ಪಡುಬಿದ್ರಿ: ಹೆಜಮಾಡಿ ಸಮುದ್ರ ತೀರದಿಂದ ಮಲ್ಪೆಗೆ ನೇರ ಸಂಪರ್ಕ ಕಲ್ಪಿಸಬೇಕೆಂಬ ಜನರ ಬಹುಕಾಲದ ಬೇಡಿಕೆಗಾಗಿ ಯಾವುದೇ ಮುಂದಾಲೋಚನೆ ಇಲ್ಲದೆ ನಿರ್ಮಿಸಿದ ₹80 ಲಕ್ಷದ ಸೇತುವೆ ಜನರ ಉಪಯೋಗಕ್ಕಿಲ್ಲದೆ ಪಾಳು ಬಿದ್ದಿದೆ.
ಕಾಮಿನಿ ನದಿಯು ಸಮುದ್ರ ಸೇರುವ ಮುಟ್ಟಳಿವೆ ಪ್ರದೇಶದಲ್ಲಿ 2017 ರಲ್ಲಿ ನಬಾರ್ಡ್‌ನ ₹80 ಲಕ್ಷ ಅನುದಾನದಲ್ಲಿ 65 ಮೀಟರ್ ಉದ್ದದ ಸೇತುವೆ ಹಾಗೂ 190 ಮೀಟರ್ ಉದ್ದಕ್ಕೆ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು.
ರಸ್ತೆ, ಸೇತುವೆ ಕಾಮಗಾರಿ ಅಗತ್ಯತೆ ಇದ್ದರೂ ವೈಜ್ಞಾನಿಕವಾಗಿ ಕಾಮಗಾರಿ ನಡೆಸಲಿಲ್ಲ. ಇದರಿಂದ ಮಳೆಗಾಲದಲ್ಲಿ ನದಿ ತೀರದ ಪ್ರದೇಶ ಮುಳುಗಡೆಯಾಗಲಿದೆ ಎಂದು ಆರೋಪ ಅಂದೇ ಕೇಳಿಬಂದಿತ್ತು. ಆದರೆ ಅಂದು ಎಂಜಿನಿಯರ್ ಈ ಬಗ್ಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು.
ಸಮುದ್ರ ಹಾಗೂ ಕಾಮಿನಿ ನದಿಯ ಮಧ್ಯೆ ನಿರ್ಮಾಣವಾದ ಸೇತುವೆ ಹಾಗೂ ರಸ್ತೆಯಿಂದ ಮಳೆಗಾಲದಲ್ಲಿ ನೀರು ಹರಿದು ಬಂದು ಮುಳುಗಡೆಯ ಭೀತಿ ಎದುರಾಗಿತ್ತು. ಬಳಿಕ ಜೆಸಿಬಿ ಮೂಲಕ ರಸ್ತೆಯನ್ನು ಕಡಿದು ನದಿ ನೀರು ಸಮುದ್ರಕ್ಕೆ ಹೋಗಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ನೀರು ಹರಿಯಲು ಕಡಿದ ಪ್ರದೇಶವೇ ಸೇತುವೆ ನಿರ್ಮಾಣಕ್ಕೆ ಸೂಕ್ತ ಸ್ಥಳವಾಗಿದೆ. ಈಗ ಸೇತುವೆ ನಿರ್ಮಿಸಿರುವ ಸ್ಥಳ ಎತ್ತರವಾಗಿರುವುದರಿಂದ ಅಲ್ಲಿ ನೀರಿನ ಹೊರಹರಿವು ಇಲ್ಲ. ಇದರಿಂದ ಹಿನ್ನೀರಿನ ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಲಿದೆ. ಸೇತುವೆಯಡಿ ಉಬ್ಬರದಿಂದ ಸಮುದ್ರದ ಉಪ್ಪು ನೀರು ನದಿ ಸೇರುತ್ತಿದೆ. ಅಲ್ಲದೆ ಈ ಪ್ರದೇಶದಲ್ಲಿ ಮರಳು ಶೇಖರಣೆಯಾಗಿ ಸೇತುವೆ ನಿರುಪಯೋಗಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಷ್ಟೊಂದು ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಜನರ ಉಪಯೋಗಕ್ಕಿಲ್ಲದೆ ಪಾಳುಬಿದ್ದಿದೆ. ಇದೀಗ ಆ ಜಾಗಕ್ಕೆ ಬರುವವರು ಸೆಲ್ಫಿ ಕ್ಲಿಕ್ಕಿಸಲು ಇರುವ ಕೇಂದ್ರವಾಗಿ ಮಾರ್ಪಟ್ಟಿದ್ದು, ರಾತ್ರಿಯ ವೇಳೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆ ನಿರ್ಮಾಣದಿಂದ ಸುತ್ತು ಬಳಸಿ ಸಂಚಾರ ಮಾಡುತ್ತಿದ್ದ ಪಡುಬಿದ್ರಿ ಮತ್ತು ಹೆಜಮಾಡಿ ಗ್ರಾಮಸ್ಥರಿಗೆ ತುಂಬ ಅನುಕೂಲವಾಗಬೇಕಿತ್ತು, ಆದರೆ ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಅಧಿಕಾರಿಗಳು ಏಕಾಏಕಿ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಿದ್ದಾರೆ. ಅದೂ ಕೂಡ ನೀರಿನ ಮೇಲ್ಮಟ್ಟದಲ್ಲಿಯೇ ತೂಬು ರಚಿಸಿ 65 ಮೀಟರ್ ಉದ್ದದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.