ADVERTISEMENT

ಮೂಳೂರು: ತೀವ್ರಗೊಂಡ ಕಡಲ್ಕೊರೆತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 16:22 IST
Last Updated 14 ಜೂನ್ 2023, 16:22 IST
ಕಾಪುವಿನ ಲೈಟ್‌ಹೌಸ್ ಬಳಿಯೂ ಕಡಲ್ಕೊರೆತ ಭೀತಿ ಉಂಟಾಗಿದೆ.
ಕಾಪುವಿನ ಲೈಟ್‌ಹೌಸ್ ಬಳಿಯೂ ಕಡಲ್ಕೊರೆತ ಭೀತಿ ಉಂಟಾಗಿದೆ.   

ಕಾಪು(ಪಡುಬಿದ್ರಿ): ಚಂಡುಮಾರುತದಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು, ತಾಲ್ಲೂಕಿನ ಮೂಳೂರು ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.

ಎರಡು ದಿನಗಳಿಂದ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಮೂಳೂರಿನಲ್ಲಿ ಕಡಲ್ಕೊರೆತ ತಡೆಗೆ ಅಳವಡಿಸಿದ ಬಂಡೆಕಲ್ಲುಗಳು ಸಮುದ್ರದ ಒಡಲು ಸೇರುತ್ತಿವೆ. ಅಲ್ಲದೆ ಸಮುದ್ರ ತೀರದ ತೆಂಗಿನ ಮರಗಳು, ಭೂಭಾಗ ಸಮುದ್ರ ಪಾಲಾಗುತ್ತಿವೆ. ಕಡಲತೀರದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಲತಾ ಎಸ್. ಪೂಜಾರಿ, ರತ್ನಾ ಪೂಜಾರಿ, ಲೀಲಾ ಪೂಜಾರಿ, ಮಹಾಲಿಂಗ ಪೂಜಾರಿ, ದಿನೇಶ್ ಪೂಜಾರಿ, ನಳಿನಾಕ್ಷಿ ಪೂಜಾರಿ ಅವರ ಜಾಗದಲ್ಲಿ ತೀವ್ರ ಕೊರೆತ ಉಂಟಾಗಿದೆ. ಕಳೆದ ವರ್ಷ ಕಡಲ್ಕೊರೆತ ದೊಡ್ಡ ಪ್ರಯಾಣದಲ್ಲಿ ಆದಾಗ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಆದರೆ ನಂತರ ವ್ಯವಸ್ಥಿತವಾಗಿ ತಡೆಗೋಡೆ ನಿರ್ಮಿಸದೆ ಈ ಬಾರಿಯೂ ಕಡಲ್ಕೊರೆತ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಲೈಟ್‌ಹೌಸ್ ಬೀಚ್‌ನಲ್ಲೂ ಕಡಲ್ಕೊರೆತ ಭೀತಿ ಉಂಟಾಗಿದ್ದು, ಬೃಹತ್ ಗಾತ್ರದ ಅಲೆಗಳು ಬಂಡೆಗೆ ಅಪ್ಪಳಿಸುತ್ತಿವೆ. ಲೈಟ್‌ಹೌಸ್ ಸುತ್ತಲೂ ಸಮುದ್ರ ನೀರು ಆವೃತವಾಗಿದೆ. ಪಡುಬಿದ್ರಿ ಮುಖ್ಯ ಬೀಚ್ ಹಾಗೂ ಬ್ಲೂಫ್ಲ್ಯಾಗ್ ಬೀಚ್ ಪರಿಸರದಲ್ಲೂ ಕಡಲ್ಕೊರೆತ ಭೀತಿ ಎದುರಾಗಿದೆ. ಸಮುದ್ರ ತೀರಕ್ಕೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ಪ್ರವಾಸಿಗರ ಸುರಕ್ಷತೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಕಾಪು ತಾಲೂಕಿನ ಮೂಳೂರು ಪರಿಸರದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.