ADVERTISEMENT

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ಬೇರೆಡೆಗೆ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:26 IST
Last Updated 17 ಡಿಸೆಂಬರ್ 2025, 7:26 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

(ಸಾಂದರ್ಭಿಕ ಚಿತ್ರ)

ಉಡುಪಿ: ‘ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ, ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಸಂಘಟನೆಗಳ ಪ್ರಮುಖರು ಅನುಮಾನ ವ್ಯಕ್ತಪಡಿಸಿದ ಕಾರಣ ಪ್ರಕರಣದ ತನಿಖೆಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯಿಂದ ವರ್ಗಾಯಿಸಿ, ಸೂಕ್ತ ತನಿಖಾಧಿಕಾರಿಗೆ ನೀಡಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಮಂಗಳವಾರ ತಿಳಿಸಿದ್ದಾರೆ.

ADVERTISEMENT

‘2014ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆಶಿಕ್‌ ಎಂಬುವವರಿಗೆ ಸಜೆಯಾಗಿ, ₹20 ಲಕ್ಷ ದಂಡ ಹಾಗೂ ಅದರ ಬಡ್ಡಿಯನ್ನು ಜಮಾ ಮಾಡುವಂತೆ ನ್ಯಾಯಾಲಯದಿಂದ ತೀರ್ಪು ಬಂದಿತ್ತು. ಆರೋಪಿ ಆಶಿಕ್‌ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಹಣವನ್ನು ಕಟ್ಟದಿರುವುದರಿಂದ ಅವರನ್ನು ಬಂಧಿಸಿ ಹಾಜರುಪಡಿಸುವಂತೆ ನ್ಯಾಯಾಲಯವು ಮಲ್ಪೆ ಪೊಲೀಸ್‌ ಠಾಣೆಗೆ ಸೂಚನಾ ಪತ್ರ ಹೊರಡಿಸಿ, ಆದೇಶಿಸಿತ್ತು’ ಎಂದು ಅವರು ಹೇಳಿದ್ದಾರೆ.

‘ಅದರಂತೆ ವಾರಂಟ್‌ ಜಾರಿ ಮಾಡಲು ಮಲ್ಪೆ ಪೊಲೀಸ್‌ ಠಾಣಾ ಸಿಬ್ಬಂದಿ ಬ್ರಹ್ಮಾವರದಲ್ಲಿರುವ ಆಶಿಕ್‌ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಆ ಮನೆಯಲ್ಲಿದ್ದ ‌ಅಕ್ಷತಾ ಪೂಜಾರಿ ಮತ್ತು ಇನ್ನೊಬ್ಬ ಮಹಿಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ಅವರ ವಿರುದ್ಧ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದಿದ್ದಾರೆ.

‘ಈ ಘಟನೆಗೆ ಸಂಬಂಧಿಸಿದಂತೆ ಎರಡು ದಿನಗಳಿಂದ ಬಿಲ್ಲವ ಸಮಾಜದ ಸಂಘಟನೆಗಳು, ಜನಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸಂತ್ರಸ್ತ ಮಹಿಳೆಯರು ಇಲಾಖಾ ಸಿಬ್ಬಂದಿ ಮೇಲೆ ಮಾಡಿರುವಂತಹ ಆರೋಪಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆಗೆ ಒಳಪಡಿಸಿ, ಲೋಪಗಳು ಕಂಡುಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುದು’ ಎಂದು ಅವರು ಹೇಳಿದ್ದಾರೆ.

‌ಅಕ್ಷತಾ ಪೂಜಾರಿ ಎಂಬ ಯುವತಿಯ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಉಡುಪಿ ಜಿಲ್ಲಾ ಬಿಲ್ಲವ ಯುವ ಮೇದಿಕೆಯು ಬ್ರಹ್ಮಾವರ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಲು ಕರೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.