ADVERTISEMENT

ಉಡುಪಿ: ಇಬ್ಬುಡ್ಲ ಹಣ್ಣಿಗೂ ಕುದುರಿದ ಬೇಡಿಕೆ

ಹಿರಿಯಡ್ಕದ ಬೊಮ್ಮರಬೆಟ್ಟಿನ ಸುರೇಶ್ ನಾಯಕ್‌ ಹೊಲದಲ್ಲಿ ಬಗೆ ಬಗೆ ಹಣ್ಣಿನ ಬೆಳೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:43 IST
Last Updated 4 ಫೆಬ್ರುವರಿ 2026, 2:43 IST
ಇಬ್ಬುಡ್ಲ ಹಣ್ಣು
ಇಬ್ಬುಡ್ಲ ಹಣ್ಣು   

ಉಡುಪಿ: ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಮಸ್ಕ್‌ ಮೆಲನ್‌ ವರ್ಗಕ್ಕೆ ಸೇರಿದ ಇಬ್ಬುಡ್ಲ ಹಣ್ಣಿಗೂ ಬೇಡಿಕೆ ಕುದುರಿದೆ.

ಜಿಲ್ಲೆಯ ಕೆಲವು ರೈತರು ಸೌತೆಕಾಯಿ ಕೃಷಿಯೊಂದಿಗೆ ಇಬ್ಬುಡ್ಲ ಹಣ್ಣನ್ನೂ ಬೆಳೆಯುತ್ತಾರೆ. ಕೆಲ ವರ್ಷಗಳಿಂದ ಈ ಹಣ್ಣಿಗೂ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಕೃಷಿಕರು.

ಸೌತೆಕಾಯಿಯನ್ನು ಹೋಲುವ ಹಳದಿ ಬಣ್ಣದ ಈ ಹಣ್ಣು ಮಾಗಿದಾಗ ರಸಾಯನ ಮಾಡಲು ಬಳಸಲಾಗುತ್ತದೆ. ಇಬ್ಬುಡ್ಲ ಹಣ್ಣಿನ ರಸಾಯನವು ಬೇಸಿಗೆ ಕಾಲದಲ್ಲಿ ದೇಹಕ್ಕೆ ತಂಪು ನೀಡುತ್ತದೆ ಎನ್ನುತ್ತಾರೆ ಕೃಷಿಕರು. ಇತರ ಹಣ್ಣುಗಳಂತೆ ಈ ಹಣ್ಣನ್ನು ಜ್ಯೂಸ್‌ ಮಾಡುವುದಿಲ್ಲ. ಬದಲಾಗಿ ಬೆಲ್ಲ, ಅವಲಕ್ಕಿ, ತೆಂಗಿನ ತುರಿ ಸೇರಿಸಿ ರಸಾಯನ ಮಾಡಲಾಗುತ್ತದೆ.

ADVERTISEMENT

ಹಿರಿಯಡ್ಕದ ಬೊಮ್ಮರಬೆಟ್ಟಿನ ಸುರೇಶ್ ನಾಯಕ್‌ ಅವರು ನಾಲ್ಕೈದು ವರ್ಷಗಳಿಂದ ಇಬ್ಬುಡ್ಲ ಹಣ್ಣನ್ನು ಬೆಳೆಯುತ್ತಿದ್ದಾರೆ. ಹಂತ ಹಂತವಾಗಿ ವರ್ಷಕ್ಕೆ 2 ಎರಡು ಎಕ್ರೆ ಪ್ರದೇಶದಲ್ಲಿ ಅವರು ಈ ಕೃಷಿ ಮಾಡುತ್ತಿದ್ದಾರೆ.

ಬಣ್ಣಬಣ್ಣದ ಕಲ್ಲಂಗಡಿ ಬೆಳಿಯುವ ಮೂಲಕ ಗಮನ ಸೆಳೆದಿರುವ ಸುರೇಶ್ ನಾಯಕ್‌ ಅವರು ಇಬ್ಬುಡ್ಲ ಕೃಷಿಯತ್ತವೂ ಗಮನ ಹರಿಸಿದ್ದಾರೆ. ಈ ಬಾರಿ ಅವರು 23 ಎಕ್ರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು, ಎರಡೂವರೆ ಎಕ್ರೆ ಪ್ರದೇಶದಲ್ಲಿ ತರಕಾರಿಯನ್ನೂ ಬೆಳೆದಿದ್ದಾರೆ.

‘ಇತ್ತೀಚಿಗಿನ ವರ್ಷಗಳಲ್ಲಿ ಇಬ್ಬುಡ್ಲ ಹಣ್ಣಿಗೆ ಜಿಲ್ಲೆಯಲ್ಲೂ ಭಾರಿ ಬೇಡಿಕೆ ಇದೆ. ಗ್ರಾಹಕರು ಹೊಲದಿಂದಲೇ ಈ ಹಣ್ಣನ್ನು ಖರೀದಿಸುತ್ತಾರೆ’ ಎನ್ನುತ್ತಾರೆ ಸುರೇಶ್‌ ನಾಯಕ್‌.

ಇಬ್ಬುಡ್ಲ ಹೊಸ ಬೆಳೆಯಲ್ಲ. ಜಿಲ್ಲೆಯ ರೈತರು ಹಿಂದಿನಿಂದಲೂ ಸೌತೆ ಕೃಷಿಯ ಜೊತೆ ಈ ಬೆಳೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಈಚೆಗೆ ಹೆಚ್ಚಿನವರು ಈ ಬೆಳೆಯಿಂದ ವಿಮುಖರಾಗಿದ್ದಾರೆ. ಆದ್ದರಿಂದ ಈ ಹಣ್ಣಿನ ಪೂರೈಕೆ ಕಡಿಮೆಯಾಗಿ ಎಲ್ಲಾ ಕಡೆ ಸಿಗುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.

‘ಇಬ್ಬುಡ್ಲ ಹಣ್ಣು 60 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಸೌತೆಕಾಯಿ, ಮಸ್ಕ್‌ ಮೆಲನ್‌ ಮತ್ತು ಇಬ್ಬುಡ್ಲವನ್ನು ಒಂದೇ ಹೊಲದಲ್ಲಿ ಬೆಳೆಯಬಹುದು. ಜಿಲ್ಲೆಯ ವಿವಿಧೆಡೆಯಿಂದ ಹಾಗೂ ಮಂಗಳೂರಿನಿಂದ ಹಣ್ಣಿನ ವ್ಯಾಪಾರಿಗಳು ನಮ್ಮ ಹೊಲಕ್ಕೆ ಬಂದು ಇಬ್ಬುಡ್ಲ ಹಣ್ಣನ್ನು ಖರೀದಿಸುತ್ತಿದ್ದಾರೆ. ಇದರಿಂದ ಮಾರುಕಟ್ಟೆ ಸಮಸ್ಯೆ ತಲೆದೋರಿಲ್ಲ’ ಎನ್ನುತ್ತಾರೆ ಸುರೇಶ್‌ ನಾಯಕ್‌.

‘ಇಬ್ಬುಡ್ಲ ಹಣ್ಣು ಮಾಗಿದಾಗ ಅದರ ಹೊರಭಾಗದ ಸಿಪ್ಪೆ ಒಡೆದು ಹೋಗುತ್ತದೆ. ಈ ಕಾರಣಕ್ಕೆ ಹೆಚ್ಚು ದಿನ ಇರಿಸಲು ಸಾಧ್ಯವಾಗುವುದಿಲ್ಲ. ಈ ಬಾರಿ ಇಬ್ಬುಡ್ಲ ಹಣ್ಣಿನ ದರ ಕೆ.ಜಿ.ಗೆ ₹100 ಇದೆ. ಕಳೆದ ವರ್ಷ ಕೆ.ಜಿ.ಗೆ ₹60ರಿಂದ ₹80 ಇತ್ತು. ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಜಾಸ್ತಿಯಾಗಿದೆ’ ಎನ್ನುತ್ತಾರೆ ಅವರು.

ಕಾಡು ಪ್ರಾಣಿಗಳ ಹಾವಳಿ

ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಇಬ್ಬುಡ್ಲ ಕಲ್ಲಂಗಡಿ ಹಣ್ಣು ಬೆಳೆಯಿಂದ ರೈತರು ದೂರ ಸರಿಯುತ್ತಿದ್ದಾರೆ ಎನ್ನುತ್ತಾರೆ ಸುರೇಶ್‌ ನಾಯಕ್‌. ಕಾಡು ಹಂದಿ ನವಿಲು ಮಂಗಗಳ ಕಾಟದಿಂದ ತರಕಾರಿ ಬೆಳೆಗಳಿಗೂ ಸಮಸ್ಯೆಯಾಗುತ್ತದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ಹಳ್ಳಿಗಳ ರೈತರಿಗೆ ಇದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಅವರು.

ಇಬ್ಬುಡ್ಲ ಹಣ್ಣಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಇದೊಂದು ಲಾಭದಾಯಕ ಬೆಳೆ. ಹೆಚ್ಚು ಮಂದಿ ರೈತರು ಇದನ್ನು ಬೆಳೆದರೆ ಮಾರುಕಟ್ಟೆ ಸಮಸ್ಯೆಯೂ ಎದುರಾಗದು.
ಸುರೇಶ್‌ ನಾಯಕ್‌, ಇಬ್ಬುಡ್ಲ ಬೆಳೆಗಾರ
ಸುರೇಶ್ ನಾಯಕ್‌ ಅವರ ಹೊಲದಲ್ಲಿ ಇಬುಡ್ಲ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.