ADVERTISEMENT

ಕನಿಷ್ಠ ಪಿಂಚಣಿ ನಿವೃತ್ತ ಕಾರ್ಮಿಕರ ಹಕ್ಕು

₹ 6000 ಪಿಂಚಣಿ ನೀಡಿ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 15:56 IST
Last Updated 20 ಜುಲೈ 2019, 15:56 IST
ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಶನಿವಾರ ಭವಿಷ್ಯನಿಧಿ ಪಿಂಚಣಿದಾರರ ಸಂಘದ ಸಮಾವೇಶ ನಡೆಯಿತುಪ್ರಜಾವಾಣಿ ಚಿತ್ರ
ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಶನಿವಾರ ಭವಿಷ್ಯನಿಧಿ ಪಿಂಚಣಿದಾರರ ಸಂಘದ ಸಮಾವೇಶ ನಡೆಯಿತುಪ್ರಜಾವಾಣಿ ಚಿತ್ರ   

ಉಡುಪಿ: ಜೀವನ ನಿರ್ವಹಣೆಗಾಗಿ ಸರ್ಕಾರದಿಂದ ಪಿಂಚಣಿ ಪಡೆಯುವುದು ಪ್ರತಿಯೊಬ್ಬ ಕಾರ್ಮಿಕನ ಹಕ್ಕು. ಹಾಗಾಗಿ, ಭವಿಷ್ಯನಿಧಿಯ ಪಿಂಚಣಿಯನ್ನು ಕನಿಷ್ಠ 6000ಕ್ಕೆ ಏರಿಕೆ ಮಾಡಬೇಕು ಎಂದು ಉಡುಪಿ ತಾಲ್ಲೂಕು ಭವಿಷ್ಯನಿಧಿ ಪಿಂಚಣಿದಾರರ ಸಂಘ (ಸಿಐಟಿಯು) ಅಧ್ಯಕ್ಷ ವಿಠಲ ಪೂಜಾರಿ ಆಗ್ರಹಿಸಿದರು.

ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭವಿಷ್ಯನಿಧಿ ಪಿಂಚಣಿದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕ ಪ್ರಾಯದಲ್ಲಿ ಕೆಲಸಕ್ಕೆ ಸೇರಿ ನಿವೃತ್ತಿಯಾದವರಿಗೆ ಬಿಡಿಗಾಸು ಪಿಂಚಣಿ ಬರುತ್ತಿದೆ. ಕೆಲವರಿಗೆ ಕೇವಲ ₹ 340 ಪಿಂಚಣಿ ಬರುತ್ತಿದೆ. ಈ ಹಣದಲ್ಲಿ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

39 ವರ್ಷ ದುಡಿದು ನಿವೃತ್ತಿಯಾಗಿರುವ ನನಗೆ ಕೇವಲ ₹ 1,500 ಪಿಂಚಣಿ ಬರುತ್ತಿದೆ. ಇದರಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವೇ. ಹೀಗೆ ಕನಿಷ್ಠ ಪಿಂಚಣಿ ಪಡೆಯುತ್ತಿರುವ ಸಾವಿರಾರು ಪಿಂಚಣಿದಾರರು ಇದ್ದಾರೆ. ಅವರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಜಿಸಬೇಕಿದೆ ಎಂದರು.

ADVERTISEMENT

ಕಾರ್ಮಿಕರ ಭವಿಷ್ಯನಿಧಿ ಖಾತೆಯಲ್ಲಿ ಅನಾಮಧೇಯವಾಗಿರುವ ಸಾವಿರಾರು ಕೋಟಿ ಕೊಳೆಯುತ್ತಿದೆ. ಮೂರ್ನಾಲ್ಕು ತಿಂಗಳು ಕೆಲಸ ಮಾಡುವ ನೌಕರರು ಪಿಎಫ್‌ ಹಿಂಪಡೆಯುವುದೇ ಇಲ್ಲ. ನಾಮಿನಿಗಳು ಇಲ್ಲದ ಪ್ರಕರಣಗಳು ಬಹಳಷ್ಟಿವೆ. ಕಾರ್ಮಿಕರ ಬೆವರಿನ ಹಣ ಇದ್ದರೂ ಅದನ್ನು ಹಂಚಿಕೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಗತ್ಯ ಬೆಲೆಗಳು ಗಗನಕ್ಕೇರಿದ್ದು, ವೈದ್ಯಕೀಯ ವೆಚ್ಚವೂ ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ಪಿಂಚಣಿದಾರರು ಬದುಕುವುದು ಹೇಗೆ ಎಂದು ಪ್ರಶ್ನಿಸಿದ ಅವರು, ತಕ್ಷಣ ಕನಿಷ್ಠ ₹ 6000 ಪಿಂಚಣಿ ನಿಗಧಿಮಾಡಬೇಕು ಎಂದು ಒತ್ತಾಯಿಸಿದರು.

ದೇಶದ ಅಭಿವೃದ್ಧಿಗಾಗಿ ದುಡಿದ ಕಾರ್ಮಿಕರು ನಿವೃತ್ತಿಯಾದರೆ ಕಾರ್ಮಿಕರನ್ನು ಹಾಗೂ ಅವರ ಕುಟುಂಬ ವರ್ಗದವರನ್ನು ಸಾಕಬೇಕಾಗಿರುವುದು ಸರ್ಕಾರದ ಕರ್ತವ್ಯ. ಸರ್ಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಉದ್ಯಮಿಗಳ ಸಾವಿರಾರು ಕೋಟಿ ಸಾಲ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡುತ್ತಿವೆ. ಆದರೂ, ಕೇಂದ್ರ ಸರ್ಕಾರ ಉದ್ಯಮಿಗಳ ಪರವಾಗಿ ನಿಂತಿದ್ದು, ತೆರಿಗೆದಾರರ ಸಾವಿರಾರು ಕೋಟಿ ಹಣವನ್ನು ಬ್ಯಾಂಕ್‌ಗಳಿಗೆ ಉದಾರವಾಗಿ ನೀಡುತ್ತಿದೆ. ಆದರೆ, ಬಡ ನಿವೃತ್ತ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಸರ್ಕಾರ ಹಿರಿಯ ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು. ದಿನದಿಂದ ದಿನಕ್ಕೆ ಪಿಂಚಣಿದಾರರ ಸಮಸ್ಯೆಗಳು ಹೆಚ್ಚಾಗುತ್ತಿದ್ದು ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಕೋಶಾಧಿಕಾರಿ ಸುಂದರಿ, ಕಾರ್ಯದರ್ಶಿ ಉಮೇಶ್ ಕುಂದರ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.