ADVERTISEMENT

ಉಡುಪಿ| ಬೀಚ್‌ಗೆ ಪ್ರವಾಸಿಗರ ದಾಂಗುಡಿ: ಜಲಕ್ರೀಡೆ ಮೋಜು

ಜಿಲ್ಲೆಯ ದೇವಾಲಯಗಳಿಗೂ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 4:27 IST
Last Updated 22 ಡಿಸೆಂಬರ್ 2025, 4:27 IST
<div class="paragraphs"><p>ಮಲ್ಪೆ ಬೀಚ್‌ನಲ್ಲಿ ಬೋಟ್ ಪ್ಯಾರಾಸೈಲಿಂಗ್‌</p></div>

ಮಲ್ಪೆ ಬೀಚ್‌ನಲ್ಲಿ ಬೋಟ್ ಪ್ಯಾರಾಸೈಲಿಂಗ್‌

   

ಪ್ರಜಾವಾಣಿ ಚಿತ್ರಗಳು

ಉಡುಪಿ: ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ಮಲ್ಪೆ ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದ್ದು, ಜಲಕ್ರೀಡೆ (ವಾಟರ್‌ ಸ್ಪೋರ್ಟ್ಸ್‌) ಮೊದಲಾದ ಮೋಜಿನ ಕ್ರೀಡೆಗಳು ಗರಿಗೆದರಿವೆ.

ADVERTISEMENT

ಪ್ರತಿ ವರ್ಷವೂ ಕ್ರಿಸ್‌ಮಸ್‌ ರಜೆಯ ಅವಧಿಯಲ್ಲಿ ಜಿಲ್ಲೆಗೆ ಪ್ರವಾಸ ಬರುವ ರಾಜ್ಯದ ವಿವಿಧೆಡೆಯ ಪ್ರವಾಸಿಗರು ಮಲ್ಪೆಯ ಕಡಲ ತೀರಕ್ಕೂ ಭೇಟಿ ನೀಡುತ್ತಾರೆ. ಪ್ರವಾಸಕ್ಕೆ ಬರುವ ಶಾಲಾ ಮಕ್ಕಳನ್ನೂ ಬೀಚ್‌ಗೆ ಕರೆದುಕೊಂಡು ಬರಲಾಗುತ್ತದೆ.

ಮಳೆಗಾಲದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಸ್ತಬ್ಧವಾಗುವ ಈ ಬೀಚ್‌ಗೆ ಅಕ್ಟೋಬರ್‌ನಿಂದ ಪ್ರವಾಸಿಗರು ಬರುತ್ತಾರೆ. ಆ ವೇಳೆಗೆ ಕಡಲಿನ ಅಬ್ಬರವೂ ಕಡಿಮೆಯಾಗಿರುವುದರಿಂದ ಜನರು ನೀರಿಗಿಳಿದು ಸಂಭ್ರಮಿಸುತ್ತಾರೆ.

ಈ ವರ್ಷ ನಿರಂತರ ಮಳೆ ಸುರಿದ ಪರಿಣಾಮವಾಗಿ ಮಲ್ಪೆ ಬೀಚ್‌ನಲ್ಲಿ ವಾಟರ್‌ ಸ್ಪೋರ್ಟ್ಸ್‌ ಚಟುವಟಿಕೆಗಳು ತಡವಾಗಿ ಆರಂಭವಾಗಿದ್ದವು. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಡಲಿನಲ್ಲಿ ಜೆಟ್‌ಸ್ಕೀ, ಟೂರಿಸ್ಟ್‌ ಬೋಟ್‌ ಎಂಜಿನ್‌ಗಳ ಅಬ್ಬರದ ಧ್ವನಿ ಮಾರ್ದನಿಸುತ್ತಿದೆ. ಇವಷ್ಟೇ ಅಲ್ಲದೆ ಬನಾನ ಬೋಟ್‌ ರೈಡ್‌, ಪವರ್‌ ಬೋಟ್‌ ರೈಡ್‌ ಕೂಡ ಪ್ರವಾಸಿಗರಿಗೆ ಮುದ ನೀಡುತ್ತದೆ. ಬೋಟ್‌ ಪ್ಯಾರಾ ಸೈಲಿಂಗ್‌ ನಡೆಸಿಯೂ ಜನರು ಆನಂದ ಪಡುತ್ತಾರೆ.

ರಜಾದಿನಗಳಲ್ಲಿ ಮಲ್ಪೆ ಬೀಚ್‌ಗೆ ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಹಿನ್ನೀರು ಪ್ರದೇಶಗಳಿಗೂ ತೆರಳಿ ಅಲ್ಲಿಯೂ ಬೋಟಿಂಗ್‌ನ ಮೋಜು ಅನುಭವಿಸುತ್ತಾರೆ.

ಮಲ್ಪೆ ಬೀಚ್‌ಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೆಚ್ಚುವರಿ ಲೈಫ್‌ಗಾರ್ಡ್‌ಗಳನ್ನು ನೇಮಕ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೋಟ್‌ ಪ್ಯಾರಾಸೈಲಿಂಗ್‌ ಮೋಜು
ಪ್ರವಾಸಿಗರ ಜೆಟ್‌ಸ್ಕೀ ಸವಾರಿ
ಮಲ್ಪೆ ಬೀಚ್‌ನಲ್ಲಿ ಬೋಟಿಂಗ್‌ ಮಾಡುತ್ತಿರುವ ಪ್ರವಾಸಿಗರು
ಮಲ್ಪೆ ಬೀಚ್‌ಗೆ ಭೇಟಿ ನೀಡಿದ ಪ್ರವಾಸಿಗರು
ಡಿಸೆಂಬರ್‌ ತಿಂಗಳಲ್ಲಿ ಪ್ರತಿವರ್ಷ ನಾವು ದೇವಾಲಯಗಳಿಗೆ ಪ್ರವಾಸ ಬರುತ್ತೇವೆ. ಊರಿಗೆ ಮರಳುವುದಕ್ಕೂ ಮೊದಲು ಮಲ್ಪೆ ಬೀಚ್‌ಗೂ ಭೇಟಿ ನೀಡುತ್ತೇವೆ
ಶಿವಶರಣ ಪ್ರವಾಸಿಗ
ಮಲ್ಪೆ ಬೀಚ್‌ನಲ್ಲಿ ವಾಟರ್‌ ಸ್ಪೋರ್ಟ್ಸ್‌ ತುಂಬಾ ಮುದ ನೀಡುತ್ತದೆ. ಈ ವರ್ಷ ತೇಲುವ ಸೇತುವೆ (ಪ್ಲೋಟಿಂಗ್‌ ಬ್ರಿಡ್ಜ್‌) ಇಲ್ಲದ್ದು ನಿರಾಸೆ ಮೂಡಿಸಿದೆ
ಸತೀಶ್‌ ಪ್ರವಾಸಿಗ

‘ಹೆಚ್ಚುವರಿ ಸಿಬ್ಬಂದಿಗೆ ಬೇಡಿಕೆ ಸಲ್ಲಿಸಿದ್ದೇವೆ’

‘ಕ್ರಿಸ್‌ಮಸ್‌ ರಜೆಯ ಸಂದರ್ಭದಲ್ಲಿ ಮಲ್ಪೆ ಬೀಚ್‌ಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಸಿಬ್ಬಂದಿ ನೀಡುವಂತೆ ಗೃಹರಕ್ಷಕ ದಳದ ಬೆಂಗಳೂರಿನ ಕಚೇರಿಗೆ ಬೇಡಿಕೆ ಸಲ್ಲಿಸಿದ್ದೇವೆ. ಅದರಂತೆ 10 ಮಂದಿ ಸಿಬ್ಬಂದಿಯನ್ನೂ ನೀಡುವುದಾಗಿ ಸೂಚಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಕೊರತೆ ಇರುವುದರಿಂದ ಅದು ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್‌.ಎಂ. ತಿಳಿಸಿದ್ದಾರೆ. ‘ತರಬೇತಿ ಪಡೆದ ಗೃಹರಕ್ಷಕ ದಳದ ಸಿಬ್ಬಂದಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದರೆ ಪ್ರವಾಸಿ ಮಿತ್ರರು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರವಾಸಕ್ಕೆ ಬರುವ ಶಾಲಾ ಮಕ್ಕಳು ಕೂಡ ಬೀಚ್‌ಗೆ ಭೇಟಿ ನೀಡುತ್ತಿರುವುದರಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ’ ಎಂದು ಅವರು ತಿಳಿಸಿದರು.

‘ಪಾರ್ಕಿಂಗ್‌ ವ್ಯವಸ್ಥೆ ಮಾಡಿ’

ಮಲ್ಪೆ ಬೀಚ್‌ಗೆ ದಿನನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ. ಅವರ ವಾಹನಗಳಿಗೆ ಪಾರ್ಕಿಂಗ್‌ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ. ಮಲ್ಪೆ ಬೀಚ್‌ಗೆ ತೆರಳುವ ಹಲವು ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ತಕ್ಷಣ ರಸ್ತೆಗುಂಡಿ ಮುಚ್ಚಬೇಕು. ಶಾಲಾ ಮಕ್ಕಳು ಬೀಚ್‌ನಲ್ಲಿ ಸಮುದ್ರಕ್ಕಿಳಿಯದಂತೆ ಹೆಚ್ಚಿನ ಗಮನ ಹರಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ದೇಗುಲ ಪ್ರವಾಸೋದ್ಯಮ ಚುರುಕು

ಜಿಲ್ಲೆಯಲ್ಲಿ ಬೀಚ್‌ ಪ್ರವಾಸೋದ್ಯಮದ ಜೊತೆ ದೇಗುಲ ಪ್ರವಾಸೋದ್ಯಮವೂ ಪ್ರಮುಖವಾಗಿದ್ದು ಡಿಸೆಂಬರ್‌ ತಿಂಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಜಾಸ್ತಿಯಾಗಿದೆ. ಪ್ರವಾಸ ಬರುವ ಶಾಲಾ ಮಕ್ಕಳನ್ನೂ ಶಿಕ್ಷಕರು ಕೃಷ್ಣ ಮಠಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಈ ಕಾರಣಕ್ಕೆ ಭಕ್ತರ ಸಂದಣಿ ಜಾಸ್ತಿಯಾಗಿದೆ.

ಸೀವಾಕ್‌ನಲ್ಲೂ ಜನಜಂಗುಳಿ

ಮಲ್ಪೆ ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೀವಾಕ್‌ಗೂ ಭೇಟಿ ನೀಡುತ್ತಿರುವುದರಿಂದ ಅಲ್ಲೂ ದಿನನಿತ್ಯ ಜನಜಂಗುಳಿ ಕಂಡು ಬರುತ್ತಿದೆ.ಸಮುದ್ರಕ್ಕೆ ತೆರಳುತ್ತಿರುವ ಮೀನುಗಾರಿಕಾ ದೋಣಿಗಳನ್ನು ಸೀವಾಕ್‌ನಲ್ಲಿ ನಿಂತು ವೀಕ್ಷಿಸಬಹುದಾದ ಕಾರಣ ಹೆಚ್ಚಿನ ಪ್ರವಾಸಿಗರು ಅಲ್ಲಿಗೆ ತೆರಳುತ್ತಾರೆ.

‘ಕಸ ಹಾಕುವವರಿಗೆ ದಂಡ ವಿಧಿಸಿ’

ಮಲ್ಪೆ ಬೀಚ್‌ಗೆ ಬರುವ ಕೆಲವು ಪ್ರವಾಸಿಗರು ಪ್ಲಾಸ್ಟಿಕ್‌ ಬಾಟಲಿ ಸೇರಿದಂತೆ ಕಸವನ್ನು ಮರಳಿನಲ್ಲೇ ಎಸೆಯುತ್ತಿದ್ದಾರೆ. ಇದರಿಂದ ಬೀಚ್‌ನ ಅಂದಗೆಡುತ್ತಿದ್ದು ಕಸ ಎಸೆಯುವವರಿಗೆ ಸಂಬಂಧಪಟ್ಟ ಇಲಾಖೆಯವರು ದಂಡ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುವ ಮಲ್ಪೆ ಬೀಚ್‌ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಕುರಿತೂ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.