ADVERTISEMENT

ವಿದ್ಯಾರ್ಥಿನಿ ಮೇಲೆ ಪೊಲೀಸ್‌ ದೌರ್ಜನ್ಯ: ಠಾಣೆ ಎದುರು ಪ್ರತಿಭಟನೆ

ವಿದ್ಯಾರ್ಥಿನಿ ಮೇಲೆ ಪೊಲೀಸ್‌ ದೌರ್ಜನ್ಯ: ಜಿಲ್ಲಾ ಬಿಲ್ಲವ ಯುವ ವೇದಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:18 IST
Last Updated 18 ಡಿಸೆಂಬರ್ 2025, 6:18 IST
ಬ್ರಹ್ಮಾವರ ಪೊಲೀಸ್‌ ಠಾಣೆಯ ಎದುರು ಬುಧವಾರ ಬಿಲ್ಲವ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ ನಡೆಯಿತು
ಬ್ರಹ್ಮಾವರ ಪೊಲೀಸ್‌ ಠಾಣೆಯ ಎದುರು ಬುಧವಾರ ಬಿಲ್ಲವ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ ನಡೆಯಿತು   

ಬ್ರಹ್ಮಾವರ: ವಿದ್ಯಾರ್ಥಿನಿ ಅಕ್ಷತಾ ಪೂಜಾರಿ ಎಂಬುವವರ ಮನೆಗೆ ಪೊಲೀಸರು ಮುಂಜಾನೆ ಅಕ್ರಮ ಪ್ರವೇಶ ಮಾಡಿ, ಅಧಿಕಾರ ದುರುಪಯೋಗಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಮತ್ತು ಸಾರ್ವಜನಿಕರು, ಬ್ರಹ್ಮಾವರ ಪೊಲೀಸ್ ಠಾಣೆಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಬಿಲ್ಲವ ಸಂಘಟನೆಗಳ ಮುನ್ನೂರಕ್ಕೂ ಹೆಚ್ಚು ಮಂದಿ ಠಾಣೆಯ ವಠಾರದಲ್ಲಿ ಜಮಾಯಿಸಿ, ಪೊಲೀಸರು ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳುವ ಉದ್ದೇಶದಿಂದ ದೌರ್ಜನ್ಯಕ್ಕೆ ಒಳಗಾದ ಬಡ ವಿದ್ಯಾರ್ಥಿನಿಯ ಮತ್ತು ತಾಯಿಯ ಮೇಲೆ ಕರ್ತವ್ಯ ಅಡ್ಡಿ ಪಡಿಸಿದ್ದಾರೆಂದು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಈ ವಿಷಯದ ಕುರಿತು ಬಿಲ್ಲವ ಸಂಘಟನೆಗಳು, ಸಮಾಜದ ಮುಖಂಡರು, ಮಹಿಳಾ ಪ್ರತಿನಿಧಿಗಳು ಸಭೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದರು.

ADVERTISEMENT

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನ್ಯಾಯ ದೊರಕಿಸುವ ಭರವಸೆಯ ಮಾತುಗಳನ್ನು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳುವ ಕುರಿತು ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ. ಈ ಕಾರಣಕ್ಕೆ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಮತ್ತು ಅನ್ಯಾಯಕ್ಕೊಳಗಾದ ಅಕ್ಷತಾ ಪೂಜಾರಿ ಮತ್ತು ಅವರ ತಾಯಿಗೆ ನ್ಯಾಯ ದೊರಕಿಸುವ ಸಲುವಾಗಿ ಪ್ರತಿಭಟನೆ ನಡೆಸಲಾಗಿದೆ’ ಎಂದು ಪ್ರತಿಭಟನಕಾರರು ತಿಳಿಸಿದರು.

ಪೊಲೀಸರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದರು. ಈ ಸಂದರ್ಭ ಸ್ಥಳದಲ್ಲಿದ್ದ ಉಡುಪಿ ಡಿ.ವೈ.ಎಸ್.ಪಿ. ಪ್ರಭು ಡಿ.ಟಿ. ಮಾತನಾಡಿ, ‘ಈ ಪ್ರಕರಣದ ತನಿಖೆಯನ್ನು ಮಣಿಪಾಲ ಠಾಣೆಗೆ ವರ್ಗಾಯಿಸಲಾಗಿದೆ. ಮಾತ್ರವಲ್ಲದೇ ಈ ಬಗ್ಗೆ ಹೆಚ್ಚಿನ ತನಿಖೆಗೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯನ್ನು ನೇಮಿಸಲಾಗಿದೆ’ ಎಂದು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರು. ಆದರೂ ಪ್ರತಿಭಟನಕಾರರು ಪ್ರತಿಭಟನೆ ಕೈಬಿಡಲಿಲ್ಲ.

ಉಡುಪಿ ಜಿಲ್ಲಾ ಬಿಲ್ಲವ ಯುವ ಸಂಘಟನೆಯ ಅಧ್ಯಕ್ಷ ಪ್ರವೀಣ ಪೂಜಾರಿ ಮಾತನಾಡಿ, ‘ಅಕ್ಷತಾ ಪೂಜಾರಿ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ಮೇಲೆ ಮೊದಲು ಕೇಸು ದಾಖಲಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಪಟ್ಟು ಹಿಡಿದರು. ‘ಪೊಲೀಸರ ವಿರುದ್ಧ ಹೋರಾಟ ಅಲ್ಲ, ಕೆಲ ತಪ್ಪಿತಸ್ಥರ ವಿರುದ್ಧ ಮಾತ್ರ. ಪೊಲೀಸರಿಗೂ ಇದು ಎಚ್ಚರಿಕೆಯ ಪಾಠವಾಗಿದೆ. ಕಾನೂನು ರೀತಿಯಲ್ಲಿ ವ್ಯವಹರಿಸುವಂತೆ ಕೋರುತ್ತೇನೆ. ಅಕ್ಷತಾಳಿಗೆ ನ್ಯಾಯ ಕೊಡಿಸುವುದಷ್ಟೇ ನಮ್ಮ ಆದ್ಯತೆ’ ಎಂದು ತಿಳಿಸಿದರು.

ಬಳಿಕ ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಲ್, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ‘ಪೊಲೀಸರು ತಪ್ಪು ಮಾಡಿದ್ದಲ್ಲಿ ಅವರ ವಿರುದ್ಧ ದೂರು ದಾಖಲಿಸಲು ಜಿಲ್ಲಾ ಮಟ್ಟದ ಪೋಲಿಸ್ ದೂರು ಪ್ರಾಧಿಕಾರದ ವ್ಯವಸ್ಥೆ ಇದೆ. ಅಲ್ಲಿ ನಿಮ್ಮ ಮನವಿ ಕೊಡಿ ಅಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ. ನಿಮಗೆ ಖಂಡಿತಾ ನ್ಯಾಯ ಸಿಗುತ್ತದೆ’ ಎಂದರು. ಅಲ್ಲಿಯೂ ನ್ಯಾಯ ಸಿಗದೇ ಇದ್ದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಕರಣ ದಾಖಲಿಸಬಹುದು. ಆದರೆ, ಇಲ್ಲಿ ಯಾವುದೇ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರು.

ಪಟ್ಟು ಬಿಡದ ಪ್ರತಿಭಟನಾಕಾರರು: ದೌರ್ಜನ್ಯಕ್ಕೊಳಗಾದ ಅಕ್ಷತಾ ಮತ್ತು ತಾಯಿಯ ದೂರನ್ನು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತೆಗೆದುಕೊಳ್ಳಲೇಬೇಕು ಅವರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಎಫ್‌ಐಆರ್ ಹಾಕುವ ತನಕ ಪ್ರತಿಭಟನೆಯನ್ನು ಕೈ ಬಿಡಲ್ಲ ಎಂದು ಸೇರಿದ್ದ ಪ್ರತಿಭಟನಾಕಾರರು ಪಟ್ಟು ಹಿಡಿದರು. ನ್ಯಾಯಕ್ಕಾಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ರಾತ್ರಿಯವರೆಗೂ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಬಿಗಿ ಬಂದೋಬಸ್ತ್ ಎಸ್‌ಪಿ ಭೇಟಿ

ಕತ್ತಲಾದರೂ ಪ್ರತಿಟನಾಕಾರರು ತಮ್ಮ ನಿಲುವು ಬದಲಿಸದ ಕಾರಣ ಉಡುಪಿಯಿಂದ ಹೆಚ್ಚುವರಿ ಪೊಲೀಸರನ್ನು ಕರೆಯಿಸಲಾಗಿತ್ತು. ಪರಿಸ್ಥಿತಿ ತಿಳಿಗೊಳಿಸಲು ಜಿಲ್ಲಾ ಎಸ್‌.ಪಿ ಹರಿರಾಮ್ ಶಂಕರ್ ಸ್ಥಳಕ್ಕೆ ಬಂದು ಮುಖಂಡರಲ್ಲಿ ಚರ್ಚಿಸಿ ನಂತರ ಅಕ್ಷತಾಳಿಗೆ ದೌರ್ಜನ್ಯ ಎಸಗಿದ ಐವರ ಮೇಲೆ ಎಫ್‌ಐಆರ್ ಹಾಕಿ ನಿಮಗೆ ಅದರ ಪ್ರತಿ ನೀಡುತ್ತೇವೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಬಿ.ಎನ್.ಶಂಕರ ಪೂಜಾರಿ ಗೀತಾಂಜಲಿ ಸುವರ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.