ADVERTISEMENT

ಕೋಳ್ಯೂರು ರಾಮಚಂದ್ರ ರಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 15:39 IST
Last Updated 15 ಫೆಬ್ರುವರಿ 2022, 15:39 IST
ಕೋಳ್ಯೂರು ರಾಮಚಂದ್ರ ರಾಯರು
ಕೋಳ್ಯೂರು ರಾಮಚಂದ್ರ ರಾಯರು   

ಉಡುಪಿ: ದಿ.ಮುಳಿಯ ತಿಮ್ಮಪ್ಪಯ್ಯ ಅವರ ಸ್ಮರಣಾರ್ಥ ಕೊಡಮಾಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಯಕ್ಷಗಾನ ಕಲಾಸಾಧಕ ಕೋಳ್ಯೂರು ರಾಮಚಂದ್ರ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್‌ ಶೆಟ್ಟಿ ತಿಳಿಸಿದ್ದಾರೆ.

ಪ್ರಶಸ್ತಿಯು ₹ 10,000 ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದ್ದು, ಮಾರ್ಚ್‌ನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೋಳ್ಯರು ಅವರ ಕುರಿತು

ADVERTISEMENT

ಕೋಳ್ಯೂರು ರಾಮಚಂದ್ರ ರಾಯರು ಹುಟ್ಟಿದ್ದು ಬಂಟ್ವಾಳ–ಕಾಸರಗೋಡು ಗಡಿಭಾಗದ ಕರೋಪಾಡಿ–ಕೋಡ್ಲದಲ್ಲಿ. ಧರ್ಮಸ್ಥಳ ಮೇಳದಲ್ಲಿ ಗೆಜ್ಜೆಕಟ್ಟಿ, ಕುರಿಯ ವಿಠಲಶಾಸ್ತ್ರಿಗಳ ಗುರುತ್ವದಲ್ಲಿ ಕುಂಬ್ಳೆ ರಾಮಚಂದ್ರ ಅವರಿಂದ ಹೆಜ್ಜೆ ಕಲಿತರು. ಕಟೀಲು, ಕೂಡ್ಲು, ಸುರತ್ಕಲ್, ಕದ್ರಿ, ಕರ್ನಾಟಕ ಬಪ್ಪನಾಡು ಮೇಳಗಳಲ್ಲಿ ಕೋಳ್ಯೂರು 7 ದಶಕಗಳ ತಿರುಗಾಟ ನಡೆಸಿದ್ದಾರೆ.

ಅವರ ಸಾಧನೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.