
ಉಡುಪಿ: ನಿಟ್ಟೆ ವಿಶ್ವವಿದ್ಯಾಲಯವು ಮಂಗಳೂರು ಮತ್ತು ನಿಟ್ಟೆ ನಿಟ್ಟೆ ಕ್ಯಾಂಪಸ್‌ಗಳಲ್ಲಿ 15ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಒಟ್ಟು 1,999 ಪದವೀಧರರು ಪದವಿ ಸ್ವೀಕರಿಸಲಿದ್ದಾರೆ ಎಂದು ವಿ.ವಿ. ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ನ. 7ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ (ಕ್ಷೇಮ) ನಿಟ್ಟೆ ಮೈದಾನದಲ್ಲಿ ನಡೆಯುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಿ.ವಿ. ಕುಲಾಧಿಪತಿ ಎನ್. ವಿನಯ ಹೆಗ್ಡೆ ವಹಿಸುವರು ಎಂದು ಹೇಳಿದರು.
ನವದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ (ಎಐಐಎಂಎಸ್) ಹೃದಯ ವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಡಾ.ಕೆ. ಶ್ರೀನಾಥ ರೆಡ್ಡಿ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ.ಮಧುಕರ ಶಾಂತಾರಾಮ ಕೇಕ್ರೆ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು ಎಂದರು.
ನ. 8ರಂದು ಬೆಳಿಗ್ಗೆ 10.30ಕ್ಕೆ ಕಾರ್ಕಳದ ನಿಟ್ಟೆಯ ಕ್ಯಾಂಪಸ್‌ನಲ್ಲಿ ನಡೆಯುವ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್. ವಿನಯ ಹೆಗ್ಡೆ ವಹಿಸುವರು. ಕೇರಳದ ಕೇಂದ್ರೀಯ ವಿ.ವಿ. ಕುಲಪತಿ ಸಿದ್ದು ಪಿ. ಅಲ್ಗೂರ್ ಅತಿಥಿಯಾಗಿ ಭಾಗವಹಿಸುವರು. ಡಾ. ಎಂ. ಶಾಂತಾರಾಮ ಶೆಟ್ಟಿ, ವಿಶಾಲ್ ಹೆಗ್ಡೆ ಉಪಸ್ಥಿತರಿರುವರು ಎಂದು ತಿಳಿಸಿದರು.
ಟೈಮ್ಸ್ ಉನ್ನತ ಶಿಕ್ಷಣ ಜಾಗತಿಕ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ನಲ್ಲಿ ನಿಟ್ಟೆ ವಿ.ವಿ.ಯು 1201–1500ನೇ ಸ್ಥಾನವನ್ನು ಪಡೆದಿದ್ದು, ವಿಶ್ವದ 300 ಅತ್ಯುತ್ತಮ ವಿ.ವಿ.ಗಳ ಸಾಲಿಗೆ ಸೇರಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಹರ್ಷ ಹಾಲಹಳ್ಳಿ, ಡಾ. ಪ್ರಸಾದ್ ಬಿ.ಶೆಟ್ಟಿ, ಡಾ.ನಿರಂಜನ್ ಚಿಪ್ಲುಂಕರ್, ಡಾ. ಸುಧೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.