
ಕುಂದಾಪುರ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸಂಭವಿಸುತ್ತಿರುವ ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟಿಪ್ಪರ್ ಹಾಗೂ ಗಣಿ ಸಂಬಂಧಿತ ವಸ್ತುಗಳ ಸಾಗಾಟ ಮಾಡುವ ವಾಹನಗಳೇ ಇರುವುದರಿಂದ ಈ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಕಡ್ಡಾಯ ಅಳವಡಿಸುವಂತೆ ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಸೇರಿದಂತೆ ಹಲವು ಕಡೆಗಳಿಂದ ಹಕ್ಕೊತ್ತಾಯಗಳು ಕೇಳಿ ಬಂದ ಕಾರಣ ಜಿಲ್ಲಾಡಳಿತ ಈ ಆದೇಶ ಜಾರಿಗೊಳಿಸಿದೆ.
ಸೋಮವಾರ ಸಂಜೆ ತಾಲ್ಲೂಕಿನ ಕೆಂಚನೂರು ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಸಂಭವಿಸಿದ ಟಿಪ್ಪರ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವಿನ ಅಪಘಾತದಲ್ಲಿ ಶಾಲಾ– ಕಾಲೇಜು ವಿದ್ಯಾರ್ಥಿಗಳು ಸೇರಿ 18ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿತ್ತು.
ಮೂವರು ಪ್ರಯಾಣಿಕರು ಇನ್ನೂ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಇಬ್ಬರು ವಿದ್ಯಾರ್ಥಿನಿಯರಿದ್ದಾರೆ. ಈ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ಸಾಮಾಜಿಕ ಕಳಕಳಿಯುಳ್ಳವರು ಟಿಪ್ಪರ್, ಗಣಿ ಸಂಬಂಧಿತ ವಾಹನಗಳ ವೇಗಕ್ಕೆ ಬ್ರೇಕ್ ಹಾಕುವಂತೆ ಒಕ್ಕೂರಲ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ವ್ಯಕ್ತಪಡಿಸಿದ್ದರು. ಬುಧವಾರ ಬೆಳಿಗ್ಗೆ ಜಿಲ್ಲಾಡಳಿತ ಈ ಕುರಿತು ತೀರ್ಮಾನ ಕೈಗೊಂಡಿದೆ.
ಮರಳು, ಕೆಂಪು ಕಲ್ಲು, ಶಿಲೆ ಕಲ್ಲು, ಜೇಡಿ ಮಣ್ಣು, ಮಣ್ಣು ಮುಂತಾದ ಗಣಿ ಸಂಬಂಧಿತ ಕಟ್ಟಡ ನಿರ್ಮಾಣ ವಸ್ತುಗಳ ಸಾಗಾಟ ಮಾಡುವ ಟಿಪ್ಪರ್ ಹಾಗೂ ಇದೇ ಮಾದರಿಯ ಸಾಗಾಟ ವಾಹನಗಳಲ್ಲಿ ಬೆರಳೆಣಿಕೆಯ ವಾಹನಗಳನ್ನು ಹೊರತುಪಡಿಸಿದರೆ, ಉಳಿದ ವಾಹನಗಳ ವೇಗಕ್ಕೆ ಮಿತಿಯೇ ಇಲ್ಲ ಎಂದು ಜನರು ದೂರಿದ್ದಾರೆ.
ಟ್ರಿಪ್‌ಗಳ ಗುರಿ ಮುಟ್ಟಿಸಬೇಕು ಎನ್ನುವ ಕಾರಣ ಒಂದಾದರೆ, ಎಷ್ಟು ಬೇಗ ಮನೆ ಸೇರಿಕೊಳ್ಳುತ್ತೇವೆ ಎನ್ನುವ ಧಾವಂತ ಇನ್ನೊಂದೆಡೆ. ಎತ್ತರದಲ್ಲಿ ಕುಳಿತುಕೊಳ್ಳುವ ಟಿಪ್ಪರ್ ಚಾಲಕರಿಗೆ ರಸ್ತೆಯಲ್ಲಿ ಹಿಂದೆ– ಮುಂದೆ ಸಾಗುವ ಸಣ್ಣ ವಾಹನಗಳ ಸವಾರರು ಕಣ್ಣಿಗೆ ಕಾಣುವುದೇ ಇಲ್ಲ ಎನ್ನುತ್ತಾರೆ ಜನರು.
ಗಣಿ ಸಂಬಂಧಿತ ಕಟ್ಟಡ ನಿರ್ಮಾಣ ವಸ್ತುಗಳ ಸಾಗಾಟ ಮಾಡುವ ಸಾರಿಗೆ ವಾಹನಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ವಾಹನಗಳ ಸಾಗಾಟ ವಸ್ತುಗಳನ್ನು ಮುಚ್ಚಿ ಸಾಗಿಸಬೇಕು, ಅನಗತ್ಯ ಓವರ್‌ಟೇಕ್ ಮಾಡಬಾರದು, ವೇಗ ನಿಯಂತ್ರಣ ಪಾಲಿಸಬೇಕು, ಸಾರಿಗೆ ನಿಯಮಗಳ ಕಡ್ಡಾಯ ಪಾಲನೆ ಅಗತ್ಯ ಮುಂತಾದ ನಿಯಮಗಳಿದ್ದರೂ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಪಘಾತಗಳ ಕುರಿತು ಪೊಲೀಸರು ತನಿಖೆ ನಡೆಸುವಾಗ ಚಾಲನಾ ಪರವಾನಗಿ ಇಲ್ಲದೆ ಇರುವುದು, ವಾಹನದ ವಿಮಾ ಕಂತು ಪಾವತಿ ಮಾಡದೆ ಇರುವುದು, ವಿಮಾ ನವೀಕರಣ ಮಾಡದೆ ಇರುವುದು, ತೆರಿಗೆ ಪಾವತಿ ಮಾಡದೆ ಇರುವುದು, ಅಂತರ ರಾಜ್ಯ ವರ್ಗಾವಣೆಯಾಗದೆ ಇರುವುದು ಸೇರಿ ಹಲವು ನೂನ್ಯತೆಗಳು ಪತ್ತೆಯಾಗುತ್ತಿವೆ.
ಕೆಲವು ಇಕ್ಕಟ್ಟಾದ ರಸ್ತೆಗಳ ಬದಿಯಲ್ಲಿ ಬೆಳೆದು ನಿಂತಿರುವ ಭಾರಿ ಗಾತ್ರದ ಮರಗಳಿಂದ ಹಾಗೂ ರಸ್ತೆಯ ದುರವಸ್ಥೆಗಳಿಂದಲೂ ಅಪಘಾತಗಳು ವರದಿಯಾಗುತ್ತಿದೆ. ಮೊನ್ನೆ ಶೆಟ್ರಕಟ್ಟೆ ಬಳಿ ನಡೆದ ಅಪಘಾತದ ವೇಳೆ ಬಸ್‌ನ ಚಾಲಕ ಟಿಪ್ಪರ್ ಬರುತ್ತಿದ್ದ ವೇಗ ನೋಡಿ, ಸಾಕಷ್ಟು ಬದಿಗೆ ಬಸ್ ಕೊಂಡೊಯ್ಯುವ ಪ್ರಯತ್ನ ಮಾಡಿದರೂ, ರಸ್ತೆ ಬದಿಯಲ್ಲಿದ್ದ ಭಾರಿ ಗಾತ್ರದ ಮರಗಳಿಂದಾಗಿ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಪರಿಸರ ಪ್ರೇಮಿಗಳಿಂದ ಅರಣ್ಯ ಇಲಾಖೆಯ ಮೇಲೆ ಒತ್ತಡ ಇರುವುದರಿಂದ ಇಲ್ಲಿನ ಮರಗಳನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹೆದ್ದಾರಿಗಳ ನಿರ್ಮಾಣದ ವೇಳೆ ಕೈಗೊಳ್ಳುವ ನಿರ್ಧಾರದಂತೆ ಗ್ರಾಮೀಣ ಭಾಗದಲ್ಲಿಯೂ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುವ ಮರಗಳ ಸ್ಥಳಾಂತರ ಅಥವಾ ತೆರವಿಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.