ಕಾಪು (ಪಡುಬಿದ್ರಿ): ನಾಗರ ಪಂಚಮಿಯಂದು ಜೀವಂತ ನಾಗನಿಗೆ ನೀರು, ಸಿಯಾಳಾಭಿಷೇಕದ ಪೂಜೆ ನಡೆಯುತ್ತದೆ. ಆದರೆ, ಗಾಯಗೊಂಡು ಶುಶ್ರೂಷೆಯಲ್ಲಿರುವ ಹಾವುಗಳಿಗೆ ಮಾತ್ರ ಇಲ್ಲಿ ಪೂಜೆ ನಡೆಯುವುದು ವಿಶೇಷ.
ಕಾಪು ತಾಲ್ಲೂಕಿನ ಮಜೂರಿನ ಉರಗ ಪ್ರೇಮಿ ಗೋವರ್ಧನ್ ರಾವ್ ಮನೆಯಲ್ಲಿ. ನಾಗರಪಂಚಮಿಯಂದು ಪ್ರತಿ ವರ್ಷದಂತೆಯೂ ಈ ಬಾರಿಯೂ ಜೀವಂತ ನಾಗನಿಗೆ ನೀರು, ಸೀಯಾಳ ಹಾಗೂ ಅರಶಿನ ಹುಡಿಯನ್ನು ಎರೆದು, ಆರತಿ ಬೆಳಗಿ ಪೂಜೆ ಮಾಡಲಾಯಿತು.
ಎಲ್ಲೇ ಹಾವುಗಳು ಗಾಯಗೊಂಡು ಬಿದ್ದರೂ, ಮೊದಲಿಗೆ ಗೋವರ್ಧನ ರಾವ್ ಅವರಿಗೆ ದೂರವಾಣಿ ಕರೆ ಬರುತ್ತದೆ. ಕೂಡಲೇ ಅವರು ಗಾಯಗೊಂಡ ನಾಗರ ಹಾವು ಇದ್ದ ಸ್ಥಳಕ್ಕೆ ದೌಡಾಯಿಸುತ್ತಾರೆ. ಅದಕ್ಕೆ ಶುಶ್ರೂಷೆ ಮಾಡಿ ಪೂರ್ಣವಾಗಿ ಗುಣಮುಖಗೊಂಡ ಹಾವನ್ನು ಮತ್ತೆ ಕಾಡಿಗೆ ಸೇರಿಸುತ್ತಾರೆ. ಕೆಲವೊಂದು ಹಾವುಗಳ ಗಾಯ ಸಂಪೂರ್ಣ ಗುಣಮುಖ ಆಗಲು ವರ್ಷಗಳೇ ಹಿಡಿದಿವೆ.
ನಾಗರ ಹಾವು ಮೃತಪಟ್ಟರೆ, ಗಾಯಗೊಂಡಿದ್ದ ಹಾವನ್ನು ನೀಡಿದವರಿಗೆ ಗೋವರ್ಧನ ರಾವ್ ದೂರವಾಣಿ ಕರೆ ಮಾಡಿ ತಿಳಿಸುತ್ತಾರೆ. ಕೆಲವೊಮ್ಮೆ ಅವರೆ ಬಂದು ನಾಗರ ಹಾವಿನ ಅಂತಿಮ ಕ್ರಿಯೆ ಮಾಡುತ್ತಾರೆ. ಕೆಲವರು ಅಂತಿಮ ಕ್ರಿಯೆ ಮಾಡಲು ತಯಾರಿಲ್ಲದಾಗ ತಾವೇ ನೆರವೇರಿಸುತ್ತಾರೆ. ವರ್ಷಕ್ಕೆ ಸುಮಾರು 20 ರಿಂದ 25 ನಾಗರ ಹಾವುಗಳನ್ನು ಶುಶ್ರೂಷೆ ಮಾಡಿ ಕಾಡಿನಲ್ಲಿ ಬಿಡುವುದು ಇವರ ಕಾಯಕವೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.