ADVERTISEMENT

ಉಡುಪಿ: ನೀರು ತುಂಬಿದ ಗದ್ದೆಗಳಲ್ಲಿ ಪಕ್ಷಿಗಳ ಕಲರವ; ಮತ್ತೆ ಬಂದ ವಲಸೆ ಬಾನಾಡಿಗಳು

ಜಿಲ್ಲೆಯ ಹಿನ್ನೀರು ಪ್ರದೇಶ, ನೀರು ತುಂಬಿದ ಗದ್ದೆಗಳಲ್ಲಿ ಕೇಳಿ ಬರುತ್ತಿವೆ ಪಕ್ಷಿಗಳ ಕಲರವ

ನವೀನ್ ಕುಮಾರ್ ಜಿ.
Published 24 ಅಕ್ಟೋಬರ್ 2025, 4:58 IST
Last Updated 24 ಅಕ್ಟೋಬರ್ 2025, 4:58 IST
ಬಾರ್ಕೂರು ವ್ಯಾಪ್ತಿಯಲ್ಲಿ ಕಂಡು ಬಂದ ಬ್ಲ್ಯಾಕ್‌ ವಿಂಗ್ಡ್ ಸ್ಟಿಲ್ಟ್‌ ಹಕ್ಕಿಗಳು
ಬಾರ್ಕೂರು ವ್ಯಾಪ್ತಿಯಲ್ಲಿ ಕಂಡು ಬಂದ ಬ್ಲ್ಯಾಕ್‌ ವಿಂಗ್ಡ್ ಸ್ಟಿಲ್ಟ್‌ ಹಕ್ಕಿಗಳು   

ಉಡುಪಿ: ಕರಾವಳಿ ಜಿಲ್ಲೆಯಾದ ಉಡುಪಿಯ ಕಡಲತಡಿ, ಹಿನ್ನೀರು, ಗದ್ದೆಗಳಲ್ಲಿ ವಲಸೆ ಹಕ್ಕಿಗಳ ಕಲರವ ಮತ್ತೆ ಕೇಳಿ ಬರುತ್ತಿದೆ.

ಪ್ರತಿ ವರ್ಷ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಕೆಲವು ಹಕ್ಕಿಗಳು ಖಂಡಾಂತರದಿಂದ ಬಂದರೆ, ಇನ್ನು ಕೆಲವು ಹಕ್ಕಿಗಳು ಉತ್ತರದ ರಾಜ್ಯಗಳಿಂದ ಇಲ್ಲಿಗೆ ಬರುತ್ತಿವೆ.

ಅತಿಯಾದ ಶೈತ್ಯ ಆರಂಭವಾದಾಗ ಹಿಮಬೀಳುವ ಪ್ರದೇಶಗಳಲ್ಲಿ ಹಕ್ಕಿಗಳಿಗೆ ಆಹಾರ ಕೊರತೆ ಉಂಟಾಗುತ್ತದೆ. ಜೊತೆಗೆ ಅತಿಯಾದ ಶೀತದಿಂದ ತಪ್ಪಿಸಿಕೊಳ್ಳಲು ಕೆಲವು ಪ್ರಭೇದದ ಪಕ್ಷಿಗಳು ಕರಾವಳಿ ಪ್ರದೇಶಕ್ಕೆ ಬರುತ್ತವೆ ಎನ್ನುತ್ತಾರೆ ಪಕ್ಷಿ ತಜ್ಞರು.

ADVERTISEMENT

ಪ್ರತಿ ವರ್ಷವೂ ಮಳೆ ಕಡಿಮೆಯಾಗುತ್ತಿದ್ದಂತೆ ಜಿಲ್ಲೆಗೆ ವಲಸೆ ಹಕ್ಕಿಗಳ ಆಗಮನವಾಗುತ್ತದೆ. ಇಲ್ಲಿನ ವಿಶಾಲವಾದ ಹಿನ್ನೀರು ಪ್ರದೇಶಗಳು, ನೀರು ತುಂಬಿರುವ ಗದ್ದೆಗಳು, ಸಮುದ್ರ ತಟಗಳು ಹಕ್ಕಿಗಳನ್ನು ಆಕರ್ಷಿಸುತ್ತವೆ.

ನೀರು ತುಂಬಿಕೊಂಡಿರುವ ಗದ್ದೆಗಳಲ್ಲಿ ಮತ್ತು ಹಿನ್ನೀರು ಪ್ರದೇಶಗಳಲ್ಲಿ ಸಾಕಷ್ಟು ಜಲಚರಗಳು ಸಿಗುವ ಕಾರಣ ವಲಸೆ ಹಕ್ಕಿಗಳು ಈ ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತವೆ.

ಉಡುಪಿಯ ಮಲ್ಪೆ ಕಡಲ ತೀರ, ಕುಂದಾಪುರದ ಪಂಚಗಂಗಾವಳಿ ನದಿ, ಮಲ್ಯಾಡಿ ಪಕ್ಷಿಧಾಮ, ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರು ಮೊದಲಾದೆಡೆ ಈ ಬಾರಿ ಈಗಾಗಲೇ ವಲಸೆ ಪಕ್ಷಿಗಳು ಪಕ್ಷಿ ವೀಕ್ಷಕರ ಕಣ್ಣಿಗೆ ಬಿದ್ದಿವೆ.

ಕೆಲವು ವರ್ಷಗಳ ಹಿಂದೆ ಸಾಕಷ್ಟು ಪ್ರಭೇದದ ವಲಸೆ ಪಕ್ಷಿಗಳು ಕರಾವಳಿ ತೀರಕ್ಕೆ ಬರುತ್ತಿದ್ದವು . ಅದರಲ್ಲೂ ನೀರ ಹಕ್ಕಿಗಳು ಇಲ್ಲಿನ ಜೌಗು ಪ್ರದೇಶಗಳಲ್ಲಿ ಕಂಡು ಬರುತ್ತಿದ್ದವು . ಆದರೆ ಈಚೆಗೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿವೆ ಎನ್ನುತ್ತಾರೆ ಪಕ್ಷಿಪ್ರಿಯರು.

ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನ ಆಸುಪಾಸಿನ ಬಯಲು ಪ್ರದೇಶ ಮತ್ತು ಅಲ್ಲಿ ಬಳಕೆಯಲ್ಲಿಲ್ಲದ ಸಿಗಡಿ ಕೆರೆಗಳಲ್ಲಿ ಈ ಬಾರಿ ರಫ್, ಬ್ಲಾಕ್ ವಿಂಗ್ಡ್‌ ಸ್ಟಿಲ್ಟ್‌, ಗ್ಲೋಸಿ ಐಬಿಸ್ ಹಕ್ಕಿಗಳು ಕಂಡುಬಂದಿವೆ. ಬ್ಲ್ಯಾಕ್‌ ಹೆಡೆಡ್‌ ಐಬಿಸ್‌ ಹಕ್ಕಿಗಳಂತು ಕರಾವಳಿಯಲ್ಲಿ ಸಾಮಾನ್ಯವಾಗಿ ಯಾವಾಗಲೂ ಕಂಡು ಬರುತ್ತವೆ. ಪರ್ಪಲ್‌ ಸ್ವಾಂಪ್‌ಹೆನ್ ಕೂಡ ಸದಾ ಕಾಣಸಿಗುತ್ತವೆ. ಕುಂದಾಪುರದ ಪಂಚಗಂಗಾವಳಿ ನದಿಯಲ್ಲಿ ಸೀ ಗಲ್ ಹಕ್ಕಿಗಳು ಗುಂಪು ಗುಂಪಾಗಿ ಕಂಡು ಬರುತ್ತಿವೆ.

ಬೈಂದೂರು, ಗಂಗೊಳ್ಳಿ,ಕೋಡಿ ಮೊದಲಾದ ಕಡಲ ತೀರದಲ್ಲಿ ವಿಂಬ್ರೆಲ್‌, ಕೆಂಟಿಶ್‌ ಪ್ಲೋವರ್‌ ಹಕ್ಕಿಗಳು ಕಾಣಸಿಗುತ್ತಿವೆ. ಪೆಸಿಫಿಕ್‌ ಗೋಲ್ಡನ್‌ ಪ್ಲೋವರ್, ಗ್ರೆ ಪ್ಲೋವರ್‌, ಕ್ಯಾಸ್ಪಿಯನ್ ಟರ್ನ್‌, ಯುರೇಷಿಯನ್‌ ಕರ್ಲ್ಯೂ ಮೊದಲಾದ ಹಕ್ಕಿಗಳು ಪ್ರತಿವರ್ಷ ಜಿಲ್ಲೆಗೆ ಬರುತ್ತಿವೆ ಎಂದು ಪಕ್ಷಿ ವೀಕ್ಷಕರು ಹೇಳುತ್ತಾರೆ.

ಬ್ಲ್ಯಾಕ್‌ ವಿಂಗ್ಡ್‌ ಸ್ಟಿಲ್ಟ್
ರಫ್‌ ಹಕ್ಕಿ
ವಿಂಬ್ರೆಲ್‌
ಗ್ಲೋಸಿ ಐಬಿಸ್‌

‘ಇಳಿಕೆಯಾಗದ ನೀರಿನ ಮಟ್ಟ: ಹಕ್ಕಿಗಳು ದೂರ’

‘ ಕೆಲವು ವರ್ಷಗಳಿಂದ ಕುಂದಾಪುರ ವ್ಯಾಪ್ತಿಯಲ್ಲಿ ವಾರಾಹಿ ನದಿ ನೀರು ನಿರಂತರವಾಗಿ ಬರುತ್ತಿರುವುದರಿಂದ ಗದ್ದೆಗಳಲ್ಲಿ ಸದಾ ನೀರು ತುಂಬಿರುತ್ತದೆ. ಇಂತಹ ಗದ್ದೆಗಳು ಆಳವಾಗಿದ್ದು ಅವುಗಳ ನೀರಿನ ಮಟ್ಟ ಕಡಿಮೆಯಾಗುವುದಿಲ್ಲ. ಈ ಕಾರಣಕ್ಕೆ ಹಕ್ಕಿಗಳಿಗೆ ಆಹಾರ ಹುಡುಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲವು ಪ್ರಭೇದದ ಪಕ್ಷಿಗಳು ಈ ಪ್ರದೇಶಗಳಿಗೆ ಬರುತ್ತಿಲ್ಲ’ ಎನ್ನುತ್ತಾರೆ ಪಕ್ಷಿ ತಜ್ಞ ವಿ.ಲಕ್ಷ್ಮಿನಾರಾಯಣ ಉಪಾಧ್ಯ.

‘ವಲಸೆ ಬರುವ ಹಕ್ಕಿಗಳು ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿ ಮತ್ತೆ ಹಾರಿ ಹೋಗುತ್ತವೆ. ಕುಂದಾಪುರ ವ್ಯಾಪ್ತಿಯ ಮಲ್ಯಾಡಿ ಪಕ್ಷಿಧಾಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹಕ್ಕಿಗಳು ಬರುತ್ತಿದ್ದವು. ಈಗ ಅಲ್ಲಿನ ನೀರು ತುಂಬಿದ ಪ್ರದೇಶದಲ್ಲಿ ಅಂತರಗಂಗೆ ತುಂಬಿಕೊಂಡಿದೆ. ಜೊತೆಗೆ ಸದಾ ನೀರಿನ ಮಟ್ಟ ಒಂದೇ ರೀತಿ ಇರುವುದರಿಂದ ಅಲ್ಲಿಗೆ ಬರುವ ಪಕ್ಷಿಗಳ ಸಂಖ್ಯೆಯೂ ಕಡಿವೆಯಾಗಿದೆ’ ಎಂದೂ ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.