
ಕಾರ್ಕಳ: ಶಿಸ್ತುಬದ್ಧ ಜೀವನ ಶೈಲಿ ಭವಿಷ್ಯದ ಜೀವನಕ್ಕೆ ದಾರಿದೀಪ. ವಿದ್ಯಾರ್ಥಿಗಳು ಸ್ವಂತಿಕೆ ಬೆಳೆಸಿಕೊಂಡು ಮುಂದೆ ತಾವು ಏನಾಗಬೇಕು ಎಂಬುದನ್ನು ಈಗಲೇ ನಿರ್ಧರಿಸಿಕೊಳ್ಳಬೇಕು ಎಂದು ನೇವಲ್ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ಹೇಳಿದರು.
ಇಲ್ಲಿನ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್, ಆ್ಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಉಜ್ವಲ ನಾಳೆಗೆ ಪ್ರೇರಣೆ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಆನಂದ್ರಾಯ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಮುಖ್ಯಶಿಕ್ಷಕ ದಿವಾಕರ್, ಆ್ಯನ್ಸ್ ಚೇರ್ಮನ್ ವೃಂದಾ ಹರಿಪ್ರಕಾಶ್ ಶೆಟ್ಟಿ, ಸಾವಿತ್ರಿ ಮನೋಹರ್ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಜಯಂತಿ ಆನಂದ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಆಶಾ ಸೋನಿಯಾ ಡಿಮೆಲ್ಲೊ ನಿರೂಪಿಸಿದರು.