ADVERTISEMENT

ಉಡುಪಿ | ಭತ್ತ ಬೆಳೆಗಾರರಿಗೆ ಆತಂಕ ತಂದ ಮಳೆ: ನೆಲಕ್ಕೊರಗಿದ ಪೈರು

ವಿವಿಧೆಡೆ ಗದ್ದೆಗಳಲ್ಲಿ ಮಳೆ ನೀರು ತುಂಬಿ ನೆಲಕ್ಕೊರಗಿದ ಪೈರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 13:54 IST
Last Updated 20 ಅಕ್ಟೋಬರ್ 2024, 13:54 IST
ಉಡುಪಿಯ ಮಣಿಪುರ ಗ್ರಾಮದ ಕುರ್ಕಾಲು ಎಂಬಲ್ಲಿ ಭತ್ತದ ಗದ್ದೆಯಲ್ಲಿ ಮಳೆ ನೀರು ನಿಂತಿರುವುದು
ಉಡುಪಿಯ ಮಣಿಪುರ ಗ್ರಾಮದ ಕುರ್ಕಾಲು ಎಂಬಲ್ಲಿ ಭತ್ತದ ಗದ್ದೆಯಲ್ಲಿ ಮಳೆ ನೀರು ನಿಂತಿರುವುದು   

ಉಡುಪಿ: ಜಿಲ್ಲೆಯಾದ್ಯಂತ ಭತ್ತದ ಕೃಷಿಯು ಕಟಾವಿಗೆ ಬಂದಿದ್ದು, ಪದೇ ಪದೇ ಭಾರಿ ಮಳೆ ಸುರಿಯುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.

ಶನಿವಾರ ರಾತ್ರಿ ಸುರಿದ ಮಳೆಗೆ ಉಡುಪಿ ವ್ಯಾಪ್ತಿಯ ಮಣಿಪುರ ಗ್ರಾಮದ ಕುರ್ಕಾಲು ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡು ಪೈರುಗಳು ಮುಳುಗಿವೆ.

ಕೆಲವೆಡೆ ಮಳೆಯಿಂದಾಗಿ ಭತ್ತದ ಪೈರುಗಳು ನೆಲಕ್ಕೆ ಒರಗಿವೆ. ಇದೇ ರೀತಿ ಮಳೆ ಮುಂದುವರಿದರೆ ಭತ್ತ ಮೊಳಕೆ ಬರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಬಾರಿ ವಿಪರೀತ ಮಳೆ ಬಂದ ಕಾರಣ ನೆರೆ ನೀರಲ್ಲಿ ಮುಳುಗಿ ಜಿಲ್ಲೆಯ ವಿವಿಧೆಡೆ ಭತ್ತದ ಕೃಷಿ ನಾಶವಾಗಿತ್ತು. ಭತ್ತದ ಸಸಿಗಳು ಕೊಳೆತು ಹೋಗಿದ್ದ ಕಾರಣ ಕೆಲವು ರೈತರು ಮತ್ತೆ ಗದ್ದೆಯನ್ನು ಹದಗೊಳಿಸಿ ಭತ್ತದ ಸಸಿ ನೆಟ್ಟಿದ್ದರು.

ಇದೀಗ ಬೆಳೆ ಕಟಾವಿಗೆ ಬಂದಿರುವ ಸಂದರ್ಭದಲ್ಲಿ ಮತ್ತೆ ಮಳೆ ಬರುತ್ತಿರುವುದರಿಂದ ಭತ್ತ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭತ್ತದ ಕಟಾವು ಯಂತ್ರಕ್ಕೆ ವಿಪರೀತ ಬಾಡಿಗೆ ಪಡೆಯಲಾಗುತ್ತಿದೆ ಎಂಬ ಆರೋಪಗಳೂ ರೈತರಿಂದ ಕೇಳಿ ಬಂದಿವೆ. ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕಟಾವು ಯಂತ್ರದ ಮೊರೆಹೋಗುವ ಅನಿವಾರ್ಯತೆ ಹೆಚ್ಚಿನ ರೈತರಿಗೆ ಒದಗಿ ಬಂದಿದೆ.

ಎಂಒ4 ತಳಿಯ ಬಿತ್ತನೆ ಬೀಜ ಸಿಗದೆ ಆರಂಭದಲ್ಲೇ ರೈತರು ಪರದಾಡಿದ್ದರು. ಭತ್ತವು ಕಟಾವಿಗೆ ಬರುವ ಸಂದರ್ಭದಲ್ಲಿ ಮಳೆ ಬಂದು ಗದ್ದೆಗಳಲ್ಲಿ ನೀರು ನಿಂತರೂ ಎಂಒ4 ತಳಿಗೆ ಅದನ್ನು ಎದುರಿಸುವ ಸಾಮರ್ಥ್ಯ ಇದೆ ಎಂಬುದು ರೈತರ ವಿಶ್ವಾಸವಾಗಿದೆ. ಆದರೆ, ಈ ತಳಿಯ ಬಿತ್ತನೆ ಬೀಜ ಸಿಗದೆ ರೈತರು ಇತರ ತಳಿಯ ಬಿತ್ತನೆ ಬೀಜದ ಮೊರೆ ಹೋಗಿದ್ದರು.

ಮಳೆ ಬಂದು ಭತ್ತದ ಪೈರುಗಳು ನೆಲಕ್ಕುರುಳಿದರೆ ಅದನ್ನು ಯಂತ್ರದ ಮೂಲಕ ಕಟಾವು ಮಾಡಲು ಸಾಧ್ಯವಾಗುವುದಿಲ್ಲ. ಕಾರ್ಮಿಕರನ್ನು ಬಳಸಿ ಕೊಯ್ಲು ಮಾಡಬೇಕಾಗುತ್ತದೆ. ಆಗ ಬೆಳೆಯಿಂದ ಬರುವ ಲಾಭಕ್ಕಿಂತ ಹೆಚ್ಚು ಕೊಯ್ಲಿಗೆ ಖರ್ಚು ಮಾಡಬೇಕಾಗುತ್ತದೆ ಎನ್ನುತ್ತಾರೆ ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ ಭಟ್‌ ಇರ್ವತ್ತೂರು.

ಈಗ ಜಿಲ್ಲೆಯಲ್ಲಿ ಶೇ 4ರಿಂದ ಶೇ 5ರಷ್ಟು ಭತ್ತದ ಕೊಯ್ಲು ನಡೆದಿದೆ. ಇನ್ನು 15 ದಿವಸಗಳಲ್ಲಿ ಎಲ್ಲಾ ಕಡೆ ಕೊಯ್ಲು ನಡೆಯಲಿದೆ. ಆಗಲೂ ಮಳೆ ಬಂದರೆ ಬೆಳೆಗಾರರ ಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ ಎಂದು ಅವರು ಹೇಳಿದರು.

ಭತ್ತದ ಬೆಳೆಯ ಕೊಯ್ಲಿನ ಅವಧಿಯಲ್ಲಿ ಮಳೆ ಆರಂಭವಾಗಿರುವುದರಿಂದ ದೇಸಿ ತಳಿ ಬೆಳೆದ ರೈತರಿಗೆ ಹೆಚ್ಚಿನ ನಷ್ಟ ಉಂಟಾಗಬಹುದು. ಹೈಬ್ರಿಡ್‌ ತಳಿಗಳು ಮಳೆ ಬಂದರೂ ಬೇಗನೆ ನೆಲಕ್ಕೊರಗುವುದಿಲ್ಲ
ಶ್ರೀನಿವಾಸ ಭಟ್‌ ಇರ್ವತ್ತೂರು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.