ADVERTISEMENT

ಶಾಲೆಗಳ ಉಳಿಸಿ, ಬೆಳೆಸಿ: ರಾಧನಾಯಕ್ ಸರ್ಕಾರಿ ಪ್ರೌಢಶಾಲೆಗೆ ಬೆಳ್ಳಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:56 IST
Last Updated 2 ಜನವರಿ 2026, 6:56 IST
ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆ ಅಮೃತನಗರದಲ್ಲಿರುವ ರಾಧನಾಯಕ್ ಸರ್ಕಾರಿ ಪ್ರೌಢಶಾಲೆಯ ‘ಬೆಳ್ಳಿ ಹಬ್ಬ’ದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆ ಅಮೃತನಗರದಲ್ಲಿರುವ ರಾಧನಾಯಕ್ ಸರ್ಕಾರಿ ಪ್ರೌಢಶಾಲೆಯ ‘ಬೆಳ್ಳಿ ಹಬ್ಬ’ದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು   

ಕಾರ್ಕಳ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಹಾಗೂ ಉಚಿತ ಶಿಕ್ಷಣದ ಮೂಲಕ ಬದುಕಿಗೆ ಬಲವಾದ ವೇದಿಕೆ ಕಲ್ಪಿಸಬೇಕು ಎಂಬ ಕನಸು ನನ್ನದಾಗಿತ್ತು ಎಂದು ತಾಲ್ಲೂಕಿನ ಎಣ್ಣೆಹೊಳೆ ರಾಧಾ ನಾಯಕ್ ಸರ್ಕಾರಿ ಪ್ರೌಢಶಾಲೆಯ ಗೌರವಾಧ್ಯಕ್ಷ ದಯಾನಾಯಕ್ ಹೇಳಿದರು.

ತಾಲ್ಲೂಕಿನ ಎಣ್ಣೆಹೊಳೆ ಅಮೃತನಗರದಲ್ಲಿರುವ ರಾಧನಾಯಕ್ ಸರ್ಕಾರಿ ಪ್ರೌಢಶಾಲೆಯ 25ನೇ ವರ್ಷದ ‘ಬೆಳ್ಳಿ ಹಬ್ಬ’ದ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ

ಒಂದು ಕಾಲದಲ್ಲಿ ಊರಿನ ಜನರು ಹಾರೆ, ಪಿಕಾಸಿ ಹಿಡಿದು ದುಡಿಮೆ ಮಾಡಲು ಬರುತ್ತಿದ್ದರು. ಆ ಜನರ ಶ್ರಮವೇ ನನ್ನ ಬದುಕಿಗೆ ಪ್ರೇರಣೆಯಾಯಿತು. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಯ ನನ್ನಲ್ಲಿ ಸದಾ ಇತ್ತು. ಶಿಕ್ಷಣವನ್ನು ಖಾಸಗೀಕರಣಗೊಳಿಸದೆ, ಸರ್ಕಾರಿ ಶಾಲೆಗಳ ಮೂಲಕವೇ ಸಮಾನ ಅವಕಾಶ ಕಲ್ಪಿಸಬೇಕು. ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ADVERTISEMENT

ಶಾಸಕ‌ ವಿ.ಸುನಿಲ್ ಕುಮಾರ್ ಮಾತನಾಡಿ, ಭವಿಷ್ಯವನ್ನು ರೂಪಿಸುವ ವ್ಯಕ್ತಿಯೇ ಸಮಾಜಕ್ಕೆ ಮಾದರಿ. ದಯಾನಾಯಕ್ ಅವರು ಸಾರ್ವಜನಿಕ ಅಭಿನಂದನೆಗೆ ಸಂಪೂರ್ಣ ಅರ್ಹರು. ಉಚಿತ ಶಿಕ್ಷಣ ನೀಡುವ ಮೂಲಕ ಅನೇಕ ಮಕ್ಕಳ ಬದುಕಿಗೆ ಬೆಳಕು ನೀಡಿದ್ದಾರೆ. ಅವರ ನಿಷ್ಠೆ, ಪ್ರಾಮಾಣಿಕತೆ ಮತ್ತು ಗಟ್ಟಿತನದ ಮೂಲಕ ದೇಶದಾದ್ಯಂತ ಪರಿಚಿತರಾಗಿದ್ದಾರೆ. ಒಂದು ಕಾಲಘಟ್ಟದಲ್ಲಿ ಭೂಗತ ಜಗತ್ತು ದೇಶಕ್ಕೆ ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲೂ, ಸಕಾರಾತ್ಮಕ ಸಮಾಜ ನಿರ್ಮಾಣದಲ್ಲಿ ದಯಾನಾಯಕ್ ಅವರ ಪಾತ್ರ ಮಹತ್ವದಾಗಿದೆ. ಮುಂಬೈನಲ್ಲಿ ಉದ್ಯೋಗದಲ್ಲಿದ್ದರೂ ಸ್ವಗ್ರಾಮವನ್ನು ಮರೆಯದೆ, ಶಾಲೆ ಕಟ್ಟಿಸಿ ಸರ್ಕಾರ ಮಾಡಬೇಕಾದ ಕೆಲಸವನ್ನು ತಾವೇ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಂದು ರಾಜ್ಯದಲ್ಲಿ ಹಲವೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಬಂದಿವೆ. ಆದರೆ ಇಡೀ ರಾಜ್ಯದಲ್ಲಿ ಇಂತಹ ಸುಂದರ ಹಾಗೂ ಮಾದರಿ ಸರ್ಕಾರಿ ಶಾಲೆ ಅಪರೂಪ. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸುವ ಗುರಿ ನಮ್ಮದು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎಫ್.ಗಪೂರ್ ಮಾತನಾಡಿ ಈ ಶಾಲೆಯ ಕಾರಣದಿಂದ ಊರಿಗೆ ರಾಜ್ಯಮಟ್ಟದಲ್ಲಿ ಹೆಸರು ಬಂದಿದೆ. ಇಲ್ಲಿ ಶಿಕ್ಷಕರ ಶಿಸ್ತು, ಗುಣಮಟ್ಟದ ಶಿಕ್ಷಣ, ಶಾಂತಚಿತ್ತದ ಸೇವೆ ಹಾಗೂ ಪೋಷಕರೊಡನೆ ಹೊಂದಾಣಿಕೆಯ ಕಾರ್ಯ ಶ್ಲಾಘನೀಯ. ಕಳೆದ 25 ವರ್ಷಗಳಿಂದ ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಬೆಳಕು ನೀಡುವ ಮಹತ್ವದ ಶಿಕ್ಷಣ ಕೇಂದ್ರವಾಗಿ ಈ ಶಾಲೆ ಬೆಳೆದಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ವಿದ್ಯಾದಾನವೇ ಶ್ರೇಷ್ಠ ದಾನ. ಅದರಲ್ಲಿ 25 ವರ್ಷಗಳ ಸೇವೆ ಪೂರ್ಣಗೊಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ಶಾಲೆ ಅನೇಕ ಮಕ್ಕಳ ಬದುಕನ್ನು ರೂಪಿಸಿದೆ ಎಂದರು.

ಮರ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ನಾಯಕ್ ಮಾತನಾಡಿದರು.

ಉದ್ಯಮಿ ರಾಜೇಂದ್ರ ಶೆಟ್ಟಿ, ಅಂಡಾರು ಮಹಾವೀರ ಹೆಗ್ಡೆ, ಸಾಧು ಶೆಟ್ಟಿ, ವೇದಮೂರ್ತಿ ಅರುಣ್ ಭಟ್, ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಶೆಟ್ಟಿ, ಶಾರದಾ, ರಾಧಾ ನಾಯಕ್ ಎಜುಕೇಶನ್ ಟ್ರಸ್ಟ್‌ನ ಶಿವಕುಮಾರ್ ಕುರ್ಪಾಡಿಗುತ್ತು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ, ಮುಖ್ಯಶಿಕ್ಷಕ ರಾಮದಾಸ ನಾಯಕ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸದಾನಂದ ಸಾಲ್ಯಾನ್ ಕೆರುವಾಶೆ, ಪ್ರೀತಂ ನಾಯಕ್ ಉಪಸ್ಥಿತರಿದ್ದರು.

ದಯಾನಾಯಕ್ ಅವರನ್ನು ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ದಾನಿಗಳಿಂದ ಸನ್ಮಾನಿಸಲಾಯಿತು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ‘ಗುರುವಂದನಾ’ ಕಾರ್ಯಕ್ರಮ ನಡೆಯಿತು. ರಾಜರಾಮ ಸೇರ್ವೆಗಾರ್ ಸ್ವಾಗತಿಸಿದರು. ಪ್ರಕಾಶ್ ಪೂಜಾರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.