ADVERTISEMENT

ಉಡುಪಿ: ಕೇಂದ್ರ ಬಜೆಟ್‌ಗೆ ಸಿಹಿ ಕಹಿ ಪ್ರತಿಕ್ರಿಯೆ

ತೆರಿಗೆ ಹೆಚ್ಚಳಕ್ಕೆ ವಿರೋಧ; ಕೃಷಿ ಕ್ಷೇತ್ರಕ್ಕೆ ಒತ್ತು ಸ್ವಾಗತ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 13:27 IST
Last Updated 1 ಫೆಬ್ರುವರಿ 2021, 13:27 IST
ಬಾಲಕೃಷ್ಣ ಶೆಟ್ಟಿ
ಬಾಲಕೃಷ್ಣ ಶೆಟ್ಟಿ   

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ ಕುರಿತು ರಾಜಕೀಯ ಮುಖಂಡರು, ಆರ್ಥಿಕ ತಜ್ಞರು, ಜನ ಸಾಮಾನ್ಯರು ಅಭಿಪ್ರಾಯ ಮಂಡಿಸಿದ್ದಾರೆ. ಕೆಲವರಿಗೆ ಬಜೆಟ್‌ ಸಿಹಿಯಾಗಿದ್ದರೆ, ಕೆಲವರಿಗೆ ಕಹಿಯಾಗಿದೆ.

ಜನ ವಿರೋಧಿ ಬಜೆಟ್: ಸಿಪಿಐಎಂ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಜನರಿಗೆ ಮಾರಕವಾಗಿದ್ದು, ಇನ್ನಷ್ಟು ಹೊರೆ ಹೆಚ್ಚಲಿದೆ. ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ ಕ್ರಮವಾಗಿ ₹ 2.30 ಹಾಗೂ ₹4 ಹೆಚ್ಚಳವಾಗುತ್ತಿರುವುದು ದೊಡ್ಡ ಹೊರೆ. ವಾಹನ ಬಿಡಿ ಭಾಗಗಳು, ಬೇಳೆ ಕಾಳುಗಳ ಬೆಲೆಯೂ ಹೆಚ್ಚಾಗಲಿದೆ. ಕಾರ್ಪೊರೆಟ್ ಕಂಪೆನಿಗಳಿಗೆ ಅನುಕೂಲವಾಗುವಂತೆ ಬ್ಯಾಂಕ್‌, ವಿಮಾ ಕ್ಷೇತ್ರ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಕ್ಕೆ ಒತ್ತು ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಪೂರ್ತಿಯಾಗಿ ಖಾಸಗಿಯವರಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಚುನಾವಣೆ ದೃಷ್ಟಿಯಲ್ಲಿ ಬಿಜೆಪಿ ಅಸ್ತಿತ್ವ ಇಲ್ಲದ ಪಶ್ಚಿಮ ಬಂಗಾಳಕ್ಕೆ ₹ 25,000 ಕೋಟಿ ಘೋಷಿಸುವ ಮೂಲಕ ಇತರ ರಾಜ್ಯಗಳಿಗೆ ಅನ್ಯಾಯ ಮಾಡಿದೆ. ಇದು ಜನ ವಿರೋಧಿ ಬಜೆಟ್, ಅಂಬಾನಿ, ಅದಾನಿಗಳ ಬಜೆಟ್‌.
– ಬಾಲಕೃಷ್ಣ ಶೆಟ್ಟಿ, ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ

ADVERTISEMENT

**
ಹಿತಾನುಭವದ ಬಜೆಟ್‌
75 ವರ್ಷ ದಾಟಿದವರಿಗೆ ಆದಾಯ ತೆರಿಗೆ ಸಲ್ಲಿಕೆ ರಿಯಾಯತಿ, ಚಿನ್ನ ಹಾಗೂ ಬೆಳ್ಳಿಗೆ ಕಸ್ಟಮ್ ಸುಂಕ ಇಳಿಕೆ, ಕೃಷಿ ಸಾಲ ಗುರಿ ₹ 16.5 ಲಕ್ಷ ಕೋಟಿಗೆ ಏರಿಕೆ, 35000 ಕೋಟಿ ಹಣ ಕೊರೊನಾ ಲಸಿಕೆಗೆ ಮೀಸಲು ಜನರ ಆರೋಗ್ಯದ ಬಗ್ಗೆ ಸರ್ಕಾರ ಗಮನ ಹರಿಸಿರುವುದು ಕಾಣುತ್ತದೆ. ತಾಮ್ರ, ಸ್ಟೀಲ್, ಪೈಂಟ್‍ಗಳ ಬೆಲೆ ಇಳಿಸಿರುವುದು ಗೃಹ ನಿರ್ಮಾಣ ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗಿದೆ. ಮೀನುಗಾರಿಕೆಗೆ ₹ 2000 ಕೋಟಿ ನೀಡಿರುವುದು ಸ್ವಾಗತಾರ್ಹ. ಕೃಷಿ ಉತ್ಪನ್ನ ಖರೀದಿಗೆ 1.72 ಲಕ್ಷ ಕೋಟಿ ನೀಡಿರುವುದು ಕೃಷಿಗೆ ಪೂರಕ. ಆತ್ಮನಿರ್ಭರ ಯೋಜನೆಗೆ ₹ 64,180 ಕೋಟಿ ನೀಡಿರುವುದು ಸಣ್ಣ ಉದ್ದಿಮೆಗಳಿಗೆ ಉತ್ತೇಜನ ಸಿಗಲಿದೆ.‌
–ಉದಯ್‌ ಕುಮಾರ್ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ

**
ಕರ್ನಾಟಕ ಕಡೆಗಣನೆ: ಕಾಂಗ್ರೆಸ್‌
ಮೂಲಸೌಕರ್ಯಗಳಿಗೆ ಅನುದಾನ ನೀಡಲಾಗಿಲ್ಲ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಬಂಡವಾಳ ಹಿಂತೆಗೆತದೊಂದಿಗೆ ಖಾಸಗೀಕರಣಕ್ಕೆ ಒತ್ತು, ಸಣ್ಣ ಉದ್ಯಮಗಳ ಪುನಶ್ಚೇತನಕ್ಕೆ ಯಾವುದೇ ಕಾರ್ಯಕ್ರಮ ಇಲ್ಲ. ರೈತರಿಗೆ ಹೊಸ ಯೋಜನೆಗಳಿಲ್ಲ. ಕರ್ನಾಟಕವನ್ನು ಕಡೆಗಣಿಸಿ ಚುನಾವಣೆಯ ದೃಷ್ಟಿಯಲ್ಲಿ ಬೇರೆ ರಾಜ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಉತ್ಪಾದನಾ ಕ್ಷೇತ್ರಕ್ಕೆ ಒತ್ತು ನೀಡದೆ ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್‍ಗಳಿಗೆ ಕೃಷಿ ಸೆಸ್ ಹಾಕಿದ್ದು, ಜನ ಸಾಮಾನ್ಯರಿಗೆ ಹೊರಯಾಗಿದೆ. ಕೋವಿಡ್-19 ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಬಜೆಟ್‍ನಲ್ಲಿ ಯಾವುದೇ ಯೋಜನೆ ರೂಪಿಸಿಲ್ಲ.
–ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ

**
ದುಬಾರಿ ದುನಿಯಾಕ್ಕೆ ಪೂರಕ ಬಜೆಟ್‌
ಬಜೆಟ್‍ನಲ್ಲಿ ಪೆಟ್ರೊಲ್, ಡೀಸೆಲ್ ಮೇಲೆ ಕೃಷಿ ಸೆಸ್ ಹೇರಿ ಗ್ರಾಹಕರಿಗೆ ಇನ್ನಷ್ಟು ಹೊರೆಯಾಗಲಿದೆ. ದೇಶೀಯ ಉತ್ಪಾದನೆಗೆ ಒತ್ತು ನೀಡದೆ ಆಮದು ವಸ್ತುಗಳಿಗೆ ತೆರಿಗೆ ಹೆಚ್ಚು ಮಾಡಿ ಜನರಿಗೆ ಹೆಚ್ಚಿನ ಹೊರೆ ನೀಡಲಾಗಿದೆ. ಆದಾಯ ತೆರಿಗೆ ವಿನಾಯಿತಿಯಲ್ಲಿ ಬದಲಾವಣೆ ಮಾಡದೆ 75 ವರ್ಷ ದಾಟಿದ ನಾಗರಿಕರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ವಯಸ್ಸನ್ನು 65 ವರ್ಷಕ್ಕೆ ಇಳಿಸಬೇಕಾಗಿತ್ತು. ಆರ್ಥಿಕ ಸಂಕಷ್ಟದಲ್ಲಿ ಜನರ ಮೇಲೆಯೇ ಮತ್ತಷ್ಟು ಹೊರೆಯನ್ನು ಹೊರೆಸಿದೆ. ಅಚ್ಚೇ ದಿನಗಳು ಗಗನ ಕುಸುಮವಾಗಿಯೇ ಉಳಿದಿವೆ.
–ಭಾಸ್ಕರ್ ರಾವ್ ಕಿದಿಯೂರು, ಜಿಲ್ಲಾ ಕಾಂಗ್ರೆಸ್‌ ವಕ್ತಾರ

**
ನಿರಾಶಾದಾಯಕ ಬಜೆಟ್‌: ಜೆಡಿಎಸ್‌
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್‌ ಹೆಚ್ಚಳದಿದಮ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಯೂರಿಯಾ, ಡಿಎಪಿ ಗೊಬ್ಬರಕ್ಕೆ, ಸೆಸ್ ಹಾಕಿ ಕೃಷಿ ವಲಯಕ್ಕೆ, ವಿಶೇಷವಾಗಿ ಜನಸಾಮಾನ್ಯರಿಗೆ ನಿರಾಶೆ ಉಂಟುಮಾಡಿದ್ದಾರೆ. ದೇಶದ ಎರಡನೇ ದೊಡ್ಡ ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕವಾಗಿದ್ದರೂ ರಾಜ್ಯಕ್ಕೆ ದೊಡ್ಡ ಪ್ಯಾಕೇಜ್‌ ನೀಡಿಲ್ಲ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಇದೊಂದು ನಿರಾಶಾದಾಯಕ ಬಜೆಟ್. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆಗಳು ವಿರಳ. ನಿರುದ್ಯೋಗ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು.
–ಯೋಗೀಶ್ ವಿ.ಶೆಟ್ಟಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ

**
‘ಪಶು ಸಂಗೋಪನೆ, ಮೀನುಗಾರಿಕೆಗೆ ಒತ್ತು’
ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಅಭಿವೃದ್ಧಿಗೆ ₹ 40,000 ಕೋಟಿ ಮೀಸಲಿರಿಸುವ ಮೂಲಕ ಸಚಿವೆ ನಿರ್ಮಲ ಸೀತಾರಾಮನ್ ಮೀನುಗಾರಿಕೆಗೆ ಪೂರಕವಾಗಿ ಬಜೆಟ್‌ ಮಂಡಿಸಿದ್ದಾರೆ. ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕೆ 1,500 ಕೋಟಿ, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹ 3000 ಕೋಟಿ, ಮಹಿಳೆಯರಿಗೆ 24 ಗಂಟೆಗಳ ಕಾಲ ಕೆಲಸಕ್ಕೆ ಅವಕಾಶ ಹಾಗೂ ಎಲ್ಲಾ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆಯ ಅನ್ವಯದ ಮೂಲಕ ಬಜೆಟ್ ದೇಶದ ಸರ್ವರಿಗೂ ಆಶಾದಾಯಕವಾಗಿ ಮೂಡಿಬಂದಿದೆ.
–ಯಶ್ ಪಾಲ್ ಸುವರ್ಣ, ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ

**
ಜನಪ್ರಿಯವಲ್ಲ; ಜನಪರ ಬಜೆಟ್‌
ಕೇಂದ್ರ ಬಜೆಟ್ ಜನಪರವಾಗಿದ್ದು,ಜನಪ್ರಿಯ ಬಜೆಟ್ ಅಲ್ಲ. ಇದು ಕೊರೊನೋತ್ತರ ಬಜೆಟ್ ಆಗಿರುವುದರಿಂದ ಈ ಬಾರಿಯ ಬಜೆಟ್ ಅನ್ನು ಹಿಂದಿನ ಬಜೆಟ್‌ನಂತೆ ವಿಶ್ಲೇಷಣೆ ಮಾಡುವುದು ಸರಿಯಲ್ಲ. ಆರ್ಥಿಕವಾಗಿ ಆರ್ಥಿಕತೆ ಸೊರಗಿರುವ ಸಂದರ್ಭ ತೆರಿಗೆ ವಿನಾಯಿತಿ ನೀಡುವುದು ಸುಲಭವಲ್ಲ. ದೇಶದ ಅಭಿವೃದ್ಧಿಗೆ ಹಣ ಸಂಗ್ರಹಿಸಬೇಕಾದ, ಉದ್ಯೋಗ ಸೃಷ್ಟಿಸಬೇಕಾದ ಅನಿವಾರ್ಯತೆ ಇದೆ. ಜನರಿಗೆ ಹೆಚ್ಚು ಹೊರೆಯಾಗದಂತೆ ತೆರಿಗೆ ಹಾಕಲಾಗಿದೆ. ಕೃಷಿ ಸೆಸ್ ಹಾಕಿರುವುದರ ಕುರಿತು ಜನರಿಗೆ ಮನವರಿಕೆ ಮಾಡಬೇಕು. ಕೃಷಿ ಸೆಸ್‌ ಆಮದು ವಸ್ತುಗಳಿಗೆ ಮಾತ್ರ. ಇದರಿಂದಾಗಿ ದೇಶಿಯ ಉತ್ಪಾದನೆಗೆ ಹೆಚ್ಚು ಸಹಕಾರಿಯಾಗಲಿದೆ. ಪೆಟ್ರೋಲಿಯಂ ದರ ಏರದಂತೆ ನೇೂಡಿಕೊಳ್ಳ ಬೇಕಾಗಿದೆ.
–ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.