ADVERTISEMENT

ಉಡುಪಿ | ಏರುಗತಿಯಲ್ಲಿ ಈರುಳ್ಳಿ: ದಿನಬಳಕೆ ವಸ್ತುಗಳು ದುಬಾರಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 7:32 IST
Last Updated 10 ನವೆಂಬರ್ 2023, 7:32 IST
ಉಡುಪಿಯ ತರಕಾರಿ ಮಾರುಕಟ್ಟೆ
ಉಡುಪಿಯ ತರಕಾರಿ ಮಾರುಕಟ್ಟೆ   

ಉಡುಪಿ: ರಾಜ್ಯದಾದ್ಯಂತ ಮಳೆ ಕೊರತೆ ಪರಿಣಾಮ ತರಕಾರಿ ಬೆಲೆ ಗಗನಕ್ಕೇರುತ್ತಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. ದಿನಬಳಕೆ ಆಹಾರ ಪದಾರ್ಥಗಳಾದ ಬೇಳೆಕಾಳುಗಳು, ಸೊಪ್ಪು, ತರಕಾರಿ, ಹಣ್ಣು, ಮಾಂಸ, ಮೊಟ್ಟೆ ದರವೂ ಹೆಚ್ಚಾಗುತ್ತಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

15 ದಿನಗಳಿಂದ ತೀವ್ರ ಏರುಗತಿಯಲ್ಲಿ ಸಾಗಿರುವ ಈರುಳ್ಳಿ ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹70 ರಿಂದ ₹80ರವರೆಗೆ ಮಾರಾಟವಾಗುತ್ತಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಕೆ.ಜಿಗೆ ₹30ಕ್ಕೆ ಸಿಗುತ್ತಿದ್ದ ಈರುಳ್ಳಿ ಮೂರು ಪಟ್ಟು ದರ ಹೆಚ್ಚಿಸಿಕೊಂಡಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಗುಣಮಟ್ಟ ಕುಸಿತ: ದರ ಏರಿಕೆ ಒಂದೆಡೆಯಾದರೆ ಈರುಳ್ಳಿ ಗುಣಮಟ್ಟ ಕುಸಿತವಾಗಿದ್ದು ಕೊಳೆತ, ಕಪ್ಪು ಮಸಿ ಮೆತ್ತಿಕೊಂಡಿರುವ ಈರುಳ್ಳಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ದುಬಾರಿ ದರ ತೆತ್ತು ಈರುಳ್ಳಿ ಖರೀದಿ ಮಾಡಿದರೆ ಎರಡರಿಂದ ಮೂರು ಲೇಯರ್ ಸಿಪ್ಪೆ ತೆಗೆದು ಬಳಸಬೇಕು. ಕೆಲವು ಈರುಳ್ಳಿ ಒಳಗೂ ಕೊಳೆತಿರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಹಕಿ ಮಂಜುಳಾ.

ADVERTISEMENT

ಈರುಳ್ಳಿ ಸಂಪೂರ್ಣವಾಗಿ ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೇ ಪೂರೈಕೆಯಾಗುತ್ತದೆ. ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಸ್ಥಳೀಯವಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ದರ ಏರಿಕೆಯಾಗುತ್ತಲೇ ಇದೆ. ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿ ಮಹಮದ್ ಅಶ್ರಫ್‌.

ಟೊಮೆಟೊ ದರ ಹೆಚ್ಚಳ: 15 ದಿನಗಳ ಹಿಂದೆ ಕೆ.ಜಿಗೆ ₹15 ರಿಂದ ₹20ಕ್ಕೆ ಸಿಗುತ್ತಿದ್ದ ಟೊಮೆಟೊ ದರವೂ ನಿಧಾನವಾಗಿ ಹೆಚ್ಚಾಗುತ್ತಿದ್ದು ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ₹25ರಿಂದ ₹35ಕ್ಕೆ ಮುಟ್ಟಿದೆ. ಟೊಮೆಟೊ ಗುಣಮಟ್ಟವೂ ಕುಸಿದಿದೆ ಎನ್ನುತ್ತಾರೆ ಗ್ರಾಹಕರು.

ಉಳಿದಂತೆ ಬೀನ್ಸ್‌ ಕೆ.ಜಿಗೆ₹ 60 ರಿಂದ₹ 70, ಕ್ಯಾರೆಟ್‌ ₹50 ರಿಂದ ₹60, ಆಲೂಗಡ್ಡೆ ₹40, ಮೂಲಂಗಿ ₹60, ಬದನೆಕಾಯಿ ₹50, ಎಲೆಕೋಸು ₹20, ಹೂಕೋಸು ₹30, ತೊಂಡೆಕಾಯಿ ₹40, ಈರೇಕಾಯಿ₹ 50, ನುಗ್ಗೆಕಾಯಿ ₹150, ಹಾಗಲಕಾಯಿ ₹50, ಕ್ಯಾಪ್ಸಿಕಂ ₹70, ಹಸಿ ಮೆಣಸಿನಕಾಯಿ ₹70, ಬೀಟ್‌ರೂಟ್‌ ₹40, ಸೌತೆಕಾಯಿ ₹25, ಸಾಂಬಾರ್ ಸೌತೆ ₹25, ಬೆಳ್ಳುಳ್ಳಿ ₹220, ಶುಂಠಿ ₹200, ಬೆಂಗಳೂದು ಬದನೆ ₹40, ಬೂದುಕುಂಬಳ ₹15 ರಿಂದ ₹20, ಸಿಹಿ ಕುಂಬಳ₹ 20 ದರ ಇದೆ.

ಹಣ್ಣಿನ ದರ ಅಲ್ಪ ಹೆಚ್ಚಳ: ಏಲಕ್ಕಿ ಬಾಳೆಹಣ್ಣಿನ ದರ ಸ್ಥಿರವಾಗಿದ್ದು ಕೆ.ಜಿಗೆ ₹80 ರಿಂದ ₹90ರವರೆಗೆ ಮಾರಾಟವಾಗುತ್ತಿದೆ. ದಾಳಿಂಬೆ ಗಾತ್ರಕ್ಕೆ ಅನುಗುಣವಾಗಿ ₹200ರಿಂದ ₹250, ಸಪೋಟ ₹60, ಪಪ್ಪಾಯ ₹40, ಮಸ್ಕ್ ಮೆಲನ್ ₹40, ಸೀಬೆ ₹120, ಲಿಚಿ ₹300, ರಾಂಬುಟಾನ್ ₹350, ಸೇಬು ₹160ರಿಂದ ₹260, ಕಲ್ಲಂಗಡಿ ₹25, ಮೋಸಂಬಿ ₹70, ಕಿತ್ತಳೆ ₹60, ಪೈನಾಪಲ್ ₹45 ದರ ಇದೆ.

ಮಾಂಸ ದರ
ಕೋಳಿ ಮಾಂಸ ಬ್ರಾಯ್ಲರ್ ಕೆ.ಜಿಗೆ₹ 240 (ಚರ್ಮ ರಹಿತ) ಚರ್ಮ ಸಹಿತ ₹220 ನಾಟಿ ಕೋಳಿ ₹380 ಮೊಟ್ಟೆ ಒಂದಕ್ಕೆ ₹7 ದರ ಇದೆ. ಆಡು ಕುರಿಯ ಮಾಂಸ ₹700ರಿಂದ ₹800 ಇದೆ. ಬಂಗುಡೆ ₹200 ರಿಂದ ₹250 ಅಂಜಲ್‌ ₹450 ಪಾಂಪ್ಲೆಟ್ ₹600 ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.