ADVERTISEMENT

ಮೋಟೊ ಮಣಿಪಾಲ್‌ ತಂಡಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ

ಆನ್‌ಲೈನ್‌ ಇ–ಬೈಕ್ ಡಿಸೈನ್‌ ಚಾಲೆಂಜ್ ಸೀಸನ್‌–2 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಪ್ರಜಾವಾಣಿ ವಿಶೇಷ
Published 7 ಏಪ್ರಿಲ್ 2021, 15:09 IST
Last Updated 7 ಏಪ್ರಿಲ್ 2021, 15:09 IST
ಪ್ರಶಸ್ತಿ ಪಡೆದುಕೊಂಡ ಮೋಟೊ ಮಣಿಪಾಲ್‌ ತಂಡದ ಸೂಪರ್ ಬೈಕ್ ಡಿಸೈನ್‌
ಪ್ರಶಸ್ತಿ ಪಡೆದುಕೊಂಡ ಮೋಟೊ ಮಣಿಪಾಲ್‌ ತಂಡದ ಸೂಪರ್ ಬೈಕ್ ಡಿಸೈನ್‌   

ಉಡುಪಿ: ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ‘ಮೋಟೊ ಮಣಿಪಾಲ್’ ತಂಡ ಈಚೆಗೆ ನಡೆದ ರಾಷ್ಟ್ರೀಯ ಆನ್‌ಲೈನ್‌ ಇ–ಬೈಕ್ ಡಿಸೈನ್‌ ಚಾಲೆಂಜ್ ಸೀಸನ್‌–2 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಫ್ರೆಟರ್ನಿಟಿ ಆಫ್ ಮೆಕ್ಯಾನಿಕಲ್‌ ಅಂಡ್ ಆಟೊಮೋಟಿವ್ ಎಂಜಿನಿಯರ್ಸ್‌ ಸಂಸ್ಥೆ ಸ್ಪರ್ಧೆ ಆಯೋಜಿಸಿತ್ತು. ಮಾರ್ಚ್‌ 28ರಂದು ನಡೆದ ಅಂತಿಮ ಸುತ್ತಿನಲ್ಲಿ ಮೋಟೊ ಮಣಿಪಾಲ್‌ ತಂಡದ 2 ಕಿಲೋ ವ್ಯಾಟ್‌ ಸಾಮರ್ಥ್ಯದ ಬ್ರಶ್‌ಲೆಸ್‌ ಮೋಟಾರ್‌ ಹಾಗೂ ಸಿಎಡಿ, ಸಿಎಇ ಸಾಫ್ಟ್‌ವೇರ್ ಮಾದರಿಗಳನ್ನು ಬಳಸಿಕೊಂಡು ತಯಾರಿಸಲಾಗಿದ್ದ ಆಕರ್ಷಕ ಎಲೆಕ್ಟ್ರಿಕ್ ಬೈಕ್‌ ಮಾಡೆಲ್‌ ತೀರ್ಪುಗಾರರ ಗಮನ ಸೆಳೆಯಿತು.

ಸ್ಪರ್ಧೆಯಲ್ಲಿದ್ದ ಎಲ್ಲ 7 ತಂಡಗಳನ್ನು ಹಿಂದಿಕ್ಕಿದ ಮೋಟೊ ಮಣಿಪಾಲ್ ಪ್ರಥಮ ಸ್ಥಾನ ಪಡೆಯಿತು. ಕಳೆದ 5 ತಿಂಗಳುಗಳಿಂದ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ತಂಡದ ಸದಸ್ಯರು ನೇರ ಸಂಪರ್ಕ ಮಾಡಲು ಸಾಧ್ಯವಾಗಿರಲಿಲ್ಲ. ಎಲ್ಲರೂ ಪ್ರತಿದಿನ ಕೆಲವು ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಅಂತಿಮವಾಗಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ತಂಡದ ಸುಪ್ರೀತ್ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು.

ADVERTISEMENT

ಕಳೆದ ವರ್ಷ ನಡೆದ ನ್ಯಾಷನಲ್‌ ಆನ್‌ಲೈನ್‌ ಇ ಬೈಕ್ ಡಿಸೈನ್ ಚಾಂಪಿಯನ್ ಶಿಪ್ ಸೀಸನ್‌ 1ರಲ್ಲೂ ಮೋಟೊ ಮಣಿಪಾಲ್‌ ಚಾಂಪಿಯನ್ ಆಗಿತ್ತು. ಇದೇ ವರ್ಷ ನಡೆಯಲಿರುವ ದೇಶದ ಅತಿದೊಡ್ಡ ಎಲೆಕ್ಟ್ರಿಕ್‌ ಮೋಟಾರ್ ಬೈಕ್ ಚಾಂಪಿಯನ್‌ ಶಿಪ್‌ ಆಗಿರುವ ‘ಮೋಟೊ ಸ್ಟುಡೆಂಟ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸುವ ಗುರಿ ಇದೆ ಎಂದರು ಸುಪ್ರೀತ್‌.

ಮೋಟೊ ಮಣಿಪಾಲ್ ತಂಡ ಈಗಾಗಲೇ ಎಂಎಂ01 ಹೆಸರಿನ ಕಮರ್ಷಿಯಲ್‌ ಎಲೆಕ್ಟ್ರಿಕ್ ಬೈಕ್‌ ತಯಾರಿಸಿದ್ದು, ಎಂಎಂ02 ಹೆಸರಿನ ಎರಡನೇ ಇ ಬೈಕ್‌ ನಿರ್ಮಾಣದಲ್ಲಿ ತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.