ADVERTISEMENT

ಕಟಪಾಡಿ: ಪಾಂಗಾಳ ನಾಯಕ್ ಮನೆಯಲ್ಲಿ ಸ್ವಾತಂತ್ರ್ಯವೀರರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:25 IST
Last Updated 10 ಆಗಸ್ಟ್ 2022, 4:25 IST

ಶಿರ್ವ: ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ‘ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮದಲ್ಲಿ ಕಟಪಾಡಿ ಸಮೀಪದ ಪಾಂಗಾಳ ನಾಯಕ್ ಮನೆಯಲ್ಲಿ ಸ್ವಾತಂತ್ರ್ಯವೀರರ
ಸ್ಮರಣೆ ಮಂಗಳವಾರ ನಡೆಯಿತು.

ಸಾಹಿತಿ ಕ್ಯಾಥರೀನ್ ರಾಡ್ರಿಗಸ್ ಕಟಪಾಡಿ ಮಾತನಾಡಿ, ‘ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಂಗಾಳ ನಾಯಕ್ ಅವರ ಕುಟುಂಬ ಪಾಲ್ಗೊಂಡಿತ್ತು. ಕಟಪಾಡಿಗೆ ಗಾಂಧೀಜಿ ಅವರು ಬಂದು ಉಪ್ಪಿನ ಸತ್ಯಾಗ್ರಹ, ಹೋರಾಟಕ್ಕೆ ಕರೆಕೊಟ್ಟಾಗ ಪಾಂಗಾಳ ನಾಯಕರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿ, ಜೈಲು ವಾಸ ಅನುಭವಿಸಿದ್ದರು’ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಕಾಪು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ‘ಪಾಂಗಾಳ ನಾಯಕ್ ಮನೆತನ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಯಲ್ಲಿ ತೊಡಗಿಕೊಂಡು ಅವರು ಮಾದರಿ ಆಗಿದ್ದರು. ಎಕರೆಗಟ್ಟಳೆ ಭೂಮಿಯನ್ನು ಶಿಕ್ಷಣ ಸಂಸ್ಥೆ, ಧಾರ್ಮಿಕ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ’ ಎಂದರು.

ADVERTISEMENT

ಪಾಂಗಾಳ ನಾಯಕ್ ಮನೆತನದ ಪಾಂಗಾಳ ಗೋಪಾಲಕೃಷ್ಣ ನಾಯಕ್ ತಮ್ಮ ಮನೆತನದ ಹಿರಿಯರ ಹೋರಾಟದ ಹಾದಿಯನ್ನು ಸ್ಮರಿಸಿದರು.

ಉಡುಪಿ ಜಿಲ್ಲಾ ಕಸಾಪ ಕನ್ನಡ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟಿಂಗೇರಿ ದೇವದಾಸ್ ಹೆಬ್ಬಾರ್, ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಆಚಾರ್ಯ, ಗ್ರಾಮ ಕಂದಾಯ ನಿರೀಕ್ಷಿಕ ಡೇನಿಯಲ್, ಕಸಾಪ ಕಾರ್ಯದರ್ಶಿ ನೀಲಾನಂದ ನಾಯ್ಕ್, ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್, ಸದಸ್ಯೆ ವಿದ್ಯಾ ಅಮ್ಮಣ್ಣಾಯ, ಯಶೋಧಾ ಎಲ್ಲೂರು, ಡಿ. ಆರ್. ನೋರೋನ್ಹ, ಅನಂತ ಮೂಡಿತ್ತಾಯ, ಉಪನ್ಯಾಸಕ ಜಡಭರತ ಶರ್ಮಾ, ಬೆಳ್ಳೆ ಸದಾನಂದ ಶೆಣೈ,ಪ್ರಕಾಶ ಸುವರ್ಣ ಕಟಪಾಡಿ ಇದ್ದರು.

ಕಸಾಪ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.