ADVERTISEMENT

ಬೆಂಗಳೂರು–ಕಾರವಾರ ವಿಸ್ಟಾಡೋಮ್‌ ರೈಲು ಪುನಾರಂಭ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 16:56 IST
Last Updated 13 ಆಗಸ್ಟ್ 2021, 16:56 IST
 ವಿಸ್ಟಾಡೋಮ್‌ ರೈಲು -ಸಾಂದರ್ಭಿಕ ಚಿತ್ರ
ವಿಸ್ಟಾಡೋಮ್‌ ರೈಲು -ಸಾಂದರ್ಭಿಕ ಚಿತ್ರ   

ಉಡುಪಿ: ಕೋವಿಡ್ ನಿಂದಾಗಿ ಭಾಗಶಃ ಸಂಚಾರವನ್ನು ಮೊಟಕುಗೊಳಿಸಿದ್ದ ಬೆಂಗಳೂರು-ಕಾರವಾರ (06211/06212) ರೈಲು ಆ.16ರಿಂದ ಹೊಸ ವಿಸ್ಟಾಡೋಮ್ ಕೋಚ್‌ನೊಂದಿಗೆ ಮತ್ತೆ ಸಂಚರಿಸಲಿದೆ ಎಂದು ಕೊಂಕಣ್‌ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ರೈಲು ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಸಂಚರಿಸುತ್ತಿತ್ತು. ಕಾರವಾರಕ್ಕೆ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ರೈಲು ಸಂಚಾರ ಪುನಾರಂಭವಾಗಿದ್ದು, ಆ.16ರಿಂದ ನ.26ರವರೆಗೆ ರೈಲು ಕಾರವಾರದವರೆಗೂ ಸಂಚರಿಸಲಿದೆ.

06211 ರೈಲು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಯಶವಂತಪುರದಿಂದ ಕಾರವಾರಕ್ಕೆ ಹೊರಡಲಿದ್ದು, 06212 ರೈಲು ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಕಾರವಾರದಿಂದ ಯಶವಂತಪುರಕ್ಕೆ ಹೊರಡಲಿದೆ.

ADVERTISEMENT

ಕಾರವಾರಕ್ಕೆ ರೈಲು ಸಂಚಾರ ಸ್ಥಗಿತವಾದ ಬಳಿಕ ಸ್ಥಳೀಯ ಪ್ರಯಾಣಿಕರು ಹಾಗೂ ಸಾರ್ವಜನಿಕರು ಕಾರವಾರದವರೆಗೆ ರೈಲು ಸಂಚಾರ ಪುನರಾರಂಭಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಒತ್ತಾಯಿಸಿದ್ದರು.

ಈ ಸಂಬಂಧ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಸಚಿವೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವರು ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಪ್ರಕೃತಿಯ ರಮಣೀಯತೆ, ಪಶ್ಚಿಮ ಘಟ್ಟಗಳ ಸೊಬಗಿನ ನೋಟವನ್ನು ವಿಸ್ಟಾಡೋಮ್‌ ಕೋಚ್‌ನಲ್ಲಿ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.