ADVERTISEMENT

ಉಡುಪಿ: 36 ಸಾವಿರ ಹೆಕ್ಟೇರ್‌ಗೆ 8 ಕಟಾವು ಯಂತ್ರ !

ಖಾಸಗಿ ಭತ್ತ ಕಟಾವು ಯಂತ್ರ ಮಾಲೀಕರ ಹಾಗೂ ಮಧ್ಯವರ್ತಿಗಳಿಂದ ಹೆಚ್ಚಿನ ದರ ವಸೂಲಿ

ಬಾಲಚಂದ್ರ ಎಚ್.
Published 6 ನವೆಂಬರ್ 2021, 19:31 IST
Last Updated 6 ನವೆಂಬರ್ 2021, 19:31 IST
ಭತ್ತ ಕಟಾವು ಯಂತ್ರ
ಭತ್ತ ಕಟಾವು ಯಂತ್ರ   

ಉಡುಪಿ: ಭತ್ತದ ದರ ಕುಸಿತದಿಂದ ಕಂಗೆಟ್ಟಿರುವ ಕರಾವಳಿಯ ರೈತರ ಮೇಲೆ ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆಯ ಹೊರೆ ಬಿದ್ದಿದೆ. ಒಂದು ಗಂಟೆಯ ಭತ್ತದ ಕೊಯ್ಲಿಗೆ ರೈತರು ಬರೋಬ್ಬರಿ ₹ 2,800ದವರೆಗೂ ಬಾಡಿಗೆ ಪಾವತಿಸಬೇಕಾಗಿದೆ. ಖಾಸಗಿ ಮಾಲೀಕತ್ವದ ಭತ್ತ ಕಟಾವು ಯಂತ್ರಗಳ ದುಬಾರಿ ದರಕ್ಕೆ ಬ್ರೇಕ್ ಹಾಕಬೇಕಿದ್ದ ಜಿಲ್ಲಾಡಳಿತ ಕೂಡ ಅಸಹಾಯಕತೆ ಪ್ರದರ್ಶಿಸುತ್ತಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಜಿಲ್ಲೆಯಲ್ಲಿ 36,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ನಡೆದಿದ್ದು, ಕೊಯ್ಲು ಮಾಡಲು 250 ಕಟಾವು ಯಂತ್ರಗಳ ಅಗತ್ಯವಿದೆ. ಆದರೆ, ಜಿಲ್ಲೆಯಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಕೃಷಿ ಯಂತ್ರಧಾರೆಗಳಲ್ಲಿರುವುದು ಕೇವಲ 8 (ಕಂಬೈನ್ಡ್‌ ಹಾರ್ವೆಸ್ಟರ್‌) ಕಟಾವು ಯಂತ್ರಗಳು ಮಾತ್ರ. ಅಂದರೆ, ಜಿಲ್ಲೆಯ ಶೇ 97ರಷ್ಟು ಭತ್ತದ ಕೊಯ್ಲು ಅವಲಂಬಿತವಾಗಿರುವುದು ಖಾಸಗಿ ಭತ್ತ ಕಟಾವು ಯಂತ್ರಗಳ ಮೇಲೆ.

ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಅಜೆಕಾರು, ವಂಡ್ಸೆ ಸೇರಿದಂತೆ 9 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳಿದ್ದರೂ, ಅಲ್ಲಿ ಬೇಡಿಕೆಯಷ್ಟು ಕಟಾವು ಯಂತ್ರಗಳು ಲಭ್ಯವಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಯಂತ್ರಗಳ ಕೊರತೆಯನ್ನೇ ‘ಬಂಡವಾಳ’ ಮಾಡಿಕೊಂಡಿರುವ ಖಾಸಗಿ ಯಂತ್ರಗಳ ಮಾಲೀಕರು ಹಾಗೂ ಮಧ್ಯವರ್ತಿಗಳು ರೈತರಿಂದ ಹೆಚ್ಚಿನ ದರ ವಸೂಲಿಗೆ ನಿಂತಿದ್ದಾರೆ.

ADVERTISEMENT

ಅನಿವಾರ್ಯತೆಗೆ ಸಿಲುಕಿದ ರೈತರು:

ಹವಾಮಾನ ವೈಪರೀತ್ಯ ಹಾಗೂ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರಿ ಮಳೆಗೆ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗುತ್ತಿದೆ. ಕಷ್ಟಪಟ್ಟು ಬೆಳೆದ ಫಸಲನ್ನು ರಕ್ಷಿಸಿಕೊಳ್ಳಲು ರೈತರು ಒದ್ದಾಡುತ್ತಿದ್ದು, ದುಬಾರಿ ಬಾಡಿಗೆ ‌ತೆತ್ತಾದರೂ ಭತ್ತ ಕಟಾವು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತಿಲ್ಲ:

ಸರ್ಕಾರದ ನಿಯಂತ್ರಣದಲ್ಲಿರುವ ಕೃಷಿಯಂತ್ರಧಾರೆಗಳಲ್ಲಿರುವ ಭತ್ತ ಕಟಾವು ಯಂತ್ರಗಳ ಬಾಡಿಗೆ ದರವನ್ನು ಜಿಲ್ಲಾಡಳಿತ ಗಂಟೆಗೆ ₹ 1,800 ನಿಗದಿ ಮಾಡಿದೆ. ಆದರೆ, ಈ ಆದೇಶ ಖಾಸಗಿ ಯಂತ್ರಗಳ ಮಾಲೀಕರಿಗೆ ಅನ್ವಯವಾಗದ ಕಾರಣ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.

ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ರೈತರೇ ಒಟ್ಟಾಗಿ ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರ ಜತೆ ಚರ್ಚಿಸಿ, ನಿರ್ಧಿಷ್ಟ ಬಾಡಿಗೆ ನಿಗದಿ ಮಾಡಿಕೊಳ್ಳಬೇಕು. ಖಾಸಗಿಯವರ ಮೇಲೆ ಕೃಷಿ ಇಲಾಖೆಗೆ ನಿಯಂತ್ರಣ ಇಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮತ್ತೊಂದೆಡೆ, ಕಟಾವು ಯಂತ್ರಗಳ ಮಾಲೀಕರು ಕೂಡ ನಮಗೆ ಗಂಟೆಗೆ ಸಿಗುತ್ತಿರುವುದು ₹ 2,000ದಿಂದ ₹ 2,100 ಮಾತ್ರ. ಡೀಸೆಲ್ ಬೆಲೆ ಏರಿಕೆ, ಯಂತ್ರ ಚಾಲಕ ಹಾಗೂ ಕೂಲಿ ಕಾರ್ಮಿಕರಿಗೆ ಬಾಡಿಗೆ ಹಾಗೂ ಹಾಕಿರುವ ಬಂಡವಾಳವನ್ನು ಲೆಕ್ಕ ಹಾಕಿದರೆ ಹೆಚ್ಚು ಲಾಭವಿಲ್ಲ. ಸ್ಥಳೀಯ ಮಧ್ಯವರ್ತಿಗಳು ರೈತರಿಂದ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದಾರೆ ಎನ್ನುತ್ತಿದ್ದಾರೆ.

ಸಮಸ್ಯೆಗೆ ಪರಿಹಾರ ಏನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13,000 ಹೆಕ್ಟೇರ್ ಭತ್ತದ ಕೃಷಿಯಾಗಿದ್ದು, ಅಲ್ಲಿ ಸರ್ಕಾರಿ ನಿಯಂತ್ರಣದಲ್ಲಿರುವ 14 ಯಂತ್ರಧಾರೆಗಳಲ್ಲಿ 14 ಭತ್ತ ಕಟಾವು ಯಂತ್ರಗಳಿಗೆ. ಆದರೆ, ಉಡುಪಿಯಲ್ಲಿ 36 ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ಕೃಷಿ ಇದ್ದರೂ ಜಿಲ್ಲೆಯಲ್ಲಿರುವುದು 8 ಯಂತ್ರಗಳು ಮಾತ್ರ. ನೆರೆಯ ಜಿಲ್ಲೆಯ ಲೆಕ್ಕದಲ್ಲಿ ಉಡುಪಿಯಲ್ಲಿ 36 ಯಂತ್ರಗಳಿರಬೇಕಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಜಿಲ್ಲೆಯಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಹೆಚ್ಚಿಸಿ, ಅಗತ್ಯ ಕಟಾವು ಯಂತ್ರಗಳನ್ನು ಪೂರೈಸಬೇಕು ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.

ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ನೆರೆಯ ತಮಿಳುನಾಡಿನಿಂದ ಹೆಚ್ಚಿನ ಭತ್ತ ಕಟಾವು ಯಂತ್ರಗಳು ಬಂದಿವೆ. ಶಿವಮೊಗ್ಗ, ದಾವಣಗರೆ ಹಾಗೂ ಉಡುಪಿಯ ಮಧ್ಯವರ್ತಿಗಳು ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡು ಯಂತ್ರಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದಾರೆ. ರೈತರಿಂದ ಹೆಚ್ಚಿನ ಹಣ ಪಡೆದು, ಮಾಲೀಕರಿಗೆ ಗಂಟೆಗಿಷ್ಟು ಎಂದು ಹಣ ಕೊಟ್ಟು, ಉಳಿದಿದ್ದನ್ನು ಜೇಬಿಗಿಳಿಸುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಬೇಕಿದೆ ಎಂದು ಒತ್ತಾಯಿಸುತ್ತಾರೆ ಅವರು.

‘ಏಕರೂಪದ ದರ ನಿಗದಿಯಾಗಲಿ’

ಭತ್ತ ಕಟಾವು ಯಂತ್ರಗಳಿಗೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ, ರೈತರಿಗೆ ಹೊರೆಯಾಗದಂತೆ ಏಕರೂಪ ದರ ನಿಗದಿ ಮಾಡಬೇಕು. ಈಗಿರುವ ವ್ಯವಸ್ಥೆಯಲ್ಲಿ ಖಾಸಗಿ ಕಟಾವು ಯಂತ್ರಗಳ ಮಾಲೀಕರ ಮೇಲಾಗಲಿ, ಮಧ್ಯವರ್ತಿಗಳ ಮೇಲಾಗಲಿ ಕಾನೂನಿನಡಿ ಕ್ರಮ ಜರುಗಿಸಲು ಸಾದ್ಯವಿಲ್ಲ. ಸರ್ಕಾರವೇ ನಿರ್ಧಿಷ್ಟ ದರ ನಿಗದಿ ಮಾಡಿದರೆ, ಉಲ್ಲಂಘಿಸುವವರ ವಿರುದ್ಧ ರೈತರು ದೂರು ನೀಡಬಹುದು. ರೈತರ ಶೋಷಣೆಯೂ ತಪ್ಪಲಿದೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.