ಪಡುಬಿದ್ರಿ: ಕರಾವಳಿ ನಿಯಂತ್ರಣ ವಲಯ ಕಾನೂನು ಸಡಿಲಗೊಳಿಸಿದ ಬಳಿಕ ಕಾಪುವಿನಿಂದ ಪಡುಬಿದ್ರಿಯವರೆಗೆ ರೆಸಾರ್ಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಪು ತಾಲ್ಲೂಕಿನ ಪಡುಬಿದ್ರಿ, ಎರ್ಮಾಳು ತೆಂಕ, ಬಡಾ, ಉಚ್ಚಿಲ, ಮೂಳೂರು, ಕಾಪು ಮತ್ತು ಕೈಪುಂಜಾಲು ಭಾಗಗಳಲ್ಲಿ ರೆಸಾರ್ಟ್‌ಳು ನಿರ್ಮಾಣ ಹಂತದಲ್ಲಿದೆ. ಕಾಪು ಮತ್ತು ಮೂಳೂರು ವ್ಯಾಪ್ತಿಯಲ್ಲಿ ಈಗಾಗಲೇ ಐಷಾರಾಮಿ ರೆಸಾರ್ಟ್‌ಗಳು ನಿರ್ಮಾಣಗೊಂಡಿದ್ದು, ಇನ್ನೂ 35ಕ್ಕೂ ಅಧಿಕ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.
ನಿರ್ಮಾಣಗೊಳ್ಳುತ್ತಿರುವ ಬಹುತೇಕ ಕಟ್ಟಡಗಳು ಸಮುದ್ರ ತೀರದಲ್ಲಿ ನಿರ್ಮಾಣಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸ್ಥಳೀಯ ಮೀನುಗಾರರು ಭೀತಿ ವ್ಯಕ್ತಪಡಿಸಿದ್ದಾರೆ.
ಸಮುದ್ರದ ತೀರದಲ್ಲಿ ಕಟ್ಟಡ ನಿರ್ಮಿಸುತ್ತಿರುವುದರಿಂದ ಅಲ್ಲಿನ ನೈಸರ್ಗಿಕ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಆರೋಪವೂ ಕೇಳಿ ಬರುತ್ತಿವೆ.
ರೆಸಾರ್ಟ್ ನಿರ್ಮಾಣದ ವೇಳೆ ಕಡಲ ತೀರದಲ್ಲಿ ಅನಧಿಕೃತ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಗಿಡ, ಮರಗಳನ್ನು ತೆರವುಗೊಳಿಸುವ ಮೂಲಕ ಪರಿಸರ ನಾಶವಾಗಿದೆ. ಈ ಕ್ರಮ ಕಡಲ ತೀರದ ರಕ್ಷಣೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಎರ್ಮಾಳು ಹಾಗೂ ಉಚ್ಚಿಲ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳು ಕಡಲ ತೀರದ ನೈಸರ್ಗಿಕ ಸೌಂದರ್ಯವನ್ನೇ ಬದಲಿಸಿವೆ. ಕೆಲವು ರೆಸಾರ್ಟ್‌ಗಳು ತೀರ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಬಹುತೇಕ ರೆಸಾರ್ಟ್‌ಗಳು ಪ್ರಭಾವಿಗಳ ಮಾಲಕತ್ವದಲ್ಲಿದೆ ಎಂಬ ಮಾತು ಸ್ಥಳೀಯ ವಲಯಗಳಲ್ಲಿ ಹರಿದಾಡುತ್ತಿದೆ.
ಚರಂಡಿ ನಿರ್ಮಾಣ ವಿವಾದ: ಎರ್ಮಾಳಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಐಷಾರಾಮಿ ರೆಸಾರ್ಟೊಂದರಲ್ಲಿ ಸಮುದ್ರ ತೀರದಲ್ಲಿಯೇ ತಡೆಗೋಡೆ ನಿರ್ಮಿಸಲಾಗಿದೆ. ಹತ್ತಿರದ ತೆಂಕ ಎರ್ಮಾಳು ಪ್ರದೇಶದಲ್ಲಿಯೂ ಒಂದು ರೆಸಾರ್ಟ್ ಮಾಲೀಕರು ಸರ್ಕಾರಿ ಜಾಗದಲ್ಲಿದ್ದ ತೋಡನ್ನು ವಿಸ್ತರಿಸಿ ಕಾಂಕ್ರಿಟ್ ಚರಂಡಿ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಮೀನುಗಾರಿಕೆಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಭೂಮಿ ದರ ದುಪ್ಪಟ್ಟು: ಒಂದು ಕಾಲದಲ್ಲಿ ಸಮುದ್ರ ತೀರದಲ್ಲಿ ಅಷ್ಟೊಂದು ದರ ಇಲ್ಲದಿದ್ದರೂ ಇದೀಗ ಭೂಮಿ ದರ ಏಕಾಏಕಿ ಹೆಚ್ಚಿದೆ. ಈಗಿನ ದರ ಸೆಂಟ್ಸ್‌ಗೆ ₹10 ಲಕ್ಷಕ್ಕೂ ಅಧಿಕವಾಗಿದೆ. ಸ್ಥಳೀಯರು ಹೆಚ್ಚಿನ ದರಕ್ಕೆ ಭೂಮಿಯನ್ನು ಮಾರಾಟ ಮಾಡಿ ಬೇರೆ ಕಡೆ ಸ್ಥಳಾಂತರಗೊಂಡು ಮನೆ ನಿರ್ಮಿಸುತ್ತಿದ್ದಾರೆ. ಎರ್ಮಾಳು ಪ್ರದೇಶ ಪೂರ್ಣ ರೆಸಾರ್ಟ್‌ಮಯವಾಗಿದ್ದು, ಇಲ್ಲಿದ್ದ ವಾಸದ ಮನೆಗಳು ಮರೆಯಾಗಿ ರೆಸಾರ್ಟ್‌ಗಳೇ ತುಂಬಿಕೊಂಡಿವೆ.
‘ಮೀನುಗಾರಿಕೆಗೆ ತೊಂದರೆ’
ರಿಯಲ್ ಎಸ್ಟೇಟ್ ಉದ್ದಿಮೆಗಳಿಂದ ಈ ಭಾಗದಲ್ಲಿ ಭೂಮಿಯ ದರ ಹೆಚ್ಚಾಗಿದ್ದು ಬಂಡವಾಳ ಶಾಹಿಗಳು ರೆಸಾರ್ಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಸಮುದ್ರ ತೀರದಲ್ಲಿರುವ ಕುಮ್ಕಿ ಜಾಗವನ್ನೂ ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಕುಮ್ಕಿ ಜಾಗದಲ್ಲಿ ಕೈರಂಪಣಿ ಹಾಗೂ ನಾಡದೋಣಿ ಮೀನುಗಾರಿಕೆ ನಡೆಸುವವರು ತಮ್ಮ ದೋಣಿಗಳನ್ನು ಇಡುತಿದ್ದರು. ಆದರೆ ಈಗ ರೆಸಾರ್ಟ್ ಮಾಲೀಕರು ಕುಮ್ಕಿ ಜಾಗದ ಅತಿಕ್ರಮಣದಿಂದ ಈ ಭಾಗದಲ್ಲಿ ದೋಣಿ ಇಡಲು ತೊಂದರೆ ಅನುಭವಿಸಬೇಕಾಗಿದೆ. ಯಾವುದೇ ಅಭಿವೃದ್ಧಿಗೆ ಸ್ವಾಗತ. ಅದರಿಂದ ಉದ್ಯೋಗ ದೊರಕುತ್ತದೆ. ಆದರೆ ಇಲ್ಲಿನ ಮೂಲ ಮೀನುಗಾರಿಕೆಗೆ ತೊಂದರೆಯಾದಲ್ಲಿ ನಮ್ಮ ವಿರೋಧ ಎಂದಿಗೂ ಇದೆ ಎಂದು ಪಡುಬಿದ್ರಿ ಕಾಡಿಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್ ತಿಳಿಸಿದರು.
ನಿಯಮ ಸಡಿಲ: ಹೆಚ್ಚಿದ ರೆಸಾರ್ಟ್
ಕಾಪುವಿನಿಂದ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ವರೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಿಆರ್‌ಝೆಡ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಈ ಪ್ರದೇಶ ಸಿಆರ್‌ಝೆಡ್ ವಲಯ-2ರಲ್ಲಿ ಇದೆ. ಇದರಿಂದ ಇಲ್ಲಿ ಮನೆ ನಿರ್ಮಾಣ ರೆಸಾರ್ಟ್‌ಗಳಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸುಲಭವಾಗಿ ಸಿಗುತ್ತದೆ. ಯಾವುದೇ ಕಟ್ಟಡ ನಿರ್ಮಾಣಕ್ಕೆ ಆನ್‌ಲೈನ್ ಮೂಲಕ ಸೂಕ್ತ ದಾಖಲೆ ಒದಗಿಸಿದಲ್ಲಿ ಅನುಮತಿ ಪಡೆಯಬಹುದಾಗಿದೆ. ನಿಯಮಗಳನ್ನು ಮೀರಿ ಕಟ್ಟಡ ನಿರ್ಮಿಸಿರುವುದು ಕಂಡುಬಂದಲ್ಲಿ ಅಥವಾ ದೂರುಗಳು ಬಂದಲ್ಲಿ ಅಂತಹ ಕಟ್ಟಡ ಮಾಲೀಕರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಸಿಆರ್‌ಝೆಡ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.