ADVERTISEMENT

‘ಸರ್ಕಾರದಿಂದ ಮುದ್ರಣ ಕ್ಷೇತ್ರದ ನಿರ್ಲಕ್ಷ್ಯ’

ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್‌ನಲ್ಲಿ ಅಖಿಲ ಭಾರತ ಪ್ರಿಂಟಿಂಗ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:19 IST
Last Updated 13 ಡಿಸೆಂಬರ್ 2025, 4:19 IST
ಅಖಿಲ ಭಾರತ ಪ್ರಿಂಟಿಂಗ್‌ ಸಮಾವೇಶ ಉದ್ಘಾಟನೆಗೊಂಡಿತು
ಅಖಿಲ ಭಾರತ ಪ್ರಿಂಟಿಂಗ್‌ ಸಮಾವೇಶ ಉದ್ಘಾಟನೆಗೊಂಡಿತು   

ಉಡುಪಿ: ಮುದ್ರಣಾಲಯಗಳ ಕಾಗದ ಹಾಗೂ ಕಚ್ಚಾ ವಸ್ತುಗಳ ಮೇಲೆ ಶೇ 5 ರಿಂದ18ಕ್ಕೆ ಏರಿಸಿರುವ ಜಿಎಸ್‌ಟಿಯನ್ನು ಇಳಿಸುವಂತೆ ಒತ್ತಾಯಿಸಲು ಪ್ರಧಾನಿ ಅವರನ್ನು ಮುದ್ರಣ ಒಕ್ಕೂಟದ ಪ್ರಮುಖರು  ಭೇಟಿಯಾಗಲಿದ್ದಾರೆ ಎಂದು ಬೆಂಗಳೂರಿನ ಪ್ರಿಂಟೆಕ್ ಪಾರ್ಕ್ ಅಧ್ಯಕ್ಷ ಸಿ.ಆರ್. ಜನಾರ್ದನ ಹೇಳಿದರು.

ಉಡುಪಿ ಜಿಲ್ಲಾ ಮುದ್ರಣ ಮಾಲಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಪ್ರಿಂಟಿಂಗ್ ಅಸೋಸಿಯೇಶನ್ ಬೆಂಗಳೂರು, ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್, ಮಣಿಪಾಲ ಸ್ಕಿಲ್‌ ಡೆವಲೆಪ್‌ಮೆಂಟ್ ಸೆಂಟರ್ ಸಹಕಾರದೊಂದಿಗೆ ಡಾ. ಟಿಎಂಎ ಪೈ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಪ್ರಿಂಟಿಂಗ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಎಸ್‌ಟಿ ಬಗ್ಗೆ ಈಗಾಗಲೇ ರಾಜ್ಯ ಮುದ್ರಣ ಒಕ್ಕೂಟದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಲಾಗಿದೆ. ದೇಶದಲ್ಲಿ ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡುವ ಸಣ್ಣಕೈಗಾರಿಕೆಗಳಾದ ಮುದ್ರಣ ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ತೊಂದರೆ ನೀಡುತ್ತಿದೆ ಎಂದರು.

ADVERTISEMENT

ಮುದ್ರಣಕಾರರಿಗೆ ಸರ್ಕಾರ ಯಾವುದೇ ರೀತಿಯ ಪ್ರೋತ್ಸಾಹ ನೀಡುತಿಲ್ಲ. ಮುದ್ರಣ ಕ್ಷೇತ್ರಕ್ಕೆ ನೀಡುತಿದ್ದ ಪ್ರತಿಷ್ಠಿತ ಪ್ರಶಸ್ತಿಯನ್ನೂ ಸರ್ಕಾರ ನಿಲ್ಲಿಸಿದೆ. ಮುದ್ರಣ ಒಕ್ಕೂಟದ ಮೂಲಕ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ನೀಡುವ ಮೂಲಕ ಮುದ್ರಣಕಾರರನ್ನು ಪ್ರೋತ್ಸಾಹಿಸಲಿದ್ದೇವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮುದ್ರಣ ಅಸೋಸಿಯೇಶನ್ ಅಧ್ಯಕ್ಷ ಬಿ.ಅರ್.ಅಶೋಕ್ ಕುಮಾರ್ ಮಾತನಾಡಿ, ಮುದ್ರಣ ಕ್ಷೇತ್ರದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅಸೋಸಿಯೇಶನ್  ಶ್ರಮಿಸುತಿದ್ದು, ಈ ನಿಟ್ಟಿನಲ್ಲಿ ಸಮಾವೇಶ ಮಾಡಲಾಗುತ್ತಿದೆ ಎಂದರು.

ಎಐಎಫ್‌ಎಂಪಿ ದಕ್ಷಿಣ ಭಾರತ ಉಪಾಧ್ಯಕ್ಷ ಮುಜೀಬ್ ಕೆ.ಎ. ಮಾತನಾಡಿ, ಮುದ್ರಣಾಲಯಗಳು ಇಂದು ಅತೀ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದು, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವ್ಯವಹಾರದಲ್ಲಿ ಬದಲಾವಣೆ ಮಾಡುವ ಮೂಲಕ ಮುದ್ರಣ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದರು.

ಮಣಿಪಾಲ ಎಂಎಸ್‌ಡಿಸಿ ಅಧ್ಯಕ್ಷ ಸುರ್ಜಿತ್ ಸಿಂಗ್ ಪಾಬ್ಲಾ, ಎಐಎಫ್‌ಎಂಪಿ ಉಪಾಧ್ಯಕ್ಷ ಪಿ.ವಿ. ಸತೀಶ್ ಕುಮಾರ್, ಉಡುಪಿ ಯುಡಿಎ ಅಧ್ಯಕ್ಷ ದಿನಕರ್ ಹೇರೂರು, ಡಾ.ಟಿಎಂಎ ಪೈ ಪಾಲಟೆಕ್ನಿಕ್ ಮುಖ್ಯಸ್ಥೆ ರಜನಿ, ಪ್ರಕಾಶ್ ಬಾಬು, ಉಡುಪಿ ಜಿಲ್ಲಾ ಮುದ್ರಣ ಮಾಲಕರ ಸಂಘದ ಅಧ್ಯಕ್ಷ ಸತೀಶ್ ನಾಯಕ್, ಮುದ್ರಣ ಸಮನ್ವಯಕಾರ ಅಶೋಕ್ ಶೆಟ್ಟಿ, ಎ.ಎಂ. ಪ್ರಕಾಶ್, ಸತೀಶ್ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಪೈ, ಉಡುಪಿ ಜಿಲ್ಲಾ ಮುದ್ರಣ ಮಾಲಕರ ಸಂಘದ ಸ್ಥಾಪಕ ಕಾರ್ಯದರ್ಶಿ ಯು.ಮೋಹನ್ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು.

ಮಹೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ್ ಶೆಟ್ಟಿ ಪ್ರಸ್ತಾವಿಸಿದರು. ಅಂಶಮನ್ ಜೋಷಿ ವಂದಿಸಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.