
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 28 ರಂದು ಉಡುಪಿಗೆ ಭೇಟಿ ನೀಡಲಿದ್ದು, ಈ ವೇಳೆ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು ಆದಿಉಡುಪಿಯ ಹೆಲಿಪ್ಯಾಡ್‌ನಲ್ಲಿ ಇಳಿದು ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವರು. ಬಳಿಕ ಲಕ್ಷ ಕಂಠ ಗೀತೋತ್ಸವದಲ್ಲಿ ಭಾಗವಹಿಸುವರು. ಈ ಸಂದರ್ಭದಲ್ಲಿ ಸರ್ಕಾರದ ನಿಯಮಾನುಸಾರ ಶಿಷ್ಟಾಚಾರ ಪಾಲಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸಚಿವರು ಬರುವ ನಿರೀಕ್ಷೆಯಿದ್ದು, ಅವರ ಸುರಕ್ಷತೆಗೂ ಒತ್ತು ನೀಡಬೇಕು. ಪ್ರಧಾನಿ ಹೆಲಿಪ್ಯಾಡ್‌ನಿಂದ ಕೃಷ್ಣ ಮಠಕ್ಕೆ ಸಂಚರಿಸುವ ರಸ್ತೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸರನ್ನು ನಿಯೋಜನೆಗೊಳಿಸಬೇಕು. ಕೋಲುಗಳನ್ನೊಳಗೊಂಡ ಭಾವುಟಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಜನರ ವಾಹನಗಳ ಸಂಚಾರ ಮಾರ್ಗ, ಅವುಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಗ್ನಿಶಾಮಕ ವಾಹನವನ್ನು ನಿಯೋಜಿಸಬೇಕು ಎಂದರು.
ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಆದ್ಯತೆಯ ಮೇಲೆ ಕೈಗೊಳ್ಳಬೇಕು. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಪ್ರಯಾಣಿಕರಿಗೆ ಬದಲಿ ಮಾರ್ಗ ಅನುಸರಿಸುವ ಬಗ್ಗೆ ಹಾಗೂ ಜನದಟ್ಟಣೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ ಭಾಗವಹಿಸಿದ್ದರು.
ಪ್ರಧಾನಿ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ರಸ್ತೆಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ಅನಧಿಕೃತ ಬ್ಯಾನರ್ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಬೇಕುಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ
‘ಬ್ಯಾಗ್ ನೀರಿನ ಬಾಟಲಿ ನಿಷೇಧ’
ಪ್ರಧಾನಿ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಬ್ಯಾಗ್ ನೀರಿನ ಬಾಟಲಿ ಧ್ವಜ ಸೇರಿದಂತೆ ಯಾವುದೇ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದ್ದು ಈ ಕುರಿತು ಜನರಿಗೆ ಮೊದಲೇ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಪ್ರಧಾನಿ ಭೇಟಿ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿ ಹಾಗೂ ಇತರ ಕಾಮಗಾರಿಗಳಿಗಾಗಿ ಶೇಖರಿಸಿರುವ ಜಲ್ಲಿ ಸೇರಿದಂತೆ ವಿವಿಧ ವಸ್ತುಗಳನ್ನು ತೆರವುಗೊಳಿಸುವುದರೊಂದಿಗೆ ನಗರದ ಶುಚಿತ್ವ ಕಾಪಾಡಬೇಕು ಎಂದರು.
ಶಾಲೆಗೆ ರಜೆ ಘೋಷಿಸಲು ಮನವಿ
ಜಿಲ್ಲೆಗೆ ಪ್ರಧಾನಿ ಭೇಟಿ ನೀಡುವ ದಿನದಂದು ಮಣಿಪಾಲ ಮಲ್ಪೆ ಹಾಗೂ ಉಡುಪಿ ನಗರ ವ್ಯಾಪ್ತಿಯ ಶಾಲಾ ಮಕ್ಕಳಿಗೆ ರಜೆ ಘೋಷಿಸಬೇಕು. ಗಣ್ಯ ವ್ಯಕ್ತಿಗಳಿಗೆ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪಾಸ್ ವಿತರಣೆ ಮಾಡಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಸಭೆಗೆ ತಿಳಿಸಿದರು. ಪ್ರಧಾನಿ ಭೇಟಿ ನೀಡುವುದರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಬಲ ದೊರಕಲಿದೆ ಎಂದರು.
ನಗರದೆಲ್ಲೆಡೆ ಭರದ ಸಿದ್ಧತೆ
ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿರುವ ಕಾರಣ ನಗರದೆಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ. ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಈಗಾಗಲೇ ಟೆಂಟ್ ನಿರ್ಮಾಣ ಕಾರ್ಯ ನಡೆದಿದೆ. ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ಹೆಲಿಕಾಪ್ಟರ್‌ನಿಂದ ಇಳಿಯಲಿರುವ ಆದಿ ಉಡುಪಿಯ ಹೆಲಿಪ್ಯಾಡ್‌ನ ಕಾಮಗಾರಿಯೂ ಭರದಿಂದ ನಡೆಯುತ್ತಿದೆ. ಕರಾವಳಿ ಬೈಪಾಸ್‌ನಿಂದ ಮಲ್ಪೆಗೆ ತೆರಳುವ ರಸ್ತೆಯಲ್ಲಿ ಆದಿ ಉಡುಪಿಯಿಂದ ಕರಾವಳಿ ಬೈಪಾಸ್ ವರೆಗಿನ ರಸ್ತೆ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ತಲುಪಿದೆ. ಪ್ರಧಾನಿಯವರು ಶ್ರೀಕೃಷ್ಣ ಮಠಕ್ಕೆ ತೆರಳಿರುವ ರಸ್ತೆಯಲ್ಲಿ ಬನ್ನಂಜೆ ಸೇರಿದಂತೆ ವಿವಿಧೆಡೆ ಬ್ಯಾರಿಕೇಡ್ ಸ್ಥಾಪಿಸುವ ಕೆಲಸ ನಡೆದಿದೆ. ರಸ್ತೆ ವಿಭಜಕದಲ್ಲಿ ಧ್ವಜಗಳನ್ನು ಕಟ್ಟುವ ಕಾರ್ಯವೂ ಭರದಿಂದ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.