ADVERTISEMENT

ಮಲ್ಪೆ: ಮೀನುಗಾರರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲು ಸಂತ್ರಸ್ತೆಯಿಂದ ಮನವಿ

*ಮಲ್ಪೆ ಹಲ್ಲೆ ಪ್ರಕರಣದ ಸಂತ್ರಸ್ತೆಯಿಂದ ಡಿಸಿಗೆ ಮನವಿ * ಶಾಸಕ ಯಶ್‌ಪಾಲ್‌ ಉಪಸ್ಥಿತಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 0:24 IST
Last Updated 25 ಮಾರ್ಚ್ 2025, 0:24 IST
ಉಡುಪಿ ಜಿಲ್ಲಾಧಿಕಾರಿಗೆ ಮಲ್ಪೆ ಬಂದರಿನಲ್ಲಿ ಹಲ್ಲೆಗೊಳಗಾದ ಮಹಿಳೆ ಸೋಮವಾರ ಮನವಿ ಸಲ್ಲಿಸಿದರು. ಸ್ಥಳೀಯ ಬಂಜಾರ ಸಮುದಾಯದವರು, ಶಾಸಕ ಯಶ್‌ಪಾಲ್‌ ಸುವರ್ಣ ಉಪಸ್ಥಿತರಿದ್ದರು
ಉಡುಪಿ ಜಿಲ್ಲಾಧಿಕಾರಿಗೆ ಮಲ್ಪೆ ಬಂದರಿನಲ್ಲಿ ಹಲ್ಲೆಗೊಳಗಾದ ಮಹಿಳೆ ಸೋಮವಾರ ಮನವಿ ಸಲ್ಲಿಸಿದರು. ಸ್ಥಳೀಯ ಬಂಜಾರ ಸಮುದಾಯದವರು, ಶಾಸಕ ಯಶ್‌ಪಾಲ್‌ ಸುವರ್ಣ ಉಪಸ್ಥಿತರಿದ್ದರು   

ಉಡುಪಿ: ‘ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿ ಸಂತ್ರಸ್ತ ಮಹಿಳೆ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಹಲವು ವರ್ಷಗಳಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನಾವು ಉದ್ಯೋಗ ಅರಸಿ ಉಡುಪಿಗೆ ಬಂದಿದ್ದೇವೆ. ಮಲ್ಪೆ ಮೀನುಗಾರರ ಸಂಘದ ಸಹಕಾರದಿಂದ ಬಂದರಿನಲ್ಲಿ ಕೆಲಸ ಮಾಡಿಕೊಂಡು, ನಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿದ್ದೇವೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಈಚೆಗೆ ಆಕಸ್ಮಿಕವಾಗಿ ನಡೆದ ಘಟನೆಯ ಬಗ್ಗೆ ನಮಗೆ ಸತ್ಯಾಸತ್ಯತೆ ತಿಳಿದಿದೆ. ನಮ್ಮ ಸಮುದಾಯದ ಪ್ರಮುಖರು ಹಾಗೂ ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಸಮಸ್ಯೆಯನ್ನು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಂಡಿದ್ದೇವೆ’ ಎಂದೂ ಸಂತ್ರಸ್ತ ಮಹಿಳೆ  ಹೇಳಿದ್ದಾರೆ.

ADVERTISEMENT

‘ಈಗಾಗಲೇ ಶಾಸಕ ಯಶ್‌ಪಾಲ್‌ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳು ಹಾಗೂ ನಮ್ಮ ಸಮುದಾಯದ ಮುಖಂಡರು ಸಭೆ ನಡೆಸಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುವ ಬಗ್ಗೆ ಹಾಗೂ ಹಿಂದಿನಂತೆ ಸೌಹಾರ್ದಯುತವಾಗಿ ಮೀನುಗಾರಿಕಾ ಚಟುವಟಿಕೆ ನಡೆಸಲು ಸಹಕಾರ ನೀಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

‘ಮುಗ್ದ ಮೀನುಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದು, ನಮ್ಮಂತಹ ಬಡ ಕಾರ್ಮಿಕರಿಗೆ ಸೌಹಾರ್ದಯುತವಾಗಿ ಕೆಲಸ ಮಾಡಿ ಉತ್ತಮ ಜಿವನ ನಡೆಸಲು ಅವಕಾಶ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಬಂಜಾರ ಸಮುದಾಯದ ಸ್ಥಳೀಯ ಮುಖಂಡರು ಹಾಗೂ ಬಂಜಾರ ಸಮಾಜದ ಮಹಿಳೆಯರು, ಶಾಸಕ ಯಶ್‌ಪಾಲ್‌ ಸುವರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾ.18ರಂದು ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವೈಭವೀಕರಣ: ‘ಹಲ್ಲೆ ನಡೆದಿರುವುದು ಆಕಸ್ಮಿಕ ಘಟನೆ. ರಾಜಿ ಸಂಧಾನ ಮಾಡಿದ್ದೇವೆ ಎಂದು ಸಂತ್ರಸ್ತೆ ಕೂಡ ಹೇಳಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಘಟನೆಯನ್ನು ವೈಭವೀಕರಿಸಲಾಗಿದೆ’ ಎಂದು ಬಂಜಾರ ಸಮುದಾಯದ ಗೋರ್ ಮಳಾವ್ ಸಂಘಟನೆಯ ಕಾರ್ಯದರ್ಶಿ ಜಯಸಿಂಹ ಹೇಳಿದರು.

‘ಪ್ರಮೋದ್‌ರನ್ನು ಬಂಧಿಸಿ’

ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣವನ್ನು ಸಮರ್ಥಿಸಿಕೊಂಡು ಪ್ರಚೋದನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯ ಘಟಕ ಅಧ್ಯಕ್ಷ ಗಿರೀಶ್ ಡಿ.ಆರ್. ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ಮಲ್ಪೆಯಲ್ಲಿ ನಡೆದ ಮೀನುಗಾರಿಕಾ ಸಂಘದ ಸಭೆಯಲ್ಲಿ ಪ್ರಮೋದ್ ಮಧ್ವರಾಜ್ ಅವರು ‘ತಪ್ಪು ಮಾಡಿದ ಮಹಿಳೆಯನ್ನು ಹೊಡೆದರೆ ತಪ್ಪೇನು? ಆಕೆಯನ್ನು ಮರಕ್ಕೆ ಕಟ್ಟಿ ಹಾಕಿದ್ದು ಸರಿ ಕಟ್ಟಿ ಹಾಕಲೇಬೇಕು’ ಎಂದು ಹೇಳಿಕೆ ನೀಡಿದ್ದು ಅದಕ್ಕೆ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ‘ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿಯವರ ನಿಂದನೆ ಮೊಕದ್ದಮೆ ಅನ್ವಯವಾಗುವುದಿಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅವರೂ ಕ್ಷಮೆ ಯಾಚಿಸಬೇಕು’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪುಷ್ಪಾ ಬಾಯಿ ಮಂಜು ನಾಯ್ಕ್ ಮಂಜುನಾಥ್ ಸುನಿಲ್ ನಾಯ್ಕ್ ಕುಮಾರ್ ನಾಯ್ಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.