ADVERTISEMENT

ಸೊರಕೆ ರಾಜಕೀಯ ನಿವೃತ್ತಿ ಪಡೆಯಲಿ: ಕಿಶೋರ್‌ ಕುಮಾರ್‌ ಕುಂದಾಪುರ

ರಾಜ್ಯ ಸರ್ಕಾರದ ಹಗರಣಗಳನ್ನು ಮರೆಮಾಚಲು ಯತ್ನ: ಕಿಶೋರ್ ಕುಮಾರ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 7:09 IST
Last Updated 27 ಜುಲೈ 2024, 7:09 IST
<div class="paragraphs"><p>ಕಿಶೋರ್‌ ಕುಮಾರ್‌ ಕುಂದಾಪುರ</p></div>

ಕಿಶೋರ್‌ ಕುಮಾರ್‌ ಕುಂದಾಪುರ

   

ಉಡುಪಿ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಹಗರಣಗಳನ್ನು ಮರೆಮಾಚುವ ದುರುದ್ದೇಶದಿಂದ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿರುದ್ಧ ಕೀಳು ಮಟ್ಟದ ಅಪಪ್ರಚಾರ ನಡೆಸುತ್ತಿರುವ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನಡೆ ಖಂಡನೀಯ’ ಎಂದು ಬಿಜೆಪಿ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜನರಿಂದ ತಿರಸ್ಕೃತರಾಗಿರುವ ಸೊರಕೆ ಅವರು ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯಲಿ’ ಎಂದರು.

ADVERTISEMENT

ಕಾಂಗ್ರೆಸ್ ಪಕ್ಷದ ಶಾಸಕರಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಎಷ್ಟು ಅನುದಾನ ಬಿಡುಗಡೆಗೊಳಿಸಿದೆ ಮತ್ತು ಅವರು ಕೈಗೊಂಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಸೊರಕೆ ಅವರು ವಿವರ ನೀಡಲಿ ಎಂದು ಒತ್ತಾಯಿಸಿದರು.

ಅಧಿಕಾರದ ಲಾಲಸೆಯಿಂದ ಘೋಷಿಸಿದ ಗ್ಯಾರಂಟಿಗಳನ್ನು ಪೂರೈಸಲಾಗದೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ದಿವಾಳಿತನ ಜಗಜ್ಜಾಹೀರಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಇತರ ಯಾವುದೇ ಅಭಿವೃದ್ಧಿ ಯೋಜನೆಗೆ ಚಿಕ್ಕಾಸನ್ನೂ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ಹುಳುಕನ್ನು ಮುಚ್ಚಿಡಲು ಸೊರಕೆ ಅವರು ಯತ್ನಿಸುತ್ತಿದ್ದಾರೆ ಎಂದರು.

ಕಡಲ್ಕೊರೆತಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಕರೆಸಿ ಪ್ರಯತ್ನ ನಡೆಸಿದ್ದರೂ, ಸರ್ಕಾರ ಒಂದು ನಯಾ ಪೈಸೆಯನ್ನೂ ಮಂಜೂರು ಮಾಡದೇ ಇರುವುದು ದಿವಾಳಿತನಕ್ಕೆ ಸಾಕ್ಷಿ ಎಂದು ಪ್ರತಿಪಾದಿಸಿದರು.

ಕಾಪು ಮಂಡಲಾಧ್ಯಕ್ಷ ಜಿತೇಂದ್ರ ಶೆಟ್ಟಿ, ಪಕ್ಷದ ಜಿಲ್ಲಾ ಘಟಕ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಮಂಡಲ ಉಪಾಧ್ಯಕ್ಷ ಅನಿಲ್ ಕುಮಾರ್, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು , ಮಂಡಲ ವಕ್ತಾರ ನವೀನ್ ಎಸ್.ಕೆ. ಇದ್ದರು.

‘ಹಗರಣ ಮರೆಮಾಚಲು ಥೀಮ್ ಪಾರ್ಕ್ ಗುರಾಣಿ’

ಕಾರ್ಕಳ ತಾಲ್ಲೂಕಿನ ಬೈಲೂರು ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಥೀಮ್ ಪಾರ್ಕ್‌ನ ₹11 ಕೋಟಿ ಯೋಜನಾ ಮೊತ್ತದಲ್ಲಿ ₹6 ಕೋಟಿ ಬಿಡುಗಡೆಯಾಗಿದ್ದು ವ್ಯವಸ್ಥಿತವಾಗಿ ಕೆಲಸ ಕಾರ್ಯಗಳು ನಡೆದಿವೆ. ಆದರೆ ರಾಜ್ಯ ಸರ್ಕಾರವು ತನ್ನ ಭ್ರಷ್ಟಾಚಾರ ಹಗರಣಗಳಿಂದ ನುಣುಚಿಕೊಳ್ಳಲು ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ಗುರಾಣಿಯನ್ನಾಗಿಸುವ ವಿಫಲ ಯತ್ನದಲ್ಲಿ ತೊಡಗಿದೆ ಎಂದು ಕಿಶೋರ್ ಕುಮಾರ್ ತಿಳಿಸಿದರು. ಪರಶುರಾಮ ಥೀಮ್ ಪಾರ್ಕ್ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಒಂದು ವರ್ಷದ ಬಳಿಕ ಯೋಜನೆಯ ಅನುಷ್ಠಾನಾಧಿಕಾರಿ ಎಂದು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿದೆ. ತಮ್ಮದೇ ಸರ್ಕಾರದ ಆಡಳಿತವಿದ್ದರೂ ತ್ವರಿತ ಗತಿಯಲ್ಲಿ ತನಿಖೆ ನಡೆಸಿ ಕಾಮಗಾರಿಯ ಗುಣಮಟ್ಟವನ್ನು ಖಾತರಿಪಡಿಸಿಕೊಂಡು ತಮ್ಮ ಅನುಮಾನವನ್ನು ಪರಿಹರಿಸಿಕೊಳ್ಳಲಾಗದ ಕಾಂಗ್ರೆಸ್ ಮಾಜಿ ಸಚಿವರ ವಿರುದ್ಧ ಸುಳ್ಳು ಆರೋಪವನ್ನು ಜೀವಂತವಾಗಿರಿಸಿ ಜನರ ದಾರಿ ತಪ್ಪಿಸಲು ಹರಸಾಹಸ ಪಡುತ್ತಿದೆ ಎಂದರು. ಜನರು ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.