ADVERTISEMENT

110 ಎಂಡೋ ಸಲ್ಫಾನ್ ಬಾಧಿತರ ಪಟ್ಟಿಗೆ ಅನುಮೋದನೆ

ಅಂತ್ಯೋದಯ ಕಾರ್ಡ್‌ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 14:50 IST
Last Updated 3 ಸೆಪ್ಟೆಂಬರ್ 2022, 14:50 IST
ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ಎಂಡೋಸಲ್ಫಾನ್ ಸಾಮಾನ್ಯ ಸಮಿತಿ ಸಭೆ ನಡೆಯಿತು.
ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ಎಂಡೋಸಲ್ಫಾನ್ ಸಾಮಾನ್ಯ ಸಮಿತಿ ಸಭೆ ನಡೆಯಿತು.   

ಉಡುಪಿ: ಜಿಲ್ಲೆಯಲ್ಲಿನ ಎಂಡೋಸಲ್ಫಾನ್ ಬಾಧಿತರ ಆರೋಗ್ಯ ಸುಧಾರಣೆ ಹಾಗೂ ಪುರ್ನವಸತಿ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಎಂಡೋಸಲ್ಫಾನ್ ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾರ್ಚ್ 2019ರಿಂದ ಇದುವರೆಗೆ ಹೊಸದಾಗಿ ಗುರುತಿಸಲಾಗಿರುವ 110 ಎಂಡೋಸಲ್ಫಾನ್ ಬಾಧಿತರ ಪಟ್ಟಿಗೆ ಅನುಮೋದನೆ ನೀಡಿದ ಸಚಿವರು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಬಾಧಿತರಿಗೆ ತಲುಪಿಸಬೇಕು. ಆರೋಗ್ಯ ಇಲಾಖೆಯಿಂದ ಬಾಧಿತರ ಪಟ್ಟಿ ಪಡೆದು ಅವರಿಗೆ ಅಂತ್ಯೋದಯ ಕಾರ್ಡ್‍ಗಳನ್ನು ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಎಂಡೋಸಲ್ಫಾನ್ ರಾಸಾಯನಿಕ ಸಿಂಪರಣೆ ಮಾಡಿದ ಅವಧಿಯಲ್ಲಿ ಬಾಧಿತ ಪ್ರದೇಶದಲ್ಲಿ ಜನಿಸಿದ ಅಥವಾ ವಾಸವಿದ್ದು ನಂತರದಲ್ಲಿ ಎಂಡೋಸಲ್ಫಾನ್ ಬಾಧಿತವಲ್ಲದ ಪ್ರದೇಶಗಳಿಗೆ ಬಂದು ನೆಲೆಸಿ ಅಂಗವೈಕಲ್ಯಕ್ಕೆ ತುತ್ತಾದವರಿಗೆ, ಎಂಡೋಸಲ್ಫಾನ್ ಸಂಬಂಧಿ ಯಾವುದೇ ನ್ಯೂನತೆಗಳು ಇದ್ದರೂ, ಬಾಧಿತರಿಗೆ ಜನಿಸಿದ ಮಕ್ಕಳಲ್ಲಿ ನ್ಯೂನತೆಗಳು ಕಂಡುಬಂದರೂ ಅವರನ್ನು ಎಂಡೋಸಲ್ಫಾನ್ ಬಾಧಿತರೆಂದೇ ಪರಿಗಣಿಸಬೇಕು ಎಂದು ಸೂಚಿಸಿದ ಸಚಿವರು, ಹೊಸ ಎಸ್‌ಒಪಿ ರಚಿಸಿ ಅದರನ್ವಯ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದರು.

ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಕೆಡಿಪಿ ಸಭೆಗಳಲ್ಲಿ ಚರ್ಚಾ ವಿಷಯವನ್ನಾಗಿ ಸೇರ್ಪಡೆ ಮಾಡಬೇಕು. ಕುಂದಾಪುರದ ಸೇನಾಪುರದಲ್ಲಿ ಎಂಡೋಸಲ್ಫಾನ್ ಪೀಡಿತ ಅಂಗವಿಕಲರಿಗೆ ಶಾಶ್ವತ ಪುರ್ನವಸತಿ ಕೇಂದ್ರ ಆರಂಭಿಸುವ ಬಗ್ಗೆ ಹಾಗೂ ಪ್ರತ್ಯೇಕ ಡೇ ಕೇರ್ ಸೆಂಟರ್ ಆರಂಬಿಸುವ ಬಗ್ಗೆ ಸಭೆಯಲ್ಲಿ ಸಚಿವರು ಚರ್ಚೆ ನಡೆಸಿದರು.

ಸಭೆಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಜಿಲ್ಲಾದಿಕಾರಿ ಕೂರ್ಮಾರಾವ್, ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ, ಕುಂದಾಪುರ ಡಿಎಫ್‍ಒ ಆಶೀಶ್ ರೆಡ್ಡಿ, ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ, ಮಾನವ ಹಕ್ಕು ಪ್ರತಿಷ್ಠಾನದ ಡಾ.ರವೀಂದ್ರನಾಥ್ ಶಾನುಭೋಗ್, ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.