ADVERTISEMENT

ಮುಂಗಾರು ವಿಳಂಬ: ನೀರಿಗೆ ಹಾಹಾಕಾರ

ಸ್ವರ್ಣಾ ನದಿ ಪಾತ್ರದಲ್ಲಿ ಸಂಗ್ರಹವಾಗಿದ್ದ ನೀರು ಬಹುತೇಕ ಖಾಲಿ

ಪ್ರಜಾವಾಣಿ ವಿಶೇಷ
Published 7 ಜೂನ್ 2019, 19:45 IST
Last Updated 7 ಜೂನ್ 2019, 19:45 IST
ಹಿರಿಯಡ್ಕ ಸಮೀಪದ ಪುತ್ತಿಗೆ ಮಠದ ಬಳಿ ಇರುವ ಹಳ್ಳದಲ್ಲಿರುವ ನೀರಿನ ಪ್ರಮಾಣ
ಹಿರಿಯಡ್ಕ ಸಮೀಪದ ಪುತ್ತಿಗೆ ಮಠದ ಬಳಿ ಇರುವ ಹಳ್ಳದಲ್ಲಿರುವ ನೀರಿನ ಪ್ರಮಾಣ   

ಉಡುಪಿ: ಜೂನ್‌ ಆರಂಭವಾದರೂ ಜಿಲ್ಲೆಗೆ ಮುಂಗಾರು ಕಾಲಿಡದಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ನೀರಿನ ಮೂಲಗಳೆಲ್ಲ ಬರಿದಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಮಳೆ ಸುರಿಯದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿಯೇ ಜಿಲ್ಲೆಗೆ ಮುಂಗಾರು ಪ್ರವೇಶಿಸಿತ್ತು. ಎಡೆಬಿಡದೆ ಸುರಿದ ಮಳೆಗೆ ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯ ತುಂಬಿ ಹರಿದಿತ್ತು. ಆದರೆ, ಈ ವರ್ಷ ಜೂನ್ 2ನೇ ವಾರವಾದರೂ ವರುಣನ ಆರ್ಭಟವಿಲ್ಲ.ಒಂದೆರಡು ಬಾರಿ ತುಂತುರು ಮಳೆಯಾಗಿದ್ದು ಬಿಟ್ಟರೆ ಇದುವರೆಗೂ ಬಿರುಸಾದ ಮಳೆ ಸುರಿದಿಲ್ಲ. ಕಳೆದ ವರ್ಷ ಮೈದುಂಬಿಕೊಂಡಿದ್ದ ಬಜೆ ಜಲಾಶಯ ಈಗ ತಳ ತಲುಪಿದೆ.

ಬತ್ತಿದ ಸ್ವರ್ಣೆ ಒಡಲು:ಈ ವರ್ಷ ಬಿರು ಬೇಸಿಗೆಯ ಕಾರಣಕ್ಕೆ ಮೇ ತಿಂಗಳ ಆರಂಭದಲ್ಲೇ ಬಜೆ ಜಲಾಶಯ ಬತ್ತಿದ್ದರಿಂದ ನಗರಸಭೆ ಸ್ವರ್ಣಾ ನದಿ ಪಾತ್ರದಲ್ಲಿ ಡ್ರೆಜಿಂಗ್ ಮಾಡಿತ್ತು. ಮಾಣೈ, ಭಂಡಾರಿಬೆಟ್ಟು ಹಳ್ಳಗಳಲ್ಲಿ ಸಂಗ್ರಹವಾಗಿದ್ದ ನೀರನ್ನು ಬೃಹತ್ ಪಂಪ್‌ಸೆಟ್‌ಗಳ ಮೂಲಕ ಎತ್ತಿ ಜಲಾಶಯದ ಜಾಕ್‌ವೆಲ್‌ಗೆ ಹರಿಸಲಾಗಿತ್ತು.

ADVERTISEMENT

ಲಭ್ಯ ನೀರನ್ನು ಹಂಚಲು ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸಿ 35 ವಾರ್ಡ್‌ಗಳನ್ನು 6 ವಿಭಾಗಗಳನ್ನಾಗಿ ವಿಂಗಡಿಸಿ 6 ದಿನಗಳಿಗೊಮ್ಮೆ ವಾರ್ಡ್‌ವಾರು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು.

ನೀರಿನ ಮೂಲಗಳಾಗಿದ್ದ ಮಾಣೈ, ಭಂಡಾರಿಬೆಟ್ಟು ಹಳ್ಳಗಳು ವಾರದ ಹಿಂದೆಯೇ ಬರಿದಾಗಿದ್ದು, ಈಗ ಪುತ್ತಿಗೆ ಮಠದ ಸೇತುವೆ ಬಳಿ ಡ್ರೆಜಿಂಗ್ ನಡೆಯುತ್ತಿದೆ. ಅಲ್ಲಿಯೂ ನೀರು ಖಾಲಿಯಾಗುತ್ತಿದ್ದು, ಮುಂದೆ ನೀರು ಎತ್ತುವುದು ಎಲ್ಲಿಂದ ಎಂಬ ಪ್ರಶ್ನೆ ಕಾಡುತ್ತಿದೆ.

ಈಗಾಗಲೇ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಪರ್ಯಾಯ ಮೂಲಗಳಾಗಿದ್ದ ಬಾವಿಗಳಲ್ಲಿ ನೀರಿನ ಮಟ್ಟ ಪಾತಾಳ ತಲುಪಿದ್ದು, ತಳದಲ್ಲಿ ಕೆಸರು ಕಾಣುತ್ತಿದೆ.

ಟ್ಯಾಂಕರ್ ನೀರೂ ಸಿಗುತ್ತಿಲ್ಲ:ಬೇಡಿಕೆಯಷ್ಟು ಟ್ಯಾಂಕರ್‌ ನೀರು ಸಿಗುತ್ತಿಲ್ಲ. ದೂರದ ಹಳ್ಳಗಳಿಂದ ಕುಡಿಯಲು ಯೋಗ್ಯವಿಲ್ಲದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್‌ಗೆ ದುಬಾರಿ ಹಣ ತೆರಲು ಸಿದ್ಧರಿದ್ದರೂ ಶುದ್ಧ ನೀರು ಸಿಗುತ್ತಿಲ್ಲ.

ನೀರಿನ ಸಮಸ್ಯೆ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟುಕೊಟ್ಟಿದ್ದು, ಹಲವು ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಕೆಲವು ಹೋಟೆಲ್‌ಗಳಲ್ಲಿ ನೀರಿನ ಮಿತ ಬಳಕೆಗೆ ಬೋರ್ಡ್‌ಗಳನ್ನು ಹಾಕಲಾಗಿದೆ. ಕಾಗದದ ಪ್ಲೇಟ್‌, ಲೋಟಗಳನ್ನು ಬಳಸಲಾಗುತ್ತಿದೆ.

ಸಾರ್ವಜನಿಕ ಶೌಚಾಲಯಗಳಲ್ಲೂ ನೀರಿಗೆ ಸಮಸ್ಯೆ ಎದುರಾಗಿದೆ. ಹಲವು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ನೀರು ಸಿಗದೆ ಮಧ್ಯಾಹ್ನ ಶಾಲೆಗಳಿಗೆ ರಜೆ ನೀಡಲಾಗುತ್ತಿದೆ. ಕೂಡಲೇ ಮಳೆಬಿದ್ದರೆ ಮಾತ್ರ ನೀರಿನ ಸಮಸ್ಯೆ ಬಗೆಹರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.