ADVERTISEMENT

ಕಠಿಣ ಲಾಕ್‌ಡೌನ್‌ಗೆ ಉತ್ತಮ ಸ್ಪಂದನ

ನಿಯಮ ಉಲ್ಲಂಘಿಸಿ ರಸ್ತೆಗಿಳಿದ 117 ವಾಹನಗಳ ವಶ, 14 ಮಂದಿಯ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 10 ಮೇ 2021, 15:25 IST
Last Updated 10 ಮೇ 2021, 15:25 IST
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನಗಳಲ್ಲಿ ಬಂದ ಸಾರ್ವಜನಿಕರನ್ನು ಅಡ್ಡಗಟ್ಟಿ ದಂಡ ವಿಧಿಸುತ್ತಿರುವ ಪೊಲೀಸರು.
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನಗಳಲ್ಲಿ ಬಂದ ಸಾರ್ವಜನಿಕರನ್ನು ಅಡ್ಡಗಟ್ಟಿ ದಂಡ ವಿಧಿಸುತ್ತಿರುವ ಪೊಲೀಸರು.   

ಉಡುಪಿ: ಕೋವಿಡ್‌ 2ನೇ ಅಲೆಯ ನಿಯಂತ್ರಣಕ್ಕೆ 14 ದಿನಗಳ ಕಠಿಣ ಲಾಕ್‌ಡೌನ್‌ ಜಾರಿಯಾಗಿದ್ದು, ಮೊದಲ ದಿನವಾದ ಸೋಮವಾರ ಸಾರ್ವಜನಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಯಿತು.

ಬೆಳಿಗ್ಗೆ 6ರಿಂದ 10ರವರೆಗೆ ತರಕಾರಿ, ಹಣ್ಣು, ಮೀನು, ಮಾಂಸ ಸೇರಿದಂತೆ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು. ನಾಲ್ಕು ತಾಸು ಗಿಜಿಗುಡುತ್ತಿದ್ದ ಮಾರುಕಟ್ಟೆ ಪ್ರದೇಶಗಳು ಬಳಿಕ ಸ್ತಬ್ಧವಾಯಿತು. ರಸ್ತೆಗಳು, ಪ್ರಮುಖ ವೃತ್ತಗಳು ನಿರ್ಜನವಾದವು.

ಅವಧಿ ಮೀರಿದರೂ ಸಂಚರಿಸುತ್ತಿದ್ದವರನ್ನು ಚೆಕ್‌ಪೋಸ್ಟ್‌ಗಳಲ್ಲಿ ತಡೆದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು. ನಿಯಮ ಉಲ್ಲಂಘಿಸಿ ಬೈಕ್ ಹಾಗೂ ಕಾರುಗಳಲ್ಲಿ ಮಾರುಕಟ್ಟೆಗೆ ಬಂದವರಿಗೆ ದಂಡ ವಿಧಿಸಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲಾಯಿತು.

ADVERTISEMENT

ದಂಡದ ಬಿಸಿ

ಉಡುಪಿ ತಾಲ್ಲೂಕಿನಲ್ಲಿ 40 ದ್ವಿಚಕ್ರ ವಾಹನ, 2 ತ್ರಿಚಕ್ರ ವಾಹನ, 7 ಕಾರುಗಳನ್ನು ಮುಟ್ಟುಗೋಲು ಹಾಕಿಕೊಂಡು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಯಿತು. ಕಾರ್ಕಳ ತಾಲ್ಲೂಕಿನಲ್ಲಿ 18 ದ್ವಿಚಕ್ರ‌, 1 ಕಾರನ್ನು ವಶಕ್ಕೆ ಪಡೆದು ನಾಲ್ವರ ವಿರುದ್ಧ ಪ್ರಕರಣ ಹಾಕಲಾಯಿತು. ಕುಂದಾಪುರ ತಾಲ್ಲೂಕಿನಲ್ಲಿ 37 ದ್ವಿಚಕ್ರ ವಾಹನ, 1 ತ್ರಿಚಕ್ರ ವಾಹನ ಹಾಗೂ ನಾಲ್ಕು ಕಾರುಗಳನ್ನು ವಶಕ್ಕೆ ಪಡೆದು 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಯಿತು.

ಒಂದೇ ದಿನ 95 ದ್ವಿಚಕ್ರ ವಾಹನಗಳು, 3 ತ್ರಿಚಕ್ರ ಹಾಗೂ 12 ಕಾರುಗಳನ್ನು ಮುಟ್ಟುಗೋಲು ಹಾಕಿಕೊಂಡು 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಸಾರ್ವಜನಿಕರು ಅನವಶ್ಯಕವಾಗಿ ವಾಹನಗಳನ್ನು ಬಳಸಬಾರದು. ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ವಾಹನ ನಿರ್ಬಂಧಕ್ಕೆ ವಿರೋಧ

ಅಗತ್ಯ ವಸ್ತುಗಳ ಖರೀದಿಗೆ ದ್ವಿಚಕ್ರ ಸೇರಿದಂತೆ ಕಾರುಗಳ ಬಳಕೆಗೆ ನಿರ್ಬಂಧ ಹೇರಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು. ಮನೆಯ ಹತ್ತಿರದ ಅಂಗಡಿಗಳಲ್ಲಿ ದಿನಸಿ ಮಾತ್ರ ಲಭ್ಯವಿದ್ದು, ತರಕಾರಿ, ಹಣ್ಣು ಸಿಗುವುದಿಲ್ಲ. ಮನೆಯಿಂದ ಮಾರುಕಟ್ಟೆ ದೂರವಿದ್ದು, ವೃದ್ಧರು, ಮಹಿಳೆಯರು ನಡೆದುಕೊಂಡು ಬಹಳ ಪ್ರಯಾಸ ಪಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣು ಖರೀದಿಸಲು ಅವಕಾಶವಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ, ಉಡುಪಿಯಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡುವ ಪದ್ಧತಿ ಇಲ್ಲ. ತರಕಾರಿ ಮಾರಾಟ ಮಳಿಗೆಗಳಿಗೆ ತೆರಳಿಯೇ ಖರೀದಿಸಬೇಕು. ದ್ವಿಚಕ್ರ ವಾಹನ ಬಳಕೆಗೆ ಅವಕಾಶ ನೀಡದ ಪರಿಣಾಮ ಮೀನು ಮಾರಾಟ ಮಾಡುವವರೂ ಬರುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡರು.

ವಾಹನಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಇದ್ದರೂ ದ್ವಿಚಕ್ರ ವಾಹನಗಳ ಬಳಕೆಗೆ ಅವಕಾಶ ಇಲ್ಲದ ಕಾರಣ ದಟ್ಟಣೆ ಕಾಣಲಿಲ್ಲ. ಅಂತರ ಜಿಲ್ಲಾ ಸಂಚಾರ ತಡೆಗೆ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿತ್ತು. ನಗರದ ಕೆಎಸ್‌ಆರ್‌ಟಿಸಿ, ಖಾಸಗಿ ಸರ್ವೀಸ್‌ ನಿಲ್ದಾಣ, ನಗರ ಸಾರಿಗೆ ನಿಲ್ದಾಣಗಳು ನಿರ್ಗತಿಕರ, ಭಿಕ್ಷುಕರ ತಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.