದ್ದಾರೆ.

ಭಾರತೀಯ ಕಿವುಡರ ಕ್ರಿಕೆಟ್ ಅಸೋಸಿಯೇಷನ್ ಪುರುಷರ ಆಯ್ಕೆ ಸಮಿತಿ ಪ್ರಕಟಿಸಿರುವ 16 ಮಂದಿಯ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ADVERTISEMENT

ಸನಿತ್ ಆಲ್ ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಕನ್ನಡಿಗನಾಗಿದ್ದಾರೆ. ಹಿಮಾಚಲ ಪ್ರದೇಶದ ವೀರೇಂದರ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಫೆ. 18ರಿಂದ 25ವರೆಗೆ ಒಡಿಶಾದ ಕಟಕ್‌ನಲ್ಲಿರುವ ಬಾರಬತಿ ಕ್ರೀಡಾಂಗಣದಲ್ಲಿ ಕಿವುಡರ ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಫೆ. 14ರಿಂದ 17ವರೆಗೆ ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯಗಳು ನಡೆಯಲಿವೆ.

‘ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ, ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ ಇತ್ತು. ನಿರೀಕ್ಷೆ ಫಲಿಸಿದ್ದು, ಭಾರತದ ಪರ ಆಡುವ ಕನಸು ನನಸಾಗುತ್ತಿದೆ. ಸಾಧನೆಗೆ ಸಹಕರಿಸಿದ ಹೆತ್ತವರು, ಗುರುಗಳು ಹಾಗೂ ಎಲ್ಲರಿಗೂ ಕೃತಜ್ಞತೆಗಳು’ ಎಂದು ಸನಿತ್ ಶೆಟ್ಟಿ ಹೇಳಿದ್ದಾರೆ.

ಸನಿತ್ ಶೆಟ್ಟಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.