ADVERTISEMENT

Kundapura Rains | ಸರ್ವಿಸ್ ರಸ್ತೆಯಲ್ಲಿ ಮತ್ತದೆ ಗೋಳು

ಕುಂದಾಪುರ: ಮಳೆರಾಯನ ಆಗಮನದಿಂದ ಕೆರೆಯಂತಾದ ರಸ್ತೆಗಳು

ಕೆ.ಸಿ.ರಾಜೇಶ್‌
Published 26 ಮೇ 2025, 6:11 IST
Last Updated 26 ಮೇ 2025, 6:11 IST
ಕುಂದಾಪುರ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವ ದ್ವಿಚಕ್ರ ಸವಾರರು.
ಕುಂದಾಪುರ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವ ದ್ವಿಚಕ್ರ ಸವಾರರು.   

ಕುಂದಾಪುರ: ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ಬಾರಿ ಮಳೆಗಾಲ ಆರಂಭವಾದಾಗಲೂ ಸುದ್ದಿಯಾಗುತ್ತಿರುವ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಗಳು ಈ ಬಾರಿಯೂ ಮತ್ತದೆ ರೀತಿಯಲ್ಲಿ ಸುದ್ದಿಯಾಗುತ್ತಿವೆ.

ರಸ್ತೆಯ ಎಲ್ಲೆಂದರಲ್ಲಿ ನೆರೆಯಂತೆ ನಿಂತಿರುವ ಕೊಳಕು ನೀರಿನಲ್ಲಿ ಸಾಗುವ ವಾಹನ ಸವಾರರು, ದಾರಿಹೋಕರು ಹೆದ್ದಾರಿ ಇಲಾಖೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಶಾಸ್ತ್ರಿ ಸರ್ಕಲ್‌ನ ಎದುರಿನಲ್ಲಿ ಸಾಗುವ ಹೆದ್ದಾರಿಯ ಫ್ಲೈ ಓವರ್‌ನ ಇಕ್ಕೆಲಗಳಲ್ಲಿ ನಿರ್ಮಾಣವಾಗಿರುವ ಸರ್ವಿಸ್ ರಸ್ತೆಗಳು ಪ್ರತಿ ಮಳೆಗಾಲದಲ್ಲಿ ಒಂದಲ್ಲ ಒಂದು ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಿವೆ. ಸರ್ವಿಸ್ ರಸ್ತೆಯ ಮೇಲ್ಭಾಗದಲ್ಲಿ ಸಂಗ್ರಹವಾಗುವ ಭಾರಿ ಪ್ರಮಾಣದ ನೀರು ಹರಿದು ಹೋಗಲು ನಿರ್ಮಿಸಿರುವ ಕ್ರಾಂಕ್ರೀಟ್ ತೋಡುಗಳು ಅವೈಜ್ಞಾನಿಕವಾಗಿದ್ದು, ಈ ತೋಡುಗಳಲ್ಲಿ ನೀರಿನ ಸುಗಮ ಸಂಚಾರವಾಗುತ್ತಿಲ್ಲ. ಸರ್ವಿಸ್ ರಸ್ತೆಯ ಮೇಲ್ಮೈ ಜಲಮಟ್ಟಕ್ಕೆ ಸಮಾನವಾಗಿರದೆ ಇರುವುದರಿಂದ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ವಿನಾಯಕ ಟಾಕೀಸ್‌ವರೆಗೂ ಗುಂಡಿಗಳಲ್ಲಿ ನೀರು ನಿಲ್ಲುತ್ತಿವೆ. ಫ್ಲೈ ಓವರ್‌, ಎಂಬ್ಯಾಕ್‌ಮೆಂಟ್ ಮೇಲಿನ ರಸ್ತೆಗಳಲ್ಲಿ ಸಂಗ್ರಹವಾಗುವ ನೀರು, ಸರ್ವಿಸ್ ರಸ್ತೆಗೆ ಹರಿದು ಬರುವುದರಿಂದ, ಸಣ್ಣ ಮಳೆಗೂ ಸರ್ವಿಸ್ ರಸ್ತೆಯಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಸರ್ವಿಸ್ ರಸ್ತೆಯಲ್ಲಿ ಹೋಗುವ ಎಲ್ಲ ವಾಹನಗಳ ಮೇಲೂ ನೀರಿನ ಅಭಿಷೇಕವಾಗುತ್ತದೆ.

ADVERTISEMENT

ಸರ್ವಿಸ್ ರಸ್ತೆಯ ಮೇಲೆ ನೀರು ನಿಂತು ಸಮಸ್ಯೆಗಳು ಉಲ್ಬಣವಾಗಿ ಸುದ್ದಿಯಾದಾಗ, ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ಆಶ್ವಾಸನೆ ನೀಡಿ ಹೋಗುತ್ತಾರೆ ಹೊರತು ಸಮಸ್ಯೆ ಪರಿಹರಿಸುವುದಿಲ್ಲ. ಸಂಸದರು, ಜಿಲ್ಲಾ ಮಟ್ಟದ ಅಧಿಕಾರಿಗಳು ‌ಭೇಟಿ ನೀಡಿ ಪರಿಶೀಲಿಸಿ, ಪರಿಹಾರಕ್ಕೆ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ. ಬಸ್ರೂರು ಮೂರುಕೈ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ, ಹೋಟೇಲ್ ಯುವ ಮನೀಶ್, ಟಿ.ಟಿ ರಸ್ತೆ ಅಂಡರ್ ಪಾಸ್ ಹಾಗೂ ಶಾಂತಿ ನಿಕೇತನ್ ಬಳಿಯಲ್ಲಿನ ಸರ್ವಿಸ್ ರಸ್ತೆಯಲ್ಲಿ ನಿಂತಿರುವ ನೀರು ಹೆದ್ದಾರಿ ಇಲಾಖೆಯ ಜನಪರ ಕಾಳಜಿಗೆ ಕೈಗನ್ನಡಿಯಾಗಿದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.