ADVERTISEMENT

ಗ್ರಾಹಕರ ಹಕ್ಕುಗಳ ಅರಿವು ಅಗತ್ಯ: ಸುನೀಲ ತಿ. ಮಾಸರೆಡ್ಡಿ

ವಿದ್ಯೋದಯ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:59 IST
Last Updated 25 ಡಿಸೆಂಬರ್ 2025, 6:59 IST
ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಜರುಗಿತು
ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಜರುಗಿತು   

ಉಡುಪಿ: ವಿದ್ಯಾರ್ಥಿಗಳು ಗ್ರಾಹಕರ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ. ಆನ್‌ಲೈನ್ ಯುಗದಲ್ಲಿ ವಿದ್ಯಾರ್ಥಿಗಳೂ ಗ್ರಾಹಕರಾಗಿದ್ದಾರೆ. ಜಾಗೃತ ಗ್ರಾಹಕರಿಂದ ಜಾಗೃತ ಮತ್ತು ನ್ಯಾಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ ತಿ. ಮಾಸರೆಡ್ಡಿ ಹೇಳಿದರು.

ನಗರದ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಬಳಕೆದಾರರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ದುಡ್ಡು ಕೊಟ್ಟು ಖರೀದಿಸುವ ವಸ್ತು ದೋಷಪೂರಿತವಾಗಿದ್ದರೆ, ಆನ್‌ಲೈನ್ ಖರೀದಿಯಲ್ಲಿ ನಮಗೆ ಮೋಸ, ವಂಚನೆ ನಡೆದಾಗ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿ ನಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯ ಮತ್ತು ಪರಿಹಾರ ಪಡೆದುಕೊಳ್ಳಬಹುದು ಎಂದರು.

ADVERTISEMENT

ನಮ್ಮ ಹಕ್ಕುಗಳ ಬಗ್ಗೆ ಅರಿವಿದ್ದಾಗ ಮೋಸದ ವ್ಯಾಪಾರ ಪದ್ಧತಿಗಳಿಗೆ ಕಡಿವಾಣ ಹಾಕಬಹುದು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ. ಮಾತನಾಡಿ, ಹಿಂದಿನ ಕಾಲದಲ್ಲಿ ಭೌತಿಕವಾಗಿ ವಸ್ತು ಮತ್ತು ಸೇವೆಗಳನ್ನು ಪಡೆಯುತ್ತಿದ್ದೆವು. ಇದೀಗ ಡಿಜಿಟಲ್ ಯುಗದಲ್ಲಿ ಎಲ್ಲವನ್ನೂ ಆನ್‌ಲೈನ್ ಮೂಲಕ ಪಡೆಯುತ್ತಿದ್ದೇವೆ. ಖರೀದಿಯಲ್ಲಿ ನಡೆಯುವ ಯಾವುದೇ ರೀತಿಯ ಮೋಸಗಳಿಗೆ ಗ್ರಾಹಕರ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಆರೋಗ್ಯ, ಶಿಕ್ಷಣ ಅಥವಾ ಇನ್ಯಾವುದೇ ರೀತಿಯ ಸೇವೆಯಲ್ಲಿ ನಡೆಯುವ ಅನ್ಯಾಯಗಳಿಗೂ ಗ್ರಾಹಕರ ನ್ಯಾಯಾಲಯದಲ್ಲಿ ಪರಿಹಾರ ದೊರೆಯುತ್ತದೆ. ಗ್ರಾಹಕರು ಅದರ ಬಗ್ಗೆ ಮಾಹಿತಿ ಹೊಂದಿ, ತಮ್ಮ ಹಕ್ಕುಗಳನ್ನು ಪಡೆಯಬೇಕು. ಡಿಜಿಟಲ್ ನ್ಯಾಯದಾನದ ಪ್ರಕ್ರಿಯೆಯಿಂದಾಗಿ ತ್ವರಿತಗತಿಯಲ್ಲಿ ನ್ಯಾಯದಾನ ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ್ ಟಿ.ಎನ್. ಉಪಸ್ಥಿತರಿದ್ದರು.

ಬಳಕೆದಾರರ ವೇದಿಕೆ ಸಂಚಾಲಕ ಯುಜಿ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಶ್ಮಿ ಎಂ. ತೇಲಿ ಸ್ವಾಗತಿಸಿದರು. ಬಳಕೆದಾರರ ವೇದಿಕೆ ವಿಶ್ವಸ್ಥ ಎಂ. ರಾಮ ಭಟ್ ನಿರೂಪಿಸಿದರು. ಲಕ್ಷ್ಮಿ  ವಂದಿಸಿದರು.

ಗ್ರಾಹಕರ ರಕ್ಷಣೆಗಿರುವ ಕಾಯ್ದೆಗಳ ಬಗ್ಗೆಅರಿವು ಹೊಂದಿದಾಗ ಸಮಾಜದಲ್ಲಿ ಜಾಗೃತಿ ಮೂಡುತ್ತದೆ. ಗ್ರಾಹಕರನ್ನು ಮರುಳು ಮಾಡುವ ಜಾಹೀರಾತುಗಳ ಬಗ್ಗೆ ಎಚ್ಚರ ವಹಿಸಬೇಕು
ಸುನೀಲ ತಿ. ಮಾಸರೆಡ್ಡಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.