
ಉಡುಪಿ: ಕೇಂದ್ರ ಸರ್ಕಾರದ ಪ್ರಸಕ್ತ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಅನುಸಾರ ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಮಹಿಳಾ ಕಾರ್ಮಿಕರನ್ನು ಇನ್ನಷ್ಟು ದುರ್ಬಲರನ್ನಾಗಿಸುವಂತೆ ಕಾರ್ಮಿಕ ಸಂಹಿತೆಗಳಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷೆ ಎಂ. ಕಾಮೇಶ್ವರಿ ಹೇಳಿದರು.
ಉಡುಪಿಯ ಲಿಕೋ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ವಿಮಾ ನೌಕರರ ಸಂಘ ಉಡುಪಿ ವಿಭಾಗದ 21ನೇ ವಿಭಾಗೀಯ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಹಿಳಾ ಕಾರ್ಮಿಕರು ಒಗ್ಗಟ್ಟಾಗಿ ಅಂತಹ ನೀತಿಗಳನ್ನು ಸೋಲಿಸಬೇಕು ಎಂದು ಹೇಳಿದರು.
ಭಾರತದ ಈಚಿನ ಆರ್ಥಿಕ ಸರ್ವೇಕ್ಷಣೆಯ ಪ್ರಕಾರ ಶೇಕಡಾ 40ರಷ್ಟು ಮಹಿಳೆಯರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದು, ಶೇಕಡಾ 7ರಷ್ಟು ಮಹಿಳೆಯರು ನೈರ್ಮಲ್ಯ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಎಲ್ಲಾ ಅಸಂಘಟಿತ ವಲಯಗಳಲ್ಲಿ ವೇತನ ತಾರತಮ್ಯ, ಮಾಲೀಕ ವರ್ಗದಿಂದ ಕಿರುಕುಳ ಅನುಭವಿಸುತ್ತಿದ್ದಾರೆ ಎಂದರು.
ಸಾಫ್ಟ್‌ವೇರ್ ಉದ್ದಿಮೆಗಳಲ್ಲಿ ದುಡಿಯುವ ಮಹಿಳೆಯು ಗರ್ಭಿಣಿಯಾದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಪರಿಸ್ಥಿತಿ ಇದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯ ಮೇಲೆ ನಿರಂತರ ಶೋಷಣೆಗಳು ನಡೆಯುತ್ತಿವೆ ಎಂದು ಹೇಳಿದರು.
ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ ಮಾತನಾಡಿ, ಇದೇ 12ರಂದು ರಾಷ್ಟ್ರವ್ಯಾಪಿ ನಡೆಯಲಿರುವ ಮುಷ್ಕರವನ್ನು ಯಶಸ್ವಿಗೊಳಿಸಬೇಕು ಎಂದರು.
ಸಂಘದ ಮಹಿಳಾ ಉಪಸಮಿತಿಯ ಸಂಚಾಲಕಿ ನಿರ್ಮಲಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಶಿಲ್ಪಾ ಜೆ. ರೆಬೆಲ್ಲೋ ಅವರು ಮಹಿಳಾ ಉಪ ಸಮಿತಿಗೆ ಸಂಚಾಲಕಿಯಾಗಿ ಹಾಗೂ ಸೀತಾಲಕ್ಷ್ಮಿ ಆರ್. ಅವರು ಉಪಸಂಚಾಲಕಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಂಘದ ಕೋಶಾಧಿಕಾರಿ ಕವಿತಾ ಎಸ್. ಭಾಗವಹಿಸಿದ್ದರು. ಶಿಲ್ಪಾ ಜೆ. ರೆಬೆಲ್ಲೊ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.