ADVERTISEMENT

ಯಕ್ಷಗಾನ ಪ್ರಸಂಗಕ್ಕೆ ಸಾಹಿತ್ಯಿಕ ಮೌಲ್ಯ ಕೊಟ್ಟ ಮುದ್ದಣ: ಪ್ರೊ.ಎಂ.ಎಲ್‌. ಸಾಮಗ

‘ಮುದ್ದಣ–150’ ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಲ್‌. ಸಾಮಗ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 3:46 IST
Last Updated 21 ಫೆಬ್ರುವರಿ 2020, 3:46 IST
ನಗರದ ಪಿಪಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಮುದ್ದಣ–150’ ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಲ್‌. ಸಾಮಗ ಮಾತನಾಡಿದರು.
ನಗರದ ಪಿಪಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಮುದ್ದಣ–150’ ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಲ್‌. ಸಾಮಗ ಮಾತನಾಡಿದರು.   

ಉಡುಪಿ: ಯಕ್ಷಗಾನ ಪ್ರಸಂಗಗಳು ಸಾಹಿತ್ಯಿಕ ಮೌಲ್ಯ ಹೊಂದಿವೆ ಎಂಬುದನ್ನು ಸಾಹಿತ್ಯ ವಲಯದ ಮುಂದೆ ಸಾಬೀತುಪಡಿಸಲು ಕವಿ ಮುದ್ದಣ ಬರೆದ ರತ್ನಾವತಿ ಕಲ್ಯಾಣ ಹಾಗೂ ಕುಮಾರ ವಿಜಯ ಗ್ರಂಥಗಳು ಪ್ರಬಲವಾದ ಆಧಾರಗಳು ಎಂದು ಪ್ರೊ.ಎಂ.ಎಲ್‌. ಸಾಮಗ ಅಭಿಪ್ರಾಯಪಟ್ಟರು.

ನಗರದ ಪಿಪಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಮುದ್ದಣ–150’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುದ್ದಣನ ಹೆಸರು ಸಾಹಿತ್ಯ ವಲಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಕಾರಣವಾದ ಮತ್ತೊಂದು ಗ್ರಂಥ ರಾಮಾಶ್ವಮೇಧ. ಮುದ್ದಣನ ಹಳೆಗನ್ನಡದಲ್ಲಿ ಕರಾವಳಿಯ ಆಡುಭಾಷೆಯಾದ ತುಳುಭಾಷೆಯ ಲಯ ಮೇಳೈಸಿದೆ. ಕನ್ನಡ ಭಾಷಾ ಲೋಕಕ್ಕೆ ಹೊಸಪದಗಳನ್ನು ಠಂಕಿಸಿದ ಕೀರ್ತಿ ಮುದ್ದಣಗೆ ಸಲ್ಲುತ್ತದೆ ಎಂದರು.

ಕಲ್ಪನೆ ಹಾಗೂ ನಾಣ್ಣುಡಿ ಬಳಸಿಕೊಂಡು ಹೊಸ ಪದಗಳನ್ನು ಸೃಷ್ಟಿಸುವದರಲ್ಲಿ ಮುದ್ದಣ ಮೊದಲಿಗರು. ಇಂಥಹ ಮಹಾನ್‌ ಕವಿ ಬದುಕಿದ್ದಾಗ ಕವಿತೆಗಳನ್ನು ಪ್ರಕಾಶಿಸಲು ಬಹಳ ಕಷ್ಟಪಡಬೇಕಾಯಿತು ಎಂಬುದು ವಿಷಾದದ ಸಂಗತಿ ಎಂದರು.‌

ADVERTISEMENT

ಆರಂಭದಲ್ಲಿ ಮುದ್ದಣ ಬರೆದ ಗ್ರಂಥಗಳನ್ನು ಪ್ರಕಟಿಸಲು ಪ್ರಕಾಶಕರು ಆಸಕ್ತಿ ತೋರುತ್ತಿರಲಿಲ್ಲ. ಕವಿತೆಯೊಳಗಿನ ಹೊಸತನ, ಹೊಸ ಪದಗಳ ಪ್ರಯೋಗದ ಅರಿವಿಲ್ಲದೆ ತಾತ್ಸಾರ ತೋರುತ್ತಿದ್ದರು. ಇದರಿಂದ ತೀವ್ರ ಮನನೊಂದು ಮುದ್ದಣ ಬೇರೆ ಹೆಸರಿನಲ್ಲಿ ಪ್ರಕಟಣೆಗೆ ಕಳಿಸುತ್ತಿದ್ದರು. ಮುದ್ದಣನ ಮರಣಾನಂತರ ಅವರ ಬರಹಗಳಿಗೆ ಬೆಲೆ ಬಂತು ಎಂದು ಪ್ರೊ.ಎಂ.ಎಲ್‌.ಸಾಮಗ ಬೇಸರ ವ್ಯಕ್ತಪಡಿಸಿದರು.

ಕನ್ನಡ ಭಾಷೆಯ ಮೇಲೆ ಬಿಗಿಯಾದ ಹಿಡಿತ ಹೊಂದಿದ್ದ ಮುದ್ದಣ್ಣ ಹೊಸತನದ ಭಾಷಾ ಸೊಗಡನ್ನು ಓದುಗರ ಮುಂದಿಟ್ಟರು. ಅವರ ಬರಹಗಳು ದೇಶದ ಗಡಿ ಮೀರಿ ವಿದೇಶಗಳನ್ನೂ ತಲುಪಿ ಪ್ರಸಿದ್ಧವಾದವರು. ಕರಾವಳಿಯ ಯಕ್ಷಗಾನ ಪ್ರಸಂಗಕ್ಕೆ ಸಾಹಿತ್ಯದ ಸ್ಥಾನ ದೊರೆಯುವಲ್ಲಿ ಕಾರಣೀಕರ್ತರಾದ ಮುದ್ದಣನಿಗೆ ಕರಾವಳಿಗರು ಸದಾ ಕೃತಜ್ಞರಾಗಿರಬೇಕು ಎಂದರು.

ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ,ಮಕ್ಕಳು ಮುದ್ದಣ್ಣನ ಜೀವನ ಚರಿತ್ರೆ ಹಾಗೂ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಲೌಕಿಕ ಹಾಗೂ ಆಧ್ಯಾತ್ಮಿಕ ಲಾಭ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.‌

ಪಿಪಿಸಿ ಕಾಲೇಜು ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಸಾಹಿತ್ಯ ಸಂಸ್ಕಾರ ಬೆಳೆದರೆ ದೇಶದ ಸಂಸ್ಕೃತಿ ಶ್ರೀಮಂತವಾಗುತ್ತದೆ. ಬರಹಗಳಿಗೆ ದೇಶವನ್ನು ತಿದ್ದುವ ಶಕ್ತಿ ಇದೆ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಎ.ರಾಘವೇಂದ್ರ, ನಂದಳಿಕೆ ಬಾಲಚಂದ್ರ ರಾವ್‌, ಡಾ.ಪ್ರಜ್ಞಾ ಮಾರ್ಪಳ್ಳಿ, ಶಿವಕುಮಾರ್‌ ಡಾ.ಶ್ರೀಕಾಂತ್ ಸಿದ್ದಾಪುರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.