ADVERTISEMENT

ಉಡುಪಿ | ನಾರಾಯಣ ಗುರು ವೃತ್ತ ತೆರವು, ಮರುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 5:04 IST
Last Updated 1 ಸೆಪ್ಟೆಂಬರ್ 2025, 5:04 IST
ಬನ್ನಂಜೆಯಲ್ಲಿ ನಾರಾಯಣ ಗುರು ವೃತ್ತವನ್ನು ಮರು ಸ್ಥಾಪಿಸಿರುವುದು
ಬನ್ನಂಜೆಯಲ್ಲಿ ನಾರಾಯಣ ಗುರು ವೃತ್ತವನ್ನು ಮರು ಸ್ಥಾಪಿಸಿರುವುದು   

ಉಡುಪಿ: ನಗರದ ಬನ್ನಂಜೆಯಲ್ಲಿ ಸ್ಥಾಪಿಸಿದ್ದ ನಾರಾಯಣಗುರು ಸಂಚಾರ ವೃತ್ತವನ್ನು ಭಾನುವಾರ ತೆರವುಗೊಳಿಸಿದ್ದು, ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮರು ಸ್ಥಾಪನೆ ಮಾಡಲಾಯಿತು.

‘ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡಿದ್ದ ನಾರಾಯಣಗುರು ಸಂಚಾರ ವೃತ್ತವನ್ನು ಯಾವುದೇ ಸೂಚನೆ ಇಲ್ಲದೆ ಬನ್ನಂಜೆ ವೃತ್ತದಿಂದ ತೆರವುಗೊಳಿಸಿ, ಸಂಚಾರ ಠಾಣೆಯ ಪಾಳುಬಿದ್ದ ಜಾಗದ ಪೊದೆಗಳ ಮಧ್ಯೆ ಇರಿಸಲಾಗಿದೆ’ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

‘ಶ್ರೀ ನಾರಾಯಣ ಗುರುಗಳ ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕದ ವೃತ್ತವನ್ನು ಸ್ಥಾಪಿಸಿದ್ದು, ಇದು ನಾರಾಯಣ ಗುರುಗಳಿಗೆ ತೋರಿದ ಅಗೌರವ, ಜಿಲ್ಲಾಡಳಿತ ತಕ್ಷಣ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದಲ್ಲಿ ಇಡೀ ಸಮಾಜವನ್ನು ಒಗ್ಗೂಡಿಸಿಕೊಂಡು ಮುಂದಿನ ನಿರ್ಣಯವನ್ನು ಕೈಗೊಳ್ಳಲಾಗುವುದು’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು.

ADVERTISEMENT

‘ಶ್ರೀ ನಾರಾಯಣ ಗುರೂಜಿ ಅವರ ಹೆಸರಿನಲ್ಲಿರುವ ಸಂಚಾರ ವೃತವನ್ನು ಅಜಾಗರೂಕತೆಯಿಂದ ತೆಗೆದುಹಾಕಿರುವುದು ನಮ್ಮ ಗಮನಕ್ಕೆ ಬಂದಿದೆ. ಅದನ್ನು ಮತ್ತೆ ಅದೇ ಸ್ಥಳದಲ್ಲಿ ಅಳವಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಅವರು ಬಳಿಕ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ದಾರ್ಶನಿಕ ಪುರುಷರಿಗೆ ಅಪಮಾನ:

‘ಉಡುಪಿ ಬನ್ನಂಜೆಯ ನಾರಾಯಣ ಗುರು ಸಂಚಾರ ವೃತ್ತವನ್ನು ಏಕಾಏಕಿ ತೆರವುಗೊಳಿಸಿರುವುದನ್ನು ಖಂಡಿಸುತ್ತೇನೆ. ನಾರಾಯಣ ಗುರು ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತ ಸ್ಥಾಪಿಸಿದ್ದು, ಇಲ್ಲಿದ್ದ ವೃತ್ತವನ್ನು ಪೊದೆಗಳಲ್ಲಿ ಬಿಸಾಡಿರುವುದು ಖಂಡನೀಯ. ಇದು ದಾರ್ಶನಿಕ ಮಹಾನ್ ಪುರುಷರಿಗೆ ಮಾಡಿದ ಅಪಮಾನವಾಗಿದೆ’ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಾಶ್ವತ ವೃತ್ತ ಸ್ಥಾಪನೆ: ‘ಬನ್ನಂಜೆಯ ನಾರಾಯಣ ಗುರು ಸಂಚಾರ ವೃತ್ತವನ್ನು ಸಂಚಾರ ಪೊಲೀಸರು ಅಚಾತುರ್ಯದಿಂದ ತೆರವುಗೊಳಿಸಿದ್ದರು. ನಗರ ಸಭೆಯ ಪೌರಾಯುಕ್ತರು ಹಾಗೂ ನಾನು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ಸಂಚಾರ ವೃತ್ತವನ್ನು ಮರು ಸ್ಥಾಪಿಸಲಾಗಿದೆ. ಆ ಜಾಗದಲ್ಲಿ ನಗರಸಭೆಯ  ವತಿಯಿಂದ ನಾರಾಯಣ ಗುರುಗಳ ಹೆಸರಿನಲ್ಲಿ ಶಾಶ್ವತ ವೃತ್ತ ನಿರ್ಮಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.

'ವೃತ್ತ ತೆರವು ಮಾಡಿದವರನ್ನು ಬಂಧಿಸಿ’

‘ಬನ್ನಂಜೆ ಶ್ರೀ ನಾರಾಯಣ ಗುರು ಸಂಚಾರ ವೃತ್ತವನ್ನು ತೆರವುಗೊಳಿಸಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಿ’ ಎಂದು ಶಾಸಕ ಯಶ್‌ಪಾಲ್ ಸುವರ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆಗ್ರಹಿಸಿದ್ದರು.

‘ಬನ್ನಂಜೆ ನಾರಾಯಣ ಗುರು ಮಂದಿರದ ಬಳಿ ಹಲವು ವರ್ಷಗಳ ಹಿಂದೆ ಅಳವಡಿಸಿದ್ದ ವೃತ್ತವನ್ನು ಯಾವುದೇ ಸೂಚನೆ ನೀಡದೇ ಏಕಾಏಕಿ ತೆರವುಗೊಳಿಸಿರುವುದು ಖಂಡನೀಯ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಉಡುಪಿ ನಗರಸಭೆ ಸ್ಥಳೀಯ ಜನಪ್ರತಿನಿಧಿಗಳು ಬನ್ನಂಜೆ ನಾರಾಯಣ ಗುರು ಸಂಘದ ಪದಾಧಿಕಾರಿಗಳಿಗೆ ಮಾಹಿತಿ ನೀಡದೆ ತೆರವುಗೊಳಿಸಿರುವುದು ಅಕ್ಷಮ್ಯ ಹಾಗೂ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ’ ಎಂದು ಆವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.