ಉಡುಪಿ: ಕರಾವಳಿಯ ನೆಲದ ಕಲೆಯಾಗಿರುವ ಯಕ್ಷಗಾನವನ್ನು ಶಾಲಾ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತ್ತರ ಚಟುವಟಿಕೆಯಾಗಿ ಕಲಿಸುವ ಅಗತ್ಯವಿದೆ ಎಂದು ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ಕಿಶೋರ ಯಕ್ಷಗಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಕ್ಕಳಿಗೆ ಪಠ್ಯದ ಜತೆಗೆ ಯಕ್ಷಗಾನದಂತಹ ಕಲೆ ಕಲಿಸಿದರೆ ಪ್ರತಿಭೆ ಅನಾರವರಣಕ್ಕೆ ಹಾಗೂ ದೊಡ್ಡ ಕಲಾವಿದರಾಗಿ ಬೆಳೆಯಲು ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದರು.
ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44 ಪ್ರೌಢಶಾಲೆಗಳ 1400 ವಿದ್ಯಾರ್ಥಿಗಳಿಗೆ ತೆಂಕುತಿಟ್ಟು ಬಡಗುತಿಟ್ಟು ಯಕ್ಷ ಶಿಕ್ಷಣ ತರಬೇತಿ ನೀಡುತ್ತಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳಿಂದ 45 ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿದೆ.
ನ.27ರಿಂದ ಡಿ.12ರವರೆಗೆ ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಹಾಗೂ ಡಿ.13ರಿಂದ 20ರವರೆಗೆ ಬ್ರಹ್ಮಾವರ ಪೇಟೆಯ ಬಂಟರ ಭವನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಯಕ್ಷ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಹಗೂ ಶಾಸಕರೂ ಆದ ರಘುಪತಿ ಭಟ್ ಮಾತನಾಡಿದರು. ಅಂಬಲಪಾಡಿ ಕಾರ್ಯದರ್ಶಿ ಮುರಳಿ ಕಡೆಕಾರ್, ದೇವಸ್ಥಾನದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಪುರುಷೋತ್ತಮ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.