ADVERTISEMENT

ಮುಂಗಾರು ಎದುರಿಸಲು ಸನ್ನದ್ಧರಾಗಿ: ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ

ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 2:23 IST
Last Updated 1 ಜೂನ್ 2021, 2:23 IST
ಜಿ. ಜಗದೀಶ್‌
ಜಿ. ಜಗದೀಶ್‌   

ಉಡುಪಿ: ಜಿಲ್ಲೆಗೆ ಇನ್ನು 2–3 ದಿನಗಳಲ್ಲಿ ಮುಂಗಾರು ಪ್ರವೇಶವಾಗುವ ಸಂಭವವಿದ್ದು, ಮಳೆಗಾಲದಲ್ಲಿ ಸಂಭವಿಸಬಹುದಾದ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಮರ್ಪಕವಾಗಿ ನಿರ್ವಹಿಸಲು ಸನ್ನದ್ಧವಾಗಿರಬೇಕು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೊ ಸಂವಾದದ ಮೂಲಕ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ, ರಾಜಕಾಲುವೆಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು. ಚರಂಡಿ ಮತ್ತು ರಾಜಕಾಲುವೆಗಳಿಂದ ಮೇಲೆತ್ತಿದ್ದ ಮಣ್ಣನ್ನು ಸೂಕ್ತ ರೀತಿಯಲ್ಲಿ ಬೇರೆಡೆಯಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.

ಎಲ್ಲ ಗ್ರಾಮಗಳಲ್ಲಿ 24x7 ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಸಿದ್ಧವಾಗಿಟ್ಟುಕೊಳ್ಳುಬೇಕು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ದಿನವಿಡೀ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಮೀನುಗಾರಿಕೆಗೆ ಸೋಮವಾರ ಕೊನೆಯ ದಿನವಾಗಿದ್ದು, ನಿಗದಿತ ದಿನಾಂಕದ ನಂತರ ಬಂದರಿನಲ್ಲಿ ಮೀನುಗಾರಿಕೆ ನಡೆಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಹಾಗೂ ಮೀನುಗಾರಿಕಾ ಆದೇಶ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸುವಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಂದಾಪುರ ಫ್ಲೈ ಓವರ್ ಕೆಳಗೆ ನೀರು ನಿಲ್ಲದ ಹಾಗೆ ತಕ್ಷಣ ಕ್ರಮಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಸಾರ್ವಜನಿಕರನ್ನು ಸ್ಥಳಾಂತರಿಸಲು ಅಗತ್ಯವಿರುವ ದೋಣಿಗಳು, ಮುಳುಗು ತಜ್ಞರು ಮತ್ತು ಪರಿಣಿತ ಈಜುಗಾರರ ಪಟ್ಟಿ ಸಿದ್ಧಪಡಿಸಿಟ್ಟುಕೊಳ್ಳಬೇಕು. ಶಾಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕರಾವಳಿ ಕಾವಲು ಪಡೆಯಿಂದ ಪ್ರಾಕೃತಿಕ ವಿಕೋಪ ತಡೆಯಲು ತರಬೇತುಗೊಂಡ ತಂಡ ಇದ್ದು, ಬೋಟ್‌ಗಳು ಸನ್ನದ್ಧವಾಗಿವೆ ಎಂದು ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ತಿಳಿಸಿದರು. ಪೊಲೀಸ್ ಇಲಾಖೆ ವತಿಯಿಂದ ಪ್ರಾಕೃತಿಕ ವಿಕೋಪ ತಡೆಗೆ ತರಬೇತುಗೊಂಡ 10 ಪೋಲಿಸ್ ತಂಡಗಳು ಇದ್ದು, ಯಾವುದೇ ಸಂದರ್ಭದಲ್ಲೂ ಲಭ್ಯ ಇರುತ್ತದೆ ಎಎಸ್ಪಿ ಕುಮಾರಚಂದ್ರ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲೆಯ ಎಲ್ಲ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.