ಉಡುಪಿ: ಈ ಬಾರಿಯ ಮೀನುಗಾರಿಕಾ ಋತು ಆರಂಭವಾಗಿ ತಿಂಗಳು ಕಳೆದರೂ ಮಲ್ಪೆ ಮೀನುಗಾರಿಕಾ ಬಂದರಿನಲ್ಲೇ ಬಹುತೇಕ ಯಾಂತ್ರೀಕೃತ ದೋಣಿಗಳು ಲಂಗರು ಹಾಕಿವೆ.
ಟ್ರಾಲಿಂಗ್ ನಿಷೇಧ ತೆರವಾದ ಬಳಿಕ ಸಮುದ್ರ ಪೂಜೆ ಮುಗಿಸಿ, ಯಾಂತ್ರೀಕೃತ ದೋಣಿಗಳು ಇನ್ನೇನು ಸಮುದ್ರಕ್ಕಿಳಿಯಲಿವೆ ಎನ್ನುವಾಗ ಚಂಡಮಾರುತ ಪರಿಣಾಮವಾಗಿ ಗಾಳಿ, ಮಳೆ ಬಂದು ದೋಣಿಗಳು ಬಂದರಿನಲ್ಲೇ ಉಳಿದುಕೊಂಡಿವೆ.
ಆಗಸ್ಟ್ ತಿಂಗಳಲ್ಲಿ ಕೇವಲ ಆರೇಳು ದಿನಗಳಷ್ಟೇ ಕೆಲವು ಯಾಂತ್ರೀಕೃತ ದೋಣಿಗಳು ಮೀನುಗಾರಿಕೆಗೆ ನಡೆಸಿದ್ದವು, ಅನಂತರ ತೂಫಾನ್ ಪರಿಣಾಮವಾಗಿ ಆ ದೋಣಿಗಳು ಕೂಡ ಮಲ್ಪೆ ಬಂದರಿಗೆ ಮರಳಿ ಬಂದು ಲಂಗರು ಹಾಕಿವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಕಳೆದ ವರ್ಷದ ಮೀನುಗಾರಿಕಾ ಋತುವಿಗೆ ಹೋಲಿಸಿದರೆ ಈ ಬಾರಿ ಅಷ್ಟೇನೂ ಮತ್ಸಕ್ಷಾಮ ತಲೆದೋರಿಲ್ಲ. ಸಮುದ್ರಕ್ಕೆ ತೆರಳಿದವರಿಗೆ ಮೀನುಗಳು ಸಿಗುತ್ತಿವೆ. ಆದರೆ ಮೀನು ಹಿಡಿಯಲು ಕಡಲಿಗಿಳಿಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಬಹುತೇಕ ಮೀನುಗಾರರು.
ಈ ಸಲ ಬಂಗುಡೆ, ಬೂತಾಯಿ, ಬೊಂಡಾಸ್, ಸಿಗಡಿ ಸಿಗುತ್ತಿವೆ ಆದರೆ ತೂಫಾನ್ ಹೊಡೆತ ನೀಡಿದೆ. ಇದರಿಂದ ಮೀನುಗಾರಿಕಾ ಕಾರ್ಮಿಕರಿಗೂ ದುಡಿಮೆ ಇಲ್ಲದಂತಾಗಿದೆ ಎಂದು ಮಲ್ಪೆಯ ಮೀನುಗಾರ ಕರಣ್ ತಿಳಿಸಿದರು.
ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಟ್ರಾಲಿಂಗ್‌ನಿಷೇಧದ ವೇಳೆ ನಾಡ ದೋಣಿಗಳಿಗೂ ಕಡಲಿಗಿಳಿಯಲು ಸಾಧ್ಯವಾಗಿರಲಿಲ್ಲ. ಆರಂಭದ ಕೆಲ ದಿನಗಳಲ್ಲಿ ಸಿಗಡಿ ಹೇರಳವಾಗಿ ಸಿಕ್ಕಿತ್ತು. ಅನಂತರ ಗಾಳಿ ಮಳೆಯಿಂದಾಗಿ ಮೀನುಗಾರಿಕೆಯೇ ನಡೆದಿರಲಿಲ್ಲ ಎಂದೂ ಹೇಳಿದರು.
ಕಳೆದ ಮೀನುಗಾರಿಕಾ ಋತುವಿನಲ್ಲಿ ತೀವ್ರ ಮತ್ಯಕ್ಷಾಮದಿಂದಾಗಿ ಮೀನುಗಾರರಿಗೆ ಸಾಕಷ್ಟು ನಷ್ಟ ಉಂಟಾಗಿತ್ತು. ಈ ಬಾರಿ ಉತ್ತಮ ಮೀನುಗಾರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಕಡಲು ಪ್ರಕ್ಷುಬ್ಧವಾಗಿ ನಮ್ಮ ದುಡಿಮೆಯನ್ನು ಕಸಿದುಕೊಂಡಿದೆ ಎಂದರು.
ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮವಾಗಿ ಮೀನುಗಾರಿಕೆ ನಡೆಯುತ್ತಿತ್ತು. ಆದರೆ ಈ ಬಾರಿ ದೊಡ್ಡ ದೋಣಿಗಳು ಕಡಲಿಗಿಳಿಯದ ಕಾರಣ ಮೀನುಗಳೇ ಸಿಗದೆ, ಮಾರುಕಟ್ಟೆಯಲ್ಲಿ ಮೀನುಗಳ ದರ ವಿಪರೀತ ಏರಿಕೆಯಾಗಿದೆ. ಕೆ.ಜಿ. ಬಂಗುಡೆ ಮೀನಿನ ದರ ₹300 ರ ಗಡಿ ದಾಟಿದೆ. ತೂಫಾನ್ ಕಡಿಮೆಯಾಗದಿದ್ದರೆ ಮೀನಿನ ದರ ಇನ್ನಷ್ಟು ಹೆಚ್ಚಾಗಲಿದೆ ಎಂದು ಮಲ್ಪೆಯ ಮೀನುಗಾರ ರತನ್ ತಿಳಿಸಿದರು.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಪದೇ ಪದೇ ರೆಡ್ ಅಲರ್ಟ್ ಘೋಷಣೆಯಾಗಿದ್ದ ಕಾರಣ ಮೀನುಗಾರಿಕಾ ದೋಣಿಗಳು ಕಡಲಿಗಿಳಿಯದಂತೆ ಸಂಬಂಧಿತ ಇಲಾಖೆಗಳು ಎಚ್ಚರಿಕೆ ನೀಡಿದ್ದವು. ಈ ಕಾರಣಕ್ಕೆ ಆಳ ಸಮುದ್ರಕ್ಕೆ ತೆರಳುವ ದೋಣಿಗಳು ಬಂದರಿನಲ್ಲೇ ಲಂಗರು ಹಾಕಿವೆ.
ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ದೋಣಿಗಳು ಒಮ್ಮೆ ಕಡಳಿಗಿಳಿದರೆ ಹಲವು ದಿನಗಳ ಬಳಿಕ ಮರಳುತ್ತವೆ. ಆದರೆ ಪದೇ ಪದೇ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬರುತ್ತಿರುವುದರಿಂದ ಬಹತೇಕ ದೋಣಿಗಳು ಇನ್ನೂ ಮೀನುಗಾರಿಕೆಗೆ ತೆರಳಿಲ್ಲ ಎಂದು ಮೀನುಗಾರರು ಹೇಳಿದರು.
ಕೆಲವೊಮ್ಮೆ ಮೀನುಗಾರಿಕೆಗೆ ತೆರಳಿದಾಗ ಅತಿಯಾಗಿ ತೂಫಾನ್ ಬೀಸಿದರೆ ಮರಳಿ ಬರುತ್ತೇವೆ. ಇಂತಹ ಸಂದರ್ಭದಲ್ಲಿ ಡೀಸೆಲ್‌ಗೆ ಹಾಕಿದ ಹಣವುವೂ ನಷ್ಟವಾಗುತ್ತದೆರತನ್ ಮೀನುಗಾರ ಮಲ್ಪೆ
ಮೀನುಗಾರಿಕಾ ದೋಣಿಗಳು ಕಡಲಿಗಿಳಿದರೆ ಮಾತ್ರ ನಮಗೂ ಕೆಲಸ ಸಿಗುತ್ತದೆ. ನಾವು ಬಂದರಿನಲ್ಲಿ ಮೀನುಗಾರಿಕಾ ಕೆಲಸ ಮಾಡುತ್ತಿದ್ದು ಕಳೆದೊಂದು ವಾರದಿಂದ ಕೆಲಸವಿಲ್ಲದೆ ಸುಮ್ಮನೆ ಕೂತಿದ್ದೇವೆಸುರೇಶ್ ಕಾರ್ಮಿಕ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.