ADVERTISEMENT

ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ: ಇಂಧನ ಸಚಿವ ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಮೇ 2022, 12:55 IST
Last Updated 2 ಮೇ 2022, 12:55 IST
ವಿ. ಸುನಿಲ್ ಕುಮಾರ್
ವಿ. ಸುನಿಲ್ ಕುಮಾರ್   

ಉಡುಪಿ: ಜುಲೈ ಅಂತ್ಯದೊಳಗೆ ರಾಜ್ಯದಾದ್ಯಂತ 1,000 ವಿದ್ಯುತ್ ರೀಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಸೋಮವಾರ ಉಡುಪಿಯಲ್ಲಿ ಹೇಳಿದರು.

ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚುತ್ತಿರುವುದರಿಂದ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ, ಎರಡನೇ ಹಂತದಲ್ಲಿ ಪ್ರವಾಸಿ ಕೇಂದ್ರಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆರಂಭಿಸಲಾಗುವುದು.

ಮೇ ಅಂತ್ಯಕ್ಕೆ ಬೆಂಗಳೂರಿನಲ್ಲಿ 300 ರೀಚಾರ್ಜಿಂಗ್ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. 1,000 ರೀಚಾರ್ಜಿಂಗ್ ಕೇಂದ್ರ ಆರಂಭಿಸುವ ಕಾರ್ಯಕ್ರಮಕ್ಕೆ ಮೇ 7ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.

ADVERTISEMENT

ಕಲ್ಲಿದ್ದಲು ಕೊರತೆ ಇಲ್ಲ:

ರಾಜ್ಯದಲ್ಲ ಕಲ್ಲಿದ್ದಲು ಕೊರತೆಯ ಕಾರಣಕ್ಕೆ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿಲ್ಲ. ರಾಜ್ಯಕ್ಕೆ ಬೇಕಾದ ಕಲ್ಲಿದ್ದಲಿನ ಸರಬರಾಜು ನಿರ್ವಹಣೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಏಪ್ರಿಲ್‌ನಲ್ಲಿ ಮಳೆ ಬಂದಿದ್ದರಿಂದ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಮೇಲಿನ ಒತ್ತಡ ಕಡಿಮೆಯಾಗಿದೆ.

ಪ್ರತಿನಿತ್ಯ 13 ರಿಂದ 15 ಕಲ್ಲಿದ್ದಲು ರೇಕ್‌ಗಳು ರಾಜ್ಯಕ್ಕೆ ಪೂರೈಕೆಯಾಗುತ್ತಿವೆ. ಬೇಸಿಗೆ ಮುಗಿಯುವರೆಗೂ ಕಲ್ಲಿದ್ದಲು ನಿರ್ವಹಣೆ ಮಾಡಲು ಎರಡು ದಿನಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರೆತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಮೇ 5ರಿಂದ 15ರವರೆಗೆ ರಾಜ್ಯದಾದ್ಯಂತ ಟ್ರಾನ್ಸ್‌ಫಾರಂಗಳ ಅಭಿಯಾನ ನಡೆಯಲಿದ್ದು, ಟಿಸಿಗಳಲ್ಲಿ ಆಯಿಲ್ ದಮಸ್ಯೆ, ಅರ್ಥಿಂಗ್, ಮಳೆಗಾಲದಲ್ಲಿ ಆಗಬಹುದಾದ ಅನಾಹುತಗಳನ್ನು ತಡೆದು ಟಿಸಿಗಳ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 15 ವರ್ಷ ಹಳೆಯ ಹಾಗೂ ಅಪಾಯಕಾರಿ ಟಿಸಿಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.