ADVERTISEMENT

ಪರ್ಮಿಟ್‌ ಮಾರ್ಗದಲ್ಲಿ ಓಡದ ಬಸ್‌ಗಳು: ಪ್ರಯಾಣಿಕರಿಗೆ ಸಂಕಷ್ಟ

ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ, ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:39 IST
Last Updated 30 ಸೆಪ್ಟೆಂಬರ್ 2022, 16:39 IST
ಉಡುಪಿಯ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಚರ್ಚೆ ನಡೆಸಿದರು.
ಉಡುಪಿಯ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಚರ್ಚೆ ನಡೆಸಿದರು.   

ಉಡುಪಿ: ಪರ್ಮಿಟ್‌ ಇದ್ದರೂ ಅಂಬಾಗಿಲು–ಗುಂಡಿಬೈಲು–ಕಲ್ಸಂಕ ರಸ್ತೆಯಲ್ಲಿ ಬಸ್‌ಗಳು ಸಮರ್ಪಕವಾಗಿ ಸಂಚರಿಸದ ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಗಿದೆ. ನಿಯಮ ಉಲ್ಲಂಘಿಸುವ ಬಸ್‌ಗಳ ಪರ್ಮಿಟ್‌ಗಳನ್ನು ಆರ್‌ಟಿಒ ರದ್ದುಗೊಳಿಸಬೇಕು ಎಂಬ ಒತ್ತಾಯ ಶುಕ್ರವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಭಾಕರ್ ಪೂಜಾರಿ, ಪರ್ಮಿಟ್ ಇರುವ ಮಾರ್ಗಗಳಲ್ಲಿ ಬಸ್ ಸಂಚರಿಸದಿದ್ದರೂ ಆರ್‌ಟಿಒ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ ‘ಪರ್ಮಿಟ್ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸದ ವಿಚಾರ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಮಧ್ಯೆ ಪ್ರವೇಶಿಸಿದ ಶಾಸಕ ರಘುಪತಿ ಭಟ್, ನರ್ಮ್ ಹಾಗೂ ಖಾಸಗಿ ಬಸ್‌ಗಳು ಪೈಪೋಟಿ ನೆಪದಲ್ಲಿ ಒಂದೇ ಮಾರ್ಗದಲ್ಲಿ ಸಂಚರಿಸುವ ಬದಲು, ಬಸ್‌ಗಳು ಕಡಿಮೆ ಇರುವ ಮಾರ್ಗಗಳಲ್ಲಿ ನರ್ಮ್ ಬಸ್‌ಗಳನ್ನು ಹೆಚ್ಚು ಓಡಿಸಬೇಕು ಎಂದು ಸಲಹೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಕಠಿಣ ನಿಯಮಾವಳಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, 5 ವರ್ಷ ಹಳೆಯ ಮನೆಗೆ ಮೇಲಂತಸ್ತು ನಿರ್ಮಾಣ ಮಾಡಲು ಏಕ ನಿವೇಶನ ಇಲ್ಲದಿದ್ದರೂ ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಬೇಕು ಎಂಬು ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ನಗರದಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಕಾಂಗ್ರೆಸ್‌ ಸದಸ್ಯ ರಮೇಶ್ ಕಾಂಚನ್ವಿಷಯ ಪ್ರಸ್ತಾಪಿಸಿ, ರಸ್ತೆಗಳಲ್ಲಿರುವ ಹೊಂಡ ಗುಂಡಿಗಳಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಅಪಘಾತಗಳು ಹೆಚ್ಚುತ್ತಿವೆ ಎಂದು ದೂರಿದರು.

ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿ ಮಳೆಗಾಲದಲ್ಲಿ ರಸ್ತೆ ದುರಸ್ತಿ ಹಾಗೂ ಗುಂಡಿಗಳನ್ನು ಮುಚ್ಚಿದರೆ ಮಳೆಗೆ ಮತ್ತೆ ಗುಂಡಿಗಳು ಬೀಳಲಿವೆ. ಹಾಗಾಗಿ ಮಳೆ ಕಡಿಮೆಯಾದ ಬಳಿಕ ನವೆಂಬರ್‌ನಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.

ರಸ್ತೆ ಕಾಮಗಾರಿಗಳಿಗೆ, ಗುಂಡಿಗಳನ್ನು ಮುಚ್ಚಲು ನಗರಸಭೆಯಲ್ಲಿ ಅನುದಾನದ ಕೊರತೆ ಇಲ್ಲ. ಮಳೆ ನಿಂತ ಕೂಡಲೇ ಉಡುಪಿ ನಗರವನ್ನು ಗುಂಡಿಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಮಲ್ಪೆ ಹೆದ್ದಾರಿ ವಿಸ್ತರಣೆ ಪ್ರಕ್ರಿಯೆಗೆ ಕೇಂದ್ರದಲ್ಲಿ ಚುರುಕು ಸಿಕ್ಕಿದ್ದು ತ್ರಿಡಿ ಹಂತದಲ್ಲಿದೆ. ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ. ಹದಗೆಟ್ಟಿರುವ ಅಂಬಾಗಿಲು–ಗುಂಡಿಬೈಲು ರಸ್ತೆ ದುರಸ್ತಿಗೆ ₹ 2 ಕೋಟಿ ಬಿಡುಗಡೆಯಾಗಿದ್ದು ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಗರಸಭೆಯಿಂದ ₹ 1 ಲಕ್ಷದವರೆಗಿನ ‘ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆ ಕಾರ್ಡ್’ಗಳನ್ನು ಫಲಾನುಭವಿಗಳಿಗೆ ಶಾಸಕ ರಘುಪತಿ ಭಟ್ ವಿತರಿಸಿದರು.

ನಗರಸಭೆಯಲ್ಲಿ ಕಮಿಷನ್ ವಾಗ್ವಾದ

ನಗರಸಭೆ ಸಾಮಾನ್ಯ ಸಭೆಯಲ್ಲಿ ಶೇ 40 ಪರ್ಸೆಂಟ್ ಕಮಿಷನ್ ವಿಚಾರ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಗಿರೀಶ್ ಅಂಚನ್‌ ಈಚೆಗೆ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ರಘುಪತಿ ಭಟ್‌ ಶೇ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂದು ಆರೋಪಿಸಲಾಗಿದೆ. ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ. ಯಾರೂ ಕಮಿಷನ್ ಪಡೆದುಕೊಂಡಿಲ್ಲ ಎಂದರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ರಮೇಶ್ ಕಾಂಚನ್ ಪ್ರತಿಭಟನೆ ಮಾಡುವುದು ವಿರೋಧ ಪಕ್ಷದ ಹಕ್ಕು ಎಂದು ಸಮರ್ಥಿಸಿಕೊಂಡರು. ಶಾಸಕ ರಘುಪತಿ ಭಟ್ ಮಾತನಾಡಿ, ಯಾರಿಂದಲೂ ಜನಪ್ರತಿನಿಧಿಗಳು 40 ಪರ್ಸೆಂಟ್‌ ಕಮಿಷನ್ ಪಡೆದುಕೊಂಡಿಲ್ಲ. ಆರೋಪ ಸುಳ್ಳು ಎಂದರು.

ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಕೊಳ, ಪೌರಾಯುಕ್ತ ಕೆ.ಉದಯ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.