ಉಡುಪಿ: ಆಳ ಸಮುದ್ರ ಮೀನುಗಾರಿಕೆಗಿದ್ದ ಟ್ರಾಲಿಂಗ್ ನಿಷೇಧ ತೆರವಾಗುತ್ತಿದ್ದಂತೆ ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿರುವ ನೂರಾರು ಯಾಂತ್ರೀಕೃತ ದೋಣಿಗಳು ಕಡಲಿಗಿಳಿಯಲು ಸಜ್ಜಾಗುತ್ತಿವೆ.
ಯಾಂತ್ರೀಕೃತ ದೋಣಿಗಳಿಗೆ ಪರ್ಸಿನ್ ಸೇರಿದಂತೆ ವಿವಿಧ ಬಲೆಗಳನ್ನು ತುಂಬಿಸುವ ಕೆಲಸಗಳು ನಡೆಯುತ್ತಿವೆ. ಬಲೆಗಳನ್ನು ಎಳೆಯಲು ಬಳಸುವ ಕೇಬಲ್‌ಗಳ ದುರಸ್ತಿ ಕಾರ್ಯವೂ ಮುಂದುವರಿದಿದೆ. ದೋಣಿಗಳ ಎಂಜಿನ್ ದುರಸ್ತಿ, ಪೇಂಟಿಂಗ್, ಪರ್ಸಿನ್ ದೋಣಿಗಳಲ್ಲಿ ಬಳಸುವ ಬಲೆಗಳ ದುರಸ್ತಿ ಕಾರ್ಯಗಳೂ ಚುರುಕಾಗಿವೆ.
ಆಗಸ್ಟ್ 1ರಿಂದ ಟ್ರಾಲಿಂಗ್ ನಿಷೇಧ ತೆರವಾಗಿದ್ದರೂ ಕೆಲದಿನಗಳು ತಡವಾಗಿಯೇ ದೋಣಿಗಳು ಸಮುದ್ರಕ್ಕಿಳಿಯಲಿದ್ದು, ಅಂತಿಮ ಹಂತದ ಸಿದ್ಧತೆಯಲ್ಲಿದ್ದೇವೆ ಎಂದು ಮಲ್ಪೆಯ ಮೀನುಗಾರರು ತಿಳಿಸಿದ್ದಾರೆ.
ಈ ಬಾರಿ ನಾಡ ದೋಣಿ ಮೀನುಗಾರರಿಗೆ ಸಿಗಡಿ, ಬೂತಾಯಿ, ಬಂಗುಡೆ ಮೀನುಗಳು ಹೇರಳವಾಗಿ ಸಿಗುತ್ತಿವೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಕೆಲವೇ ದಿನಗಳ ಮೀನುಗಾರಿಕೆ ನಡೆಸಲಾಗಿದೆ. ಆದ್ದರಿಂದ ಆಳ ಸಮುದ್ರಕ್ಕೆ ತೆರಳುವ ಯಾಂತ್ರೀಕೃತ ದೋಣಿಗಳಿಗೂ ಉತ್ತಮ ಮೀನುಗಾರಿಕೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಕಳೆದ ಮೀನುಗಾರಿಕಾ ಋತುವಿನಲ್ಲಿ ತೀರಾ ಮತ್ಸ್ಯಕ್ಷಾಮ ಎದುರಾಗಿತ್ತು. ಈ ಕಾರಣಕ್ಕೆ ಮೀನುಗಾರರಿಗೆ ನಷ್ಟ ಉಂಟಾಗಿತ್ತು. ಲೈಟ್ ಫಿಶಿಂಗ್ ಸೇರಿದಂತೆ ಅವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ನಡೆಸಿರುವ ಪರಿಣಾಮವಾಗಿ ಮತ್ಸ್ಯಕ್ಷಾಮ ತಲೆದೋರಿದೆ ಎಂಬ ಚರ್ಚೆಗಳೂ ನಡೆದಿದ್ದವು. ಲೈಟ್ ಫಿಶಿಂಗ್ ವಿರೋಧಿಸಿ ಬೈಂದೂರಿನಲ್ಲಿ ನಾಡದೋಣಿ ಮೀನುಗಾರರು ಪ್ರತಿಭಟನೆಯನ್ನೂ ನಡೆಸಿದ್ದರು.
ಯಾಂತ್ರೀಕೃತ ದೋಣಿಗಳು ಇನ್ನೂ ಕಡಲಿಗಿಳಿಯದಿರುವುದರಿಂದ ನಾಡದೋಣಿ ಮೀನುಗಾರಿಕೆ ಉತ್ತಮ ರೀತಿಯಲ್ಲಿ ಮುಂದುವರಿದಿದ್ದು, ನಾಡದೋಣಿ ಮೀನುಗಳಿಗೆ ಹೆಚ್ಚಿನ ಬೇಡಿಕೆಯೂ ಕುದುರಿದೆ.
ಮಾನ್ಸೂನ್ ಕಾಲವು ಮೀನುಗಳ ಸಂತನಾಭಿವೃದ್ಧಿಯ ಅವಧಿಯಾಗಿರುವುದರಿಂದ ಮತ್ಸ್ಯ ಸಂಪತ್ತಿನ ಸಂರಕ್ಷಣೆಗಾಗಿ ಪ್ರತಿವರ್ಷ ಟ್ರಾಲಿಂಗ್ ನಿಷೇಧ ಹೇರಲಾಗುತ್ತಿದೆ. ಈ ಅವಧಿಯಲ್ಲಿ ಆಳ ಸಮುದ್ರಕ್ಕೆ ತೆರಳುವ ದೋಣಿಗಳಲ್ಲಿ ದುಡಿಯುವ ನೂರಾರು ಮೀನುಗಾರರಿಗೆ ದುಡಿಮೆ ಇಲ್ಲದಂತಾಗುತ್ತದೆ. ಅವರಲ್ಲಿ ಹಲವರು ಬಲೆ ದುರಸ್ತಿ ಮೊದಲಾದ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಇನ್ನು ಕೆಲವರು ಪರ್ಯಾಯ ವೃತ್ತಿ ನಡೆಸುತ್ತಾರೆ.
ಇನ್ನು ಕೆಲವೇ ದಿನಗಳಲ್ಲಿ ಯಾಂತ್ರೀಕೃತ ದೋಣಿಗಳು ಕಡಲಿಗಿಳಿಯಲಿರುವುದರಿಂದ ದೋಣಿಯ ಎಂಜಿನ್ ರಿಪೇರಿ ಹಾಗೂ ಇತರ ಕೆಲಸಗಳನ್ನು ಮಾಡಿಸುತ್ತಿದ್ದೇವೆರತನ್ ಮೀನುಗಾರ ಮಲ್ಪೆ
ದೋಣಿಗಳಲ್ಲಿ ಬಲೆ ಎಳೆಯುವ ಕೇಬಲ್‌ಗಳ ದುರಸ್ತಿ ಕಾರ್ಯಕ್ಕೆ ವಿಶೇಷ ನೈಪುಣ್ಯತೆ ಹೊಂದಿರುವ ಕಾರ್ಮಿಕರು ಬೇರೆಡೆಯಿಂದ ಮಲ್ಪೆಗೆ ಬರುತ್ತಾರೆ. ಈ ಬಾರಿಯೂ ಬಂದು ರಿಪೇರಿ ಕೆಲಸಗಳನ್ನು ನೆರವೇರಿಸಿದ್ದಾರೆಹರೀಶ್ ಮೀನುಗಾರ ಮಲ್ಪೆ
ಇನ್ನೂ ಬಂದಿಲ್ಲ ಹೊರರಾಜ್ಯದ ಕಾರ್ಮಿಕರು:
ಮಲ್ಪೆ ಬಂದರಿನಲ್ಲಿ ಹಾಗೂ ದೋಣಿಗಳಲ್ಲಿ ಮೀನುಗಾರಿಕೆ ಕೆಲಸಕ್ಕೆ ಹೆಚ್ಚಾಗಿ ಒಡಿಶಾ ಪಶ್ಚಿಮ ಬಂಗಾಳ ಉತ್ತರ ಪ್ರದೇಶ ಮೊದಲಾದ ಉತ್ತರ ಭಾರತದ ರಾಜ್ಯಗಳ ಕಾರ್ಮಿಕರನ್ನೇ ನಿಯೋಜಿಸಲಾಗುತ್ತಿದೆ. ಟ್ರಾಲಿಂಗ್ ನಿಷೇಧ ಜಾರಿಗೆ ಬರುತ್ತಿದ್ದಂತೆ ಅವರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಆ ಕಾರ್ಮಿಕರು ಇನ್ನೂ ವಾಪಸ್ ಬಂದಿಲ್ಲ ಎನ್ನುತ್ತಾರೆ ಬೋಟ್ ಮಾಲೀಕರು. ಮೀನುಗಾರಿಕೆ ಮಾತ್ರವಲ್ಲ ಬಲೆ ದುರಸ್ತಿ ಮೊದಲಾದ ಕೆಲಸಗಳಲ್ಲೂ ಹೊರ ರಾಜ್ಯದ ಕಾರ್ಮಿಕರು ಹೆಚ್ಚು ನೈಪುಣ್ಯತೆ ಹೊಂದಿದ್ದಾರೆ. ಅದೇ ಕಾರಣಕ್ಕೆ ಅವರನ್ನು ಕೆಲಸಕ್ಕೆ ನಿಯೋಜಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.
‘ಹವಾಮಾನ ಮುನ್ಸೂಚನೆ ಪಾಲಿಸಿ’:
ಆಗಸ್ಟ್ 1ರಿಂದಲೇ ಟ್ರಾಲಿಂಗ್ ನಿಷೇಧ ತೆರವಾಗಿದೆ. ಇನ್ನು ಯಾಂತ್ರೀಕೃತ ದೋಣಿಗಳು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಹುದಾಗಿದೆ. ದೋಣಿಯವರಿಗೆ ಡೀಸೆಲ್ ವಿತರಣೆಯೂ ನಡೆದಿದೆ. ಆದರೆ ಹವಾಮಾನ ಮುನ್ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಜೊತೆಗೆ ಮೀನುಗಾರಿಕೆಗೆ ತೆರಳುವಾಗ ಮೀನುಗಾರರು ಲೈಫ್ ಜಾಕೆಟ್‌ಗಳನ್ನು ತಪ್ಪದೆ ಧರಿಸಬೇಕು ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ತಿಳಿಸಿದರು. ಈಗಾಗಲೇ ಮೀನುಗಾರರೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದೇವೆ. ಲೈಟ್ ಫಿಶಿಂಗ್ ಸೇರಿದಂತೆ ಕಾನೂನು ಬಾಹಿರ ರೀತಿಯಲ್ಲಿ ಮೀನುಗಾರಿಕೆ ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದೇವೆ. ಲೈಟ್ ಫಿಶಿಂಗ್ ವಿಧಾನದಲ್ಲಿ ಮೀನುಗಾರಿಕೆ ನಡೆಸಿದ ಹಲವು ದೋಣಿಯವರಿಗೆ ಕಳೆದ ಮೀನುಗಾರಿಕಾ ಋತುವಿನಲ್ಲಿ ದಂಡ ವಿಧಿಸಿದ್ದೇವೆ ಮತ್ತು ಕೆಲವು ಬೋಟ್‌ಗಳಿಗೆ ಡೀಸೆಲ್ ನೀಡುವುದನ್ನೂ ನಿಲ್ಲಿಸಿದ್ದೇವೆ. ಮೀನುಗಾರಿಕಾ ಬೋಟ್‌ನಲ್ಲಿ ತೆರಳುವ ಪ್ರತಿಯೊಬ್ಬರ ತಮ್ಮ ಹೆಸರನ್ನು ಡೀಸೆಲ್ ಬಂಕ್‌ಗಳಲ್ಲಿ ನೋಂದಾಯಿಸಬೇಕೆಂದು ಸೂಚನೆ ನೀಡಿದ್ದೇವೆ ಎಂದರು.
‘ಹತ್ತು ದಿನ ತಡವಾಗುವ ಸಾಧ್ಯತೆ’:
ದೋಣಿಗಳಲ್ಲಿ ದುಡಿಯುವ ಉತ್ತರ ಭಾರತದ ಕಾರ್ಮಿಕರು ಇನ್ನೂ ಬಾರದ ಕಾರಣ ಹೆಚ್ಚಿನ ದೋಣಿಗಳು ಆಗಸ್ಟ್ 10ರ ಬಳಿಕವೇ ಕಡಲಿಗಿಳಿಯುವ ಸಾಧ್ಯತೆ ಇದೆ. ತಮಿಳುನಾಡಿನ ಕಾರ್ಮಿಕರು ದುಡಿಯುವ ಶೇ 5ರಷ್ಟು ದೋಣಿಗಳು ಈಗಾಗಲೇ ಮೀನುಗಾರಿಕೆಗೆ ತೆರಳಿವೆ ಎಂದು ಮಲ್ಪೆಯ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್ ತಿಳಿಸಿದರು. ಮಲ್ಪೆ ಬಂದರಿನ ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಲು ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಹವಾಮಾನ ವೈಪರೀತ್ಯವಾದರೆ ಮೀನುಗಾರರಿಗೆ ಹೊಡೆತ ಬೀಳುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.