ADVERTISEMENT

ಕುಂದಾಪುರ: ಕೊರಗ ಸಮುದಾಯದವರ ಮನೆಯಲ್ಲಿ ಶಾಸಕ ಗುರುರಾಜ್‌ ಗಂಟಿಹೊಳೆ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:25 IST
Last Updated 20 ಫೆಬ್ರುವರಿ 2026, 2:25 IST
<div class="paragraphs"><p>ಕುಂದಾಪುರ ಸಮೀಪದ ನಾರ್ಕಳಿ ಗ್ರಾಮದ ಕೊರಗ ಸಮುದಾಯದವರ ಮನೆಯಲ್ಲಿ ಶಾಸಕ ಗುರುರಾಜ್‌ ಗಂಟಿಹೊಳೆ ಅವರು ವಾಸ್ತವ್ಯ ಹೂಡಿದರು</p></div>

ಕುಂದಾಪುರ ಸಮೀಪದ ನಾರ್ಕಳಿ ಗ್ರಾಮದ ಕೊರಗ ಸಮುದಾಯದವರ ಮನೆಯಲ್ಲಿ ಶಾಸಕ ಗುರುರಾಜ್‌ ಗಂಟಿಹೊಳೆ ಅವರು ವಾಸ್ತವ್ಯ ಹೂಡಿದರು

   

ಕುಂದಾಪುರ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪತ್ನಿ ಅನುರಾಧಾ ಅವರೊಂದಿಗೆ ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಸುರೇಂದ್ರ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.

ಪತ್ನಿ ಹಾಗೂ ಸೀಮಿತ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮನೆಗೆ ಬಂದ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕೊರಗ ಸಮುದಾಯದವರು, ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಹೇಳಿಕೊಂಡು, ಸಾಂಪ್ರದಾಯಿಕ ವಾದ್ಯಗಳ ಪರಿಚಯ ಮಾಡಿಕೊಟ್ಟರು. 

ADVERTISEMENT

‘ವಿದ್ಯೆಯಿಂದ ಮಾತ್ರ ಸಮುದಾಯಗಳು ಬೆಳೆಯಲು ಸಾಧ್ಯ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಸಮಸ್ಯೆ ಹಾಗೂ ಸಂಕಷ್ಟ ಹೇಳಿಕೊಳ್ಳಲು ಹಿಂಜರಿಕೆ ಬೇಡ‌. ನೆರವಾಗಿ ನನಗೆ ತಿಳಿಸಿ, ನಾನು ನಿಮ್ಮ ಧ್ವನಿಯಾಗುತ್ತೇನೆ’ ಎಂದು ಶಾಸಕರು ತಿಳಿಸಿದರು.

ಹರ್ಕೂರು ಗ್ರಾಮದ ಕೊರಗ ಸಮಾಜದ ಸಾಮಾಜಿಕ ಪರಿಸ್ಥಿತಿ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಶಾಸಕರು, ಸಮಸ್ಯೆಗಳ ಪರಿಹಾರದ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಕೊರಗ ಸಮುದಾಯ ಸಮಾಜದ ಮುಖ್ಯ ವಾಹಿನಿಯಿಂದ ನಿರ್ಲಕ್ಷಿತವಾದ ಸಮಾಜವಾಗಿದೆ ಎನ್ನುವ ಭಾವನೆ ಇನ್ನೂ ಇದೆ. ಈ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ನಿಂತು ಸಮುದಾಯದ ಎಲ್ಲರನ್ನು ಸುಶಿಕ್ಷಿತರನ್ನಾಗಿಸಿ ಮುಖ್ಯ ವಾಹಿನಿಗೆ ತರುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಯತ್ನ ಮಾಡಬೇಕು ಎಂದರು.

ಶಾಸಕರ ಪತ್ನಿ ಅನುರಾಧಾ ಅವರೊಂದಿಗೆ ಕೊರಗ ಸಮುದಾಯದ ಸ್ಥಳೀಯ ಮುತ್ತೈದೆಯರಿಗೆ ಬಾಗಿನ ನೀಡುವ ಮೂಲಕ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು.

ಶಿವರಾತ್ರಿಯ ಹಣಬು ಸುಡುವ ಆಚರಣೆ ಇದ್ದ ಕಾರಣಕ್ಕೆ ಸಸ್ಯಹಾರದ ಅಡುಗೆ ಮಾಡಲಾಗಿತ್ತು. ಸಂವಾದದ ಬಳಿಕ ಸಹ ಭೋಜನ ಮಾಡಿದ ಶಾಸಕ ಗಂಟಿಹೊಳೆ ಅವರು, ಸುರೇಂದ್ರ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.  

ಸಾಮಾಜಿಕ ಕಾರ್ಯಕರ್ತ, ವಕೀಲರಾದ ಸತೀಶ್ ಕಾಳವರ್ಕರ್, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಶೋಷಿತ ವರ್ಗಗಳ ನೋವು ಹಾಗೂ ಸಂಭ್ರಮವನ್ನು ಆಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಗುರುರಾಜ್ ಗಂಟಿಹೊಳೆ. ಶಾಸಕ ಬೈಂದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.