ADVERTISEMENT

ಶತಕ ದಾಟಿದ ಕ್ಯಾರೆಟ್‌, ಬೀನ್ಸ್‌, ನುಗ್ಗೆ: ಗಗನಕ್ಕೇರಿದ ಬೆಲೆ

ಭಾರಿ ಮಳೆಗೆ ತರಕಾರಿ ಬೆಳೆ ನಾಶ

ಬಾಲಚಂದ್ರ ಎಚ್.
Published 15 ಸೆಪ್ಟೆಂಬರ್ 2022, 22:15 IST
Last Updated 15 ಸೆಪ್ಟೆಂಬರ್ 2022, 22:15 IST
ತರಕಾರಿ
ತರಕಾರಿ   

ಉಡುಪಿ: ಈಚೆಗೆ ರಾಜ್ಯದಾದ್ಯಂತ ಸುರಿದ ಭಾರಿ ಮಳೆಗೆ ತರಕಾರಿ ಬೆಳೆ ನಾಶವಾಗಿದ್ದು ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪು ದರ ಗಗನಕ್ಕೇರಿದೆ. ವಾರದಲ್ಲಿ ಬಹುತೇಕ ತರಕಾರಿಗಳ ಬೆಲೆ ದುಪ್ಪಟ್ಟಾಗಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿದೆ.

ಕಳೆದ ವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊಗೆ ₹ 15 ರಿಂದ ₹ 20 ದರ ಇತ್ತು. ಸದ್ಯ ಟೊಮಟೊ ದರ 45ಕ್ಕೆ ಹೆಚ್ಚಾಗಿದೆ. ಅಗ್ಗವಾಗಿದ್ದ ನುಗ್ಗೆ ದರವೂ ಭಾರಿ ಏರಿಕೆಯಾಗಿದೆ. ವಾರದ ಹಿಂದೆ ಕೆ.ಜಿಗೆ ₹ 50 ಇದ್ದ ದರ ಪ್ರಸ್ತುತ ₹ 150 ತಲುಪಿದೆ.

ಇನ್ನೂ ಕೊತ್ತಮರಿ ಸೊಪ್ಪಿನ ದರ ಕೇಳಿದರಂತೂ ಹೌಹಾರುವುದು ಖಚಿತ. ವಾರದ ಹಿಂದೆ ಕೆ.ಜಿಗೆ ₹ 50 ಇದ್ದ ಬೆಲೆ, ಈಗ ₹ 200 ಮುಟ್ಟಿದೆ. ಭಾರಿ ಮಳೆಗೆ ಕೊತ್ತಮರಿ ಬಹುತೇಕ ನಾಶವಾಗಿದ್ದು, ಅಳಿದುಳಿದ ಅಲ್ಪ ಸ್ವಲ್ಪ ಕೊತ್ತಮರಿ ಸೊಪ್ಪು ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಭಾರಿ ಹೆಚ್ಚಳವಾಗಿದೆ. ಗಾಳಿ ಮಳೆಗೆ ನುಗ್ಗೆಯ ಗಿಡಗಳು ಕೂಡ ಧರೆಗುರುಳಿರುವ ಪರಿಣಾಮ ದರ ಹೆಚ್ಚಾಗಿದೆಎನ್ನುತ್ತಾರೆ ವ್ಯಾಪಾರಿಗಳು.

ADVERTISEMENT

ಕ್ಯಾರೆಟ್‌ ಹಾಗೂ ಬೀನ್ಸ್‌ ದರ ಕೂಡ ಶತಕ ಬಾರಿಸಿವೆ. ಉಭಯ ತರಕಾರಿಗಳ ದರ ದುಪ್ಪಟ್ಟಾಗಿದ್ದು ಕಳೆದವಾರ ₹ 60 ಇದ್ದ ದರ ಪ್ರಸ್ತುತ ₹ 100 ರಿಂದ ₹ 120 ರವರೆಗೂ ಮಾರಾಟ ವಾಗುತ್ತಿವೆ.

ಇನ್ನೂ ಉಳಿದ ತರಕಾರಿ ಬೆಲೆಗಳೇನು ಕಡಿಮೆ ಇಲ್ಲ. ಬಹುತೇಕ ತರಕಾರಿ ಬೆಲೆ ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. ಕಳೆದ ವಾರ ಕೆ.ಜಿಗೆ ₹ 40 ಇದ್ದ ಈರೇಕಾಯಿ ಈ ವಾರ ₹ 80ಕ್ಕೆ ಮುಟ್ಟಿದ್ದರೆ, ಬೀಟ್‌ರೂಟ್‌ ₹40 ರಿಂದ ₹60, ಹೂ ಕೋಸು ₹40 ರಿಂದ ₹60ಕ್ಕೆ ಜಿಗಿದಿದೆ.

ಈರುಳ್ಳಿ ₹ 30 ಯಥಾಸ್ಥಿತಿ ಇದ್ದರೆ, ಬೆಂಡೆ ₹40 ರಿಂದ ₹60, ಬದನೆಕಾಯಿ ₹40 ರಿಂದ 60, ಮೆಣಸಿಕಾಯಿ ₹40, ಕ್ಯಾಪ್ಸಿಕಂ ₹60 ರಿಂದ ₹80, ಹಾಗಲಕಾಯಿ ₹40 ರಿಂದ ₹80, ಸಾಂಬಾರ್ ಸೌತೆ ₹20 ರಿಂದ ₹40, ಆಲೂಗಡ್ಡೆ ₹30 ರಿಂದ ₹35, ನಿಂಬೆಹಣ್ಣು ಒಂದಕ್ಕೆ ₹6 ರಿಂದ ₹10, ಬಾಳೆಕಾಯಿ ಒಂದಕ್ಕೆ ₹20, ಚವಳಿಕಾಯಿ ₹50 ರಿಂದ ₹80, ಬೆಳ್ಳುಳ್ಳಿ ₹80ರಿಂದ ₹120, ಮೂಲಂಗಿ ₹40 ರಿಂದ ₹60ಕ್ಕೆ ಹೆಚ್ಚಾಗಿದೆ.

ಸಾಮಾನ್ಯವಾಗಿ ದಸರಾ ಹಬ್ಬಕ್ಕೆ 2 ವಾರಗಳು ಇರುವಾಗ ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪಿನ ದರ ಕಡಿಮೆ ಇರುತ್ತದೆ. ಹಬ್ಬ ಹತ್ತಿರುವಾಗುತ್ತಿದ್ಧಂತೆ ದರ ಹೆಚ್ಚಾಗುತ್ತಾ ಹೋಗಿ ಹಬ್ಬದ ದಿನ ಗರಿಷ್ಠವಾಗಿರುತ್ತದೆ. ಆದರೆ, ಈ ಬಾರಿ ಹಬ್ಬ ಇನ್ನೂ 15 ದಿನಗಳು ಇರುವಾಗಲೇ ತರಕಾರಿ ದರಗಳು ಗಗನಕ್ಕೇರಿವೆ. ಹಬ್ಬದ ದಿನ ದರವನ್ನು ಊಹಿಸಿದರೆ ಭಯವಾಗುತ್ತದೆ ಎನ್ನುತ್ತಾರೆ ಗ್ರಾಹಕ ವೆಂಕಟರಾಮ.

ವಾರಕ್ಕಾಗುವಷ್ಟು ಐದಾರು ತರಹದ ತರಕಾರಿಗಳು, ಮೂರ್ನಾಲ್ಕು ಬಗೆಯ ಸೊಪ್ಪು, ಬಾಳೆ ಹಣ್ಣು ಖರೀದಿಸಲು ಬರೋಬ್ಬರಿ ₹ 1 ಸಾವಿರ ಖರ್ಚು ಮಾಡಿದ್ದೇನೆ. ಹಿಂದೆ ₹ 500 ರಿಂದ ₹ 600 ಖರ್ಚಾಗುತ್ತಿತ್ತು. ಬೆಲೆ ಏರಿಕೆಯಿಂದ ತಿಂಗಳ ಲೆಕ್ಕಾಚಾರ ತಲೆಕೆಳಗಾಗಿದ್ದು, ಖರ್ಚನ್ನು ಸರಿದೂಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ಅವರು.

ಪಾಲಕ್‌, ಮೆಂತೆ, ಅರಿವೆ, ಸಬಸ್ಸಿಗೆ ಸೇರಿದಂತೆ ಎಲ್ಲ ತರಹದ ಸೊಪ್ಪುಗಳ ದರವೂ ಹೆಚ್ಚಾಗಿದೆ. ಕಳೆದ ವಾರ ಸಣ್ಣ ಕಟ್ಟಿಗೆ ₹6 ರಿಂದ ₹8ಕ್ಕೆ ಸಿಗುತ್ತಿದ್ದ ಸೊಪ್ಪು ಈ ವಾರ ₹12 ರಿಂದ ₹15ಕ್ಕೆ ಮಾರಾಟವಾಗುತ್ತಿದೆ. ಗುಣಮಟ್ಟವೂ ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಹಕರು.

ಹೆಚ್ಚಾಗಿದ್ದ ಏಲಕ್ಕಿ ಬಾಳೆಹಣ್ಣಿನ ದರ ಇಳಿಕೆಯಾಗಿಲ್ಲ. ಕೆ.ಜಿಗೆ ₹ 80 ರಿಂದ ₹ 90ಕ್ಕೆ ಮಾರಾಟವಾಗುತ್ತಿದೆ. ಪಚ್ಚಬಾಳೆ ದರ ₹ 40 ಇದೆ. ಸೇಬು ಸ್ವಲ್ಪ ಅಗ್ಗವಾಗಿದ್ದು ಕೆ.ಜಿಗೆ ₹100ಕ್ಕೆ ಲಭ್ಯವಾಗುತ್ತಿದೆ.

‘ದರ ಹೆಚ್ಚಳ ಆತಂಕ’

ಉಡುಪಿ ಜಿಲ್ಲೆಗೆ ಅಗತ್ಯವಿರುವ ಶೇ 80ರಷ್ಟು ತರಕಾರಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಪೂರೈಕೆಯಾಗುತ್ತದೆ. ವಾರದ ಹಿಂದೆ ಸುರಿದ ಭಾರಿ ಮಳೆಗೆ ತರಕಾರಿ ಬೆಳೆ ನಾಶವಾಗಿರುವುದರಿಂದ ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಮುಂದೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು ದರ ಮತ್ತಷ್ಟು ಏರಿಕೆಯಾಗುವ ಸಾದ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್ ರಫೀಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.