ಉಡುಪಿ: ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಕುರಿತಾದ ಆಸಕ್ತಿಯು ಅವರ ಸರ್ತೋಮುಖ ಬೆಳವಣಿಗೆಗೆ ಬಹುದೊಡ್ಡ ಸಾಧನವಾಗಲಿದೆ. ಕುಳಿತಲ್ಲಿಯೇ ಆಡುವ ಮೊಬೈಲ್ ಆಟ ನಮಗೆ ಮಾರಕವಾದರೆ, ಕಣ್ಣ ಮುಂದಿರುವ ಕ್ರೀಡಾಂಗಣದ ಆಟ ಮನಸಿನ ಏಕಾಗ್ರತೆಯನ್ನು ಹೆಚ್ಚಿಸಿ ಬದುಕಿಗೆ ಪೂರಕವಾಗಲಿದೆ ಎಂದು ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಶ್ರೀ ವಿಬುಧೇಶ ಸಭಾಂಗಣದಲ್ಲಿ ಗುರುವಾರ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಹಾಗೂ ಪುರುಷರ ವಿಭಾಗದ ಟೇಬಲ್ ಟನ್ನಿಸ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆಟ, ಪಾಠ ಹಾಗೂ ಊಟ ಇವುಗಳನ್ನು ಸಮತೋಲನದಿಂದ ಕಾಯ್ದುಕೊಂಡು ಅತ್ಯುನ್ನತ ಸಾಧನೆಯನ್ನು ಮಾಡುವ ಮೂಲಕ ದೇಶದ ಅಮೂಲ್ಯ ಆಸ್ತಿಯಾಗಬೇಕು ಎಂದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಕ್ರೀಡಾ ವಿಭಾಗಕ್ಕೆ ವಿಶೇಷ ಮಹತ್ವವನ್ನು ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಇಂದು ಗುರುತಿಸಿಕೊಳ್ಳುವಂತಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವಂತಾಗಲಿ ಎಂದರು.
ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜಾ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಸಿಎ ಟಿ. ಪ್ರಶಾಂತ್ ಹೊಳ್ಳ, ಕ್ರೀಡಾ ವೀಕ್ಷಕ ಗಣೇಶ ಕೋಟ್ಯಾನ್, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ರಾಘವೇಂದ್ರ ಎಲ್., ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಮರವಂತೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಚಂದ್ರಕಾಂತ್ ಭಟ್ ವಹಿಸಿದ್ದರು. ರಾಘವೇಂದ್ರ ಎಲ್. ಅವರು ಸ್ವಾಗತಿಸಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಾಗರಾಜ ಆಚಾರ್ಯ ವಂದಿಸಿದರು. ಅವನಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.