ADVERTISEMENT

ಅರ್ಜಿ ಹಾಕಬೇಕಿಲ್ಲ, ಮನೆ ಬಾಗಿಲಿಗೆ ಪಿಂಚಣಿ: ಜಿಲ್ಲಾಧಿಕಾರಿ ಜಿ.ಜಗದೀಶ್‌

1,938 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ: ಜಿಲ್ಲಾಧಿಕಾರಿ ಜಿ.ಜಗದೀಶ್‌

ಬಾಲಚಂದ್ರ ಎಚ್.
Published 5 ಫೆಬ್ರುವರಿ 2020, 16:08 IST
Last Updated 5 ಫೆಬ್ರುವರಿ 2020, 16:08 IST
ಜಿ.ಜಗದೀಶ್, ಜಿಲ್ಲಾಧಿಕಾರಿ
ಜಿ.ಜಗದೀಶ್, ಜಿಲ್ಲಾಧಿಕಾರಿ   

ಉಡುಪಿ:ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯಲು ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಜಿಲ್ಲಾಡಳಿತವೇ ಜನರ ಮನೆಬಾಗಿಲಿಗೆ ಹೋಗುತ್ತಿದೆ. ಅರ್ಹರಿಂದ ಅರ್ಜಿ ಪಡೆದು ಪಿಂಚಣಿ ಮಂಜೂರಾತಿ ಪತ್ರವನ್ನು ನೀಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆಗೆ ಉತ್ತಮ ಸ್ಪಂದನ ದೊರೆತಿದೆ.

1,938 ಮಂದಿಗೆ ಪಿಂಚಣಿ ಮಂಜೂರಾತಿ:

ನೂತನ ಯೋಜನೆಯಡಿಜಿಲ್ಲೆಯಲ್ಲಿ ಇದುವರೆಗೂ 1,938 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ನೀಡಲಾಗಿದೆ. 1,000ಕ್ಕೂ ಹೆಚ್ಚು ಅರ್ಜಿಗಳು ಬಾಕಿಯಿದ್ದು ಎರಡು ದಿನಗಳಲ್ಲಿ ವಿಲೇವಾರಿಯಾಗಲಿದೆ ಎನ್ನುತ್ತಾರೆ ಯೋಜನೆಯ ರೂವಾರಿಗಳಾದ ಜಿಲ್ಲಾಧಿಕಾರಿ ಜಿ.ಜಗದೀಶ್‌.

ADVERTISEMENT

ಫಲಾನುಭವಿಗಳ ಗುರುತಿಸುವಿಕೆ ಹೇಗೆ?

ಜಿಲ್ಲಾಡಳಿತದ ಬಳಿ ಜಿಲ್ಲೆಯಲ್ಲಿರುವ ಎಲ್ಲ ಕುಟುಂಬಗಳ ಮಾಹಿತಿ ಇದೆ. ಆಧಾರ್ ಕಾರ್ಡ್‌ ಹಾಗೂ ಓವರ್‌ ದ ಕೌಂಟರ್‌ ಸರ್ವೀಸ್‌ನಡಿ 60 ವರ್ಷ ತುಂಬಿದವರ ವಿವರ, ಪಿಂಚಣಿ ಪಡೆಯಲು ಮಾನದಂಡವಾಗಿರುವ ವಾರ್ಷಿಕ ವರಮಾನ, ಆಸ್ತಿಯ ವಿವರಗಳು ಲಭ್ಯವಿದ್ದು, ಅರ್ಹ ಕುಟುಂಬಗಳನ್ನು ಗುರುತಿಸಲಾಗುತ್ತಿದೆ.

ಈ ಮಾಹಿತಿಯ ಆಧಾರದ ಮೇಲೆ ಗ್ರಾಮ ಲೆಕ್ಕಾಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ, ಅರ್ಹರು ಎಂದು ಕಂಡುಬಂದರೆ ಪಿಂಚಣಿಗೆ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಅರ್ಜಿ ಪರಿಶೀಲಿಸಿ ಪಿಂಚಣಿ ಮಂಜೂರಾತಿ ಆದೇಶ ಪ್ರತಿ ನೀಡುತ್ತಾರೆ ಎಂದು ಡಿಸಿ ಮಾಹಿತಿ ನೀಡಿದರು.

ಪ್ರತಿದಿನ ವೃದ್ಧರು, ಅಂಗವಿಕಲರು, ವಿಧವೆಯರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ಹಾಗೂ ಪಿಂಚಣಿ ಮಂಜೂರಾತಿಗೆ ಮಧ್ಯವರ್ತಿಗಳಿಗೆ ಎರಡರಿಂದ ಮೂರು ತಿಂಗಳ ಹಣ ಕೊಡುತ್ತಿರುವುದನ್ನು ತಿಳಿದು ಬೇಸರವಾಯಿತು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತವನ್ನೇ ಜನರ ಮನೆಬಾಗಿಲಿಗೆ ಕೊಂಡೊಯ್ಯಲು ನಿರ್ಧರಿಸಲಾಯಿತು ಎಂದು ಯೋಜನೆ ಹುಟ್ಟಿಕೊಂಡ ಬಗೆಯನ್ನು ಜಿಲ್ಲಾಧಿಕಾರಿ ವಿವರಿಸಿದರು.

ಮಧ್ಯವರ್ತಿಗಳ ಮೂಲಕ ಹಾಗೂ ನೇರವಾಗಿ ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಅನರ್ಹರಿಗೂ ಪಿಂಚಣಿ ಮಂಜೂರಾಗುತ್ತಿರುವ ದೂರುಗಳಿವೆ. ಹೊಸ ವಿಧಾನದಲ್ಲಿ ಅರ್ಹರಿಗೆ ಮಾತ್ರ ಪಿಂಚಣಿ ಸಿಗುತ್ತಿದ್ದು, ಸರ್ಕಾರದ ಹಣ ಸೋರಿಕೆ ನಿಂತಿದೆ. ಕಂದಾಯ ಸಚಿವರಾದ ಆರ್‌.ಅಶೋಕ್ ಶೀಘ್ರದಲ್ಲೇ ಜಿಲ್ಲೆಗೆ ಭೇಟಿ ನೀಡಲಿದ್ದು, ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ವಿತರಿಸಲಿದ್ದಾರೆ ಎಂದು ಡಿಸಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.