ADVERTISEMENT

ದೇವನೂರು ಮೈಕ್ ಬಿಟ್ಟು ಪೆನ್‌ ಕೈಗೆತ್ತಿಕೊಳ್ಳಲಿ; ಪ್ರತಾಪ್ ಸಿಂಹ

​ಪ್ರಜಾವಾಣಿ ವಾರ್ತೆ
Published 28 ಮೇ 2022, 9:56 IST
Last Updated 28 ಮೇ 2022, 9:56 IST
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ   

ಉಡುಪಿ: ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಊಹಾಪೋಹ ಸೃಷ್ಟಿಸುತ್ತಿರುವ ಸಾಹಿತಿ ದೇವನೂರು ಮಹಾದೇವ ಮೈಕ್‌ ಬಿಟ್ಟು ಪೆನ್‌ ಕೈಗೆತ್ತಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು.

ಶನಿವಾರ ಉಡುಪಿಯಲ್ಲಿ ಮಾತನಾಡಿ, ದೇವನೂರು ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್‌ ಮುಂದೆ ನಿಂತಿದ್ದಾರೆ. 2014, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು. ಆದರೆ, ಜನರು ನೀಡಿದ ತೀರ್ಪು ಎಲ್ಲರಿಗೂ ಗೊತ್ತಿದೆ. ಕುಸುಮಬಾಲೆ ಎಂಬ ಅದ್ಭುತ ಕೃತಿ ಬರೆದಿರುವ ದೇವನೂರು ಬಗ್ಗೆ ಅಪಾರವಾದ ಗೌರವವಿದೆ. ಕಾಂಗ್ರೆಸ್ ಪರ ಪ್ರಚಾರ ಮಾಡುವುದನ್ನು ಬಿಟ್ಟು ಅವರು ಹಿಂದಿನಂತೆ ಮತ್ತೆ ಪೆನ್‌ ಕೈಗೆತ್ತಿಕೊಂಡು ಅದ್ಭುತ ಕೃತಿ ರಚಿಸಲಿ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ ಹಾಗೂ ದೇವನೂರು ಮಹಾದೇವ ಊಹಾಪೋಹ ಸೃಷ್ಟಿಸುತ್ತಿದ್ದಾರೆ. ಮೈಕಾಸುರರಂತೆ ವರ್ತಿಸುತ್ತಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಹಿರಂಗ ಚರ್ಚೆಗೆ ಆಹ್ವಾನಿಸಿದರೂ ಒಪ್ಪಿಕೊಳ್ಳದೆ ಪಲಾಯನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಅನಗತ್ಯ ತಕರಾರು ಎತ್ತುವವರು ವಿಚಾರ ನಪುಂಸಕರು. ಅವರ ಬಳಿ ವಿಚಾರಗಳಿಲ್ಲ; ಉಗುಳು ಮಾತ್ರ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರಲಿ. ಭಗತ್ ಸಿಂಗ್, ನಾರಾಯಣ ಗುರು ಪಠ್ಯಗಳನ್ನು ಕೈಬಿಟ್ಟಿರುವುದಕ್ಕೆ ಸಾಕ್ಷ ತೋರಿಸಲಿ ಎಂದು ಸವಾಲು ಹಾಕಿದ ಪ್ರತಾಪ್ ಸಿಂಹ, ನಾರಾಯಣ ಗುರುಗಳ ಪಠ್ಯವನ್ನು ಸಮಾಜದಿಂದ ಕನ್ನಡ ವಿಷಯಕ್ಕೆ ವರ್ಗಾಯಿಸಲಾಗಿದೆ. ಏಳನೇ ತರಗತಿ ಪಠ್ಯದಲ್ಲೂ ನಾರಾಯಣ ಗುರುಗಳ ಪಾಠ ಇದೆ ಎಂದರು.

ನಾಡಗೀತೆಗೆ ಅವಮಾನ ಮಾಡಿರುವ ಸಂದೇಶವನ್ನು ರೋಹಿತ್ ಚಕ್ರತೀರ್ಥ ಬರೆದಿದ್ದಲ್ಲ. ವಾಟ್ಸ್‌ ಆ್ಯಪ್‌ಗೆ ಬಂದ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿಯೇ ರೋಹಿತ್ ಚಕ್ರತೀರ್ಥ ವಿರುದ್ಧದ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಕೂಡ ಹಾಕಲಾಗಿದೆ. ಅನಗತ್ಯವಾಗಿ ಅವರನ್ನು ತುಳಿಯುವ, ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿಗೆ ಗೌರವ ಕೊಡಿ. ದೇಶ, ಸಂವಿಧಾನಕ್ಕಿಂತ ಧರ್ಮ ದೊಡ್ಡದು ಎಂದರೆ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸೋನಿಯಾ ಮೂಲ ಹುಡುಕಲಿ:

ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ಸೋನಿಯಾ ಗಾಂಧಿ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿದ್ದರು. ಕಾಂಗ್ರೆಸ್‌ಗೆ ಹೋದ ಬಳಿಕ ಮಹಾತಾಯಿ ಎನ್ನುತ್ತಿದ್ದಾರೆ. ಆರ್‌ಎಸ್‌ಎಸ್ ಮೂಲ ಹುಡುಕುವ ಸಿದ್ದರಾಮಯ್ಯ ಸೋನಿಯಾ ಗಾಂಧಿ ಮೂಲವನ್ನು ಹುಡುಕಲಿ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.