ADVERTISEMENT

ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ತಲುಪಿಸಿ: ಜಗದೀಶ್ ಹಿರೇಮಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 14:39 IST
Last Updated 10 ಜನವರಿ 2020, 14:39 IST
ರಾಷ್ಟ್ರಿಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ರಾಷ್ಟ್ರಿಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.   

ಉಡುಪಿ: ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಯಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ರಾಷ್ಟ್ರಿಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣೆ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಗರ ಸ್ಥಳಿಯ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಸಫಾಯಿ ಕರ್ಮಚಾರಿಗಳ ಮತ್ತು ಅವಲಂಬಿತರ ವೈದ್ಯಕೀಯ ವೆಚ್ವವನ್ನು ನಗರ ಸ್ಥಳೀಯ ಸಂಸ್ಥೆಗಳೇ ಭರಿಸಬೇಕು. ಕೆಲಸದ ಸಂದರ್ಭ ಸುರಕ್ಷತಾ ಸಾಧನಗಳನ್ನು ಬಳಸುವಂತೆ ಪ್ರೇರೇಪಿಸಬೇಕು. ಅಂಬೇಡ್ಕರ್ ಅಭಿವೃಧ್ದಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ವಿವಿಧ ಸೌಲಭ್ಯಗಳನ್ನು ಪಡೆಯಲು ಪ್ರಮಾಣಪತ್ರದ ಅಗತ್ಯವಿದ್ದು, ಸ್ಥಳಿಯ ಸಂಸ್ಥೆಗಳು ಪ್ರಮಾಣಪತ್ರ ವಿತರಣೆಗೆ ನೆರವಾಗಬೇಕು. ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ಜಿಲ್ಲಾ ಹಂತದಲ್ಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಫಾಯಿ ಕರ್ಮಚಾರಿಗಳಿಗೆ ವಸತಿ, ಪೌರಕಾರ್ಮಿಕರ ವಸತಿಗೃಹದಲ್ಲಿ ವಾಸವಿರುವವರಿಗೆ ವಸತಿ ಗೃಹಗಳನ್ನು ಅವರ ಹೆಸರಿಗೆ ನೋಂದಣಿ, ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ನಿಯಮಾನುಸಾರ ಕನಿಷ್ಠ ವೇತನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒಗೆ ತಿಳಿಸಿದರು.

ನಗರದಲ್ಲಿ ಮಾನವ ಸ್ಕಾವೆಂಜರ್‌ಗಳು ಇಲ್ಲದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇದೆ. ಈ ಬಗ್ಗೆ ಪಿಡಿಒಗಳಿಗೆ ಕಾರ್ಯಾಗಾರ ಏರ್ಪಡಿಸಿ, ಮಾನವ ಸ್ಕಾವೆಂಜರ್ ಕಂಡುಬಂದರೆ ಆ ಕಾರ್ಯಕ್ಕೆ ನಿಯೋಜಿಸಿದವರನ್ನು ಹಾಗೂ ಅಧಿಕಾರಿಗಳನ್ನು ಶಿಕ್ಷಿಸಲಾಗುವುದು.

ಸಕ್ಕಿಂಗ್ ಯಂತ್ರ ಖರೀದಿಸಲು ಮುದ್ರಾ ಯೋಜನೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಒದಗಿಸಿ, ಎಲ್ಲ ಹೋಬಳಿಗಳಲ್ಲಿ ಒಂದು ಸಕ್ಕಿಂಗ್ ಯಂತ್ರಗಳಿದ್ದರೆ, ಸ್ಕಾವೆಂಜರ್ ಪದ್ಧತಿ ನಿರ್ಮೂಲನೆ ಸಾದ್ಯ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಎಸಿ ರಾಜು, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.