
ಉಡುಪಿ: ಸಂಶೋಧನೆ ಎಂದರೆ ಇರುವುದನ್ನೇ ಚಂದವಾಗಿ ಬರೆಯುವುದಲ್ಲ. ಹಾಗೇ ಮಾಡಿದರೆ ಅದರಲ್ಲಿ ಸತ್ವ ಇರುವುದಿಲ್ಲ. ಸಂಶೋಧನೆಯು ಭಾಷೆಯ ಆಳಕ್ಕಿಳಿದು ಅರ್ಥಗಳೊಂದಿಗೆ ಅನುಸಂಧಾನ ನಡೆಸುವಂತಿರಬೇಕು ಎಂದು ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಿರಿಜಾ ಶಾಸ್ತ್ರಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಪ್ರಬಂಧಗಳು ರಚನೆಯಾಗುವುದಕ್ಕಿಂತ ಅವುಗಳ ಪ್ರತಿಫಲನಗಳು ಮುಂದಿನ ಅಧ್ಯಯನಕ್ಕೆ ಹೇಗೆ ತೆರೆದುಕೊಳ್ಳುತ್ತದೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಯುವ ಪೀಳಿಗೆಯು ಮುಳಿಯ ತಿಮ್ಮಪ್ಪಯ್ಯನವರ ಓದಿನಿಂದ ದೂರ ಸರಿಯುತ್ತಿದ್ದಾರೆ. ಈ ಕಾರಣಕ್ಕೆ ಮುಳಿಯ ಅವರ ಕೃತಿಗಳ ಸಮಗ್ರ ಸಂಪುಟ ಹೊರತರಬೇಕಾದ ಅಗತ್ಯ ಇದೆ. ಮುಳಿಯ ಅವರ ಬಗ್ಗೆ ಸುಬ್ರಹ್ಮಣ್ಯ ಭಟ್ ಎಂಬುವವರು ಪಿಎಚ್.ಡಿ. ಮಾಡಿದ್ದು, ಅದನ್ನು ಪ್ರಕಟಿಸುವ ಕೆಲಸ ಆಗಬೇಕು ಎಂದರು.
ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್ಟ ಅವರು ಕಾವ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸಮಾನವಾಗಿ ಕೆಲಸ ಮಾಡಿದ್ದಾರೆ. ಈ ಜಿಲ್ಲೆಗಳ ಲೇಖಕರ ಕೃತಿಗಳಲ್ಲಿ ಇಲ್ಲಿನ ಮಣ್ಣಿನ ಸತ್ವ ಇದೆ. ಅದುವೇ ಅವರ ಶಕ್ತಿಯಾಗಿದೆ. ಅವರು ನೆಲದ ಮೂಲಕ ಕಾವ್ಯ ಕಟ್ಟಿದ್ದಾರೆ. ಕರಾವಳಿಯ ಗ್ರಾಮೀಣ ಪ್ರದೇಶಗಳ ಒಳನೋಟವು ಅವರ ಕೃತಿಗಳಲ್ಲಿ ಮೂಡಿ ಬಂದಿವೆ ಎಂದು ತಿಳಿಸಿದರು.
ಜಿಲ್ಲೆಯ ಹಿರಿಯ ಸಾಹಿತಿಗಳ ಹಿರಿಮೆಯನ್ನು ಜಗತ್ತಿಗೆ ತಿಳಿಸುವ ಅಗತ್ಯ ಇದೆ. ಅದಕ್ಕೆ ಕರಾವಳಿಯ ಜನರ ಬೆಂಬಲ ಅಗತ್ಯವಾಗಿದೆ ಎಂದು ಅವರು ಹೇಳಿದರು.
ನಿವೃತ್ತ ಪ್ರಾಧ್ಯಾಪಕಿ ಸರಸ್ವತಿ ಕುಮಾರಿ ಮಾತನಾಡಿ, ಗಿರಿಜಾ ಶಾಸ್ತ್ರಿ ಅವರು ಸಮಕಾಲೀನ ಬರಹಗಾರರ ಕೃತಿಗಳ ಒಳ ಹೊಕ್ಕು ಅದರಲ್ಲಿನ ಮಹಿಳಾ ಸಂವೇದನೆಯನ್ನು ಅಧ್ಯಯನ ಮಾಡಿದ್ದಾರೆ. ಸ್ತೀವಾದಕ್ಕೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದಾರೆ ಎಂದರು.
ಬರೆಯುವ ಕಲೆ ಗಿರಿಜಾ ಶಾಸ್ತ್ರಿ ಅವರಿಗೆ ಬರೀ ಮೆರುಗಲ್ಲ ಬದಲಾಗಿ ತನ್ನ ಬದುಕಿನ ಸಂವೇದನಾಶೀಲ ಭಾವನೆಯನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮವಾಗಿದೆ ಎಂದು ಹೇಳಿದರು.
ಸಾಹಿತಿ ನಾ. ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಳಿಯ ರಾಘವಯ್ಯ, ಮುಳಿಯ ಗೋಪಾಲಕೃಷ್ಣ ಭಟ್ ಇದ್ದರು.
ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ತುಂಗ ನಿರೂಪಿಸಿದರು. ನರಸಿಂಹ ಮೂರ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಗಿರಿಜಾ ಶಾಸ್ತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.